ನವದೆಹಲಿ: ಕ್ರಿಮಿನಲ್‌ ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾದ ರಾಜಕಾರಣಿಗಳಿಗೆ ಚುನಾವಣೆ ಸ್ಪರ್ಧೆಯಿಂದ ಆಜೀವ ನಿಷೇಧ ಹೇರಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ. ಇದರಿಂದಾಗಿ ಕ್ರಿಮಿನಲ್‌ ಆರೋಪ ಎದುರಿಸುತ್ತಿರುವ ರಾಜಕಾರಣಿಗಳಿಗೆ ನಡುಕ ಶುರುವಾಗಿದೆ.

ದೆಹಲಿ ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿಕುಮಾರ್‌ ಅವರು ಈ ಸಂಬಂಧ ಅರ್ಜಿ ಸಲ್ಲಿಸಿದ್ದು, ಅದನ್ನು ಪರಿಶೀಲಿಸುವುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌, ನ್ಯಾಯಮೂರ್ತಿಗಳಾದ ಯು.ಯು. ಲಲಿತ್‌, ಕೆ.ಎಂ. ಜೋಸೆಫ್‌ ಅವರಿದ್ದ ಪೀಠ ಹೇಳಿದೆ. ವಿಚಾರಣೆಯನ್ನು ಡಿ.4ಕ್ಕೆ ಮುಂದೂಡಿದೆ.

ಈಗ ಇರುವ ಕಾನೂನಿನ ಪ್ರಕಾರ, 2 ವರ್ಷಕ್ಕಿಂತ ಅಧಿಕ ಶಿಕ್ಷೆಯಾಗುವ ಕ್ರಿಮಿನಲ್‌ ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾಗುತ್ತಿದ್ದಂತೆ ಜನಪ್ರತಿನಿಧಿ ಅನರ್ಹರಾಗುತ್ತಾರೆ. ಶಿಕ್ಷೆ ಅನುಭವಿಸಿದ ಆರು ವರ್ಷಗಳ ಬಳಿಕವಷ್ಟೇ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ.

ಇದರ ಬದಲಿಗೆ, ಕ್ರಿಮಿನಲ್‌ ಅಪರಾಧ ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾದ ರಾಜಕಾರಣಿಗಳಿಗೆ ಚುನಾವಣೆ ಸ್ಪರ್ಧೆಯಿಂದ ಜೀವಮಾನ ಪರ್ಯಂತ ನಿಷೇಧ ಹೇರಬೇಕು ಎಂದು ಚುನಾವಣಾ ಆಯೋಗ ಸರ್ಕಾರಕ್ಕೆ ಬೇಡಿಕೆ ಇಡುತ್ತಾ ಬಂದಿದೆ. ಈ ನಡುವೆ, ಅಶ್ವಿನಿ ಉಪಾಧ್ಯಾಯ ಅವರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಕ್ರಿಮಿನಲ್‌ ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾದ ಜನಸೇವಕರು ಅಥವಾ ಸರ್ಕಾರಿ ಅಧಿಕಾರಿಗಳಿಗೆ ಆಜೀವ ನಿಷೇಧ ಹೇರಬೇಕು ಎಂದು ಮನವಿ ಮಾಡಿದ್ದಾರೆ.