ಇಂದಿನ ತೀರ್ಪಿನ ಪ್ರಕಾರ ಸೆಪ್ಟಂಬರ್ 21 ರಿಂದ 27 ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ರಾಜ್ಯಕ್ಕೆ ಸೂಚನೆ ನೀಡಿ, ವಿಚಾರಣೆಯನ್ನು ಸೆಪ್ಟಂಬರ್ 28ಕ್ಕೆ ಮುಂದೂಡಿದೆ. ಈ ಮೂಲಕ ಮತ್ತೆ ಕರ್ನಾಟಕ ಮತ್ತೆ 3.8 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕಿದೆ.
ನವದೆಹಲಿ(ಸೆ. 21): ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ರಾಜ್ಯಕ್ಕೆ ಮತ್ತೆ ಮರ್ಮಾಘಾತವಾಗಿದೆ. ಮತ್ತೆ 7 ದಿನಗಳ ಕಾಲ ತಲಾ 6 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ರಾಜ್ಯಕ್ಕೆ ಸೂಚನೆ ನೀಡಿದೆ. ಇಷ್ಟಲ್ಲದೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕರ್ನಾಟಕ ಪರ ವಾದವೇನಿತ್ತು ?
ರಾಜ್ಯದ ಪರ ವಾದಿಸಿದ ಫಾಲಿ ಎಸ್.ನಾರಿಮನ್ ಯಾವುದೇ ಕಾರಣಕ್ಕೂ ಇನ್ನು ಮುಂದೆ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದ್ರು. ಈ ಬಾರಿ ಸಂಕಷ್ಟದ ಜಲವರ್ಷ ಎಂದು ಮೇಲುಸ್ತುವಾರಿ ಸಮಿತಿಯೇ ಹೇಳಿದೆ. ಹೀಗಾಗಿ ಸಂಕಷ್ಟ ಸೂತ್ರವನ್ನು ಪಾಲಿಸಲೂ ಸಾಧ್ಯವಿಲ್ಲ. ಹೀಗಾಗಿ ಯಾವುದೇ ಮಧ್ಯಂತರ ಆದೇಶ ನೀಡಬೇಡಿ. ಪ್ರಕರಣವನ್ನು ಕಾವೇರಿ ಮೇಲುಸ್ತುವಾರಿ ಸಮಿತಿಗೆ ವರ್ಗಾಯಿಸಿ ಅಲ್ಲೇ ತೀರ್ಮಾನ ಕೈಗೊಳ್ಳಲಿ. ನಾವು ಮೇಲುಸ್ತುವಾರಿ ಸಮಿತಿಯಲ್ಲೇ ಮೇಲ್ಮನವಿ ಸಲ್ಲಿಕೆ ಮಾಡುತ್ತೇವೆ, ತಜ್ಞರಿಂದ ಅಲ್ಲೇ ತೀರ್ಮಾನವಾಗಲಿ ಎಂದು ವಾದಿಸಿದ್ರು. ಈ ರೀತಿ ಸತತ 2 ಗಂಟೆಗಳ ಕಾಲ ರಾಜ್ಯದ ಸಮಸ್ಯೆಯನ್ನು ನಾರಿಮನ್ ಎಳೆ ಎಳೆಯಾಗಿ ಬಿಡಿಸಿಟ್ಟರು.
ತಮಿಳುನಾಡು ಪರ ವಾದವೇನಿತ್ತು?
ರಾಜ್ಯದ ಪರ ವಕೀಲರ ವಾದಕ್ಕೆ ತಮಿಳುನಾಡು ಪರ ವಕೀಲರು ಆಕ್ಷೇಪಣೆ ಸಲ್ಲಿಸಿದರು. ನ್ಯಾಯಾಧಿಕರಣದ ಆದೇಶದಂತೆ ತಿಂಗಳವಾರು ಬಾಕಿ ನೀರನ್ನು ಕೂಡಲೇ ಬಿಡುಗಡೆ ಮಾಡಲು ನಿರ್ದೇಶಿಸುವಂತೆ ಮನವಿ ಮಾಡಿದರು. ಮೇಲುಸ್ತುವಾರಿ ಸಮಿತಿ ತೀರ್ಪು ನಮಗೂ ಅಸಮಾಧಾನ ತಂದಿದೆ ಎಂದು ಹೇಳಿದ್ರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ, 4 ವಾರದ ಒಳಗೆ ಕಾವೇರಿ ನದಿ ನೀರು ಹಂಚಿಕೆಗೆ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತು.
ಏನಿದು ನಿರ್ವಹಣಾ ಮಂಡಳಿ ?
ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದ್ರೆ ನೀರಾವರಿ ತಜ್ಞರು ಸೇರಿದಂತೆ ಅಧ್ಯಕ್ಷ, ಸದಸ್ಯರನ್ನು ಕೇಂದ್ರ ಸರ್ಕಾರ ನೇಮಕ ಮಾಡಲಿದೆ. ಕಾವೇರಿ ಕೊಳ್ಳದ ಎಲ್ಲಾ ಜಲಾಶಯ ಮಂಡಳಿ ವ್ಯಾಪ್ತಿಗೆ ಸೇರಲಿದೆ. ನೀರು ಹಂಚಿಕೆ, ಬಿಡುಗಡೆ ಬಗ್ಗೆ ನಿರ್ವಹಣಾ ಮಂಡಳಿಯೇ ತೀರ್ಮಾನ ಕೈಗೊಳ್ಳುತ್ತದೆ. ಕರ್ನಾಟಕ, ತಮಿಳುನಾಡು, ಪುದುಚೇರಿ ಹಾಗೂ ಕೇರಳ ಸೇರಿದಂತೆ 4 ರಾಜ್ಯಗಳ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾದಲ್ಲಿ ತಮಿಳುನಾಡಿಗೆ ಹೆಚ್ಚಿನ ಬಲ ಬಂದಂತೆಯೇ.
ಇಂದಿನ ತೀರ್ಪಿನ ಪ್ರಕಾರ ಸೆಪ್ಟಂಬರ್ 21 ರಿಂದ 27 ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ರಾಜ್ಯಕ್ಕೆ ಸೂಚನೆ ನೀಡಿ, ವಿಚಾರಣೆಯನ್ನು ಸೆಪ್ಟಂಬರ್ 28ಕ್ಕೆ ಮುಂದೂಡಿದೆ. ಈ ಮೂಲಕ ಮತ್ತೆ ಕರ್ನಾಟಕ ಮತ್ತೆ 3.8 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕಿದೆ.
ಈಗಾಗಲೇ ಕೆಆರ್ಎಸ್ ಬರಿದಾಗಿ ನೆಲ ಕಾಣುತ್ತಿದೆ. ಕುಡಿಯೋಕೂ ನೀರು ಇಲ್ಲವಾಗಿದೆ. ಅತ್ತ ಮೆಟ್ಟೂರು ಡ್ಯಾಂನಿಂದ ತಮಿಳುನಾಡು ರೈತರಿಗೆ ಭರಪೂರ ನೀರು ಪೂರೈಕೆಯಾಗುತ್ತಿದೆ.
ಬ್ಯೂರೋ ರಿಪೋರ್ಟ್, ಸುವರ್ಣನ್ಯೂಸ್
