ಸಿನಿಮಾ ಹಾಲ್’ನಲ್ಲಿ ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಲ್ಲಬೇಕು ಎಂದು ಸುಪ್ರೀಂಕೋರ್ಟ್ 2016 ರಲ್ಲಿ ನೀಡಿದ ತೀರ್ಪನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡುವುದಾಗಿ ಮುಖ್ಯ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ.
ನವದೆಹಲಿ (ಅ.23): ಸಿನಿಮಾ ಹಾಲ್’ನಲ್ಲಿ ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಲ್ಲಬೇಕು ಎಂದು ಸುಪ್ರೀಂಕೋರ್ಟ್ 2016 ರಲ್ಲಿ ನೀಡಿದ ತೀರ್ಪನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡುವುದಾಗಿ ಮುಖ್ಯ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ.
ಎಲ್ಲಾ ಸಮಯದಲ್ಲೂ ಎಲ್ಲರೂ ದೇಶಭಕ್ತಿಯನ್ನು ತೋಳಿನಲ್ಲಿಯೇ ಇಟ್ಟುಕೊಳ್ಳಲು ಸಾಧ್ಯವಿಲ್ಲ. ನೈತಿಕ ಪೊಲೀಸ್’ಗಿರಿಯನ್ನು ನಿಲ್ಲಿಸುವ ಅಗತ್ಯವಿದೆ. ಸಿನಿಮಾ ಹಾಲ್’ನಲ್ಲಿ ರಾಷ್ಟ್ರಗೀತೆಯನ್ನು ಹಾಡದೇ ಇದ್ದ ಮಾತ್ರಕ್ಕೆ ಯಾರೂ ಕೂಡಾ ದೇಶ ವಿರೋಧಿಯಾಗಿ ಬಿಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ರಾಷ್ಟ್ರಗೀತೆ ಮೊಳಗುವಾಗ ಜನರು ಎದ್ದು ನಿಲ್ಲಬೇಕು ಎನ್ನುವುದನ್ನು ನೀವು ಕಡ್ಡಾಯಗೊಳಿಸಲು ಬಯಸುವುದಾದರೆ ಯಾಕೆ ನೀವು ನಿಯಮಗಳನ್ನು ತರಬಾರದು ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಕೇಳಿದೆ.
ಸುಪ್ರೀಂಕೋರ್ಟ್’ನ ಈ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾ. ಚಂದ್ರಚೂಡ್, ಈ ಕಡ್ಡಾಯ ಆದೇಶವನ್ನು ವಿರೋಧಿಸಿದರೆ ದೇಶ ವಿರೋಧಿ ಎನಿಸಿಕೊಳ್ಳುವ ಭಯದಿಂದ ಇದನ್ನು ವಿರೋಧಿಸಲು ಜನರು ಭಯಪಡುತ್ತಿದ್ದಾರೆ. ಜನರು ಮನರಂಜನೆಗಾಗಿ ಸಿನಿಮಾ ಹಾಲ್’ಗೆ ಬರುತ್ತಾರೆಯೇ ವಿನಃ ನೈತಿಕ ಪೊಲೀಸ್ ಗಿರಿಗಲ್ಲ ಎಂದು ಹೇಳಿದ್ದಾರೆ.
ಇದರ ಬಗ್ಗೆ ಹೊಸ ಸುತ್ತೋಲೆಯನ್ನು ಹೊರಡಿಸಬೇಕೋ, ಬೇಡವೋ ಎನ್ನುವುದರ ಬಗ್ಗೆ ಸರ್ಕಾರ ಪ್ರತಿಕ್ರಿಯೆ ನೀಡಬೇಕಿದೆ.
