ನವದೆಹಲಿ[ಸೆ.23]: ಸುಪ್ರೀಂ ಕೋರ್ಟ್ ಗೆ ನೂತನ ನಾಲ್ವರು ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದ್ದು, ಸಿಜೆಐ ರಂಜನ್​ ಗೋಗೋಯ್ ಸಮ್ಮುಖದಲ್ಲಿ ಇವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. 

ಕೃಷ್ಣ ಮುರಾರಿ, ಎಸ್. ರವೀಂದ್ರ ಭಟ್, ಜೆ. ವಿ ರಾಮಸುಬ್ರಮಣಿಯನ್ ಹಾಗೂ ಹೃಷಿಕೇಶ್​ ರಾಯ್ ಸುಪ್ರೀಂ ಕೋರ್ಟ್​ ಗೆ ನೇಮಕಗೊಂಡ ನೂತನ ನಾಲ್ವರು ನ್ಯಾಯಮೂರ್ತಿಗಳು. ಕೇಂದ್ರ ಸರ್ಕಾರ ಈ ಹಿಂದೆಯೇ ಇವರ ನಿಯುಕ್ತಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ಇಂದು ಸಿಜೆಐ ರಂಜನ್ ಗೊಗೋಯ್ ಪ್ರಮಾಣ ವಚನ ಬೋಧಿಸಿದ್ದಾರೆ. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ ಹಲವಾರು ವಕೀಲರು ಹಾಗೂ ನ್ಯಾಯಾಧೀಶರು ಹಾಜರಿದ್ದರು.

ನ್ಯಾಯಮೂರ್ತಿ ಮುರಾರಿ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್, ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ರಾಜಸ್ಥಾನ ಹೈ ಕೋರ್ಟ್, ನ್ಯಾಯಮೂರ್ತಿ ಜೆ. ವಿ ರಾಮಸುಬ್ರಮಣಿಯನ್ ಹಿಮಾಚಲ ಪ್ರದೇಶ ಹೈಕೋರ್ಟ್ ಹಾಗೂ ಹೃಷಿಕೇಶ್​ ರಾಯ್ ಕೇರಳ ಹೈಕೋರ್ಟ್ ನ್ಯಾಯಧೀಶರಾಗಿ ಸೇವೆ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್​​ನಲ್ಲಿ ಖಾಲಿ ಇದ್ದ 4 ನ್ಯಾಯಮೂರ್ತಿಗಳ ಸ್ಥಾನಕ್ಕೆ ನಾಲ್ವರು ಜಡ್ಜ್​ಗಳನ್ನು ನೇಮಕ ಮಾಡುವಂತೆ ಆಗಸ್ಟ್​ 30ರಂದು ಸುಪ್ರೀಂ ಕೋರ್ಟ್​ನ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು. 4 ಜಡ್ಜ್​ಗಳ ನೇಮದಿಂದ ಸುಪ್ರೀಂ ಕೋರ್ಟ್​ನಲ್ಲಿ ಎರಡು ಹೆಚ್ಚುವರಿ ಕೋರ್ಟ್​ ಕೊಠಡಿಗಳನ್ನು ನಿರ್ಮಿಸಲಾಗಿದೆ. ಈ ಮೊದಲು ಸುಪ್ರೀಂ ಕೋರ್ಟ್​ನಲ್ಲಿ 15 ಕೋರ್ಟ್​​ ರೂಂಗಳಿದ್ದವು, ಈಗ ಅವುಗಳ ಸಂಖ್ಯೆ 17 ಮಾಡಲಾಗಿದೆ.