ಬೆಂಗಳೂರು (ಮಾ. 06):  ಕೆರೆ ಬದಿಯಿಂದ 75 ಮೀಟರ್‌ ಮತ್ತು ರಾಜಕಾಲುವೆ, ಪ್ರಾಥಮಿಕ ಕಾಲುವೆ, ದ್ವಿತೀಯ ಮತ್ತು ತೃತೀಯ ಕಾಲುವೆಗಳ ಬದಿಯಿಂದ ಕ್ರಮವಾಗಿ 50 ಮೀ., 35 ಮೀ. ಮತ್ತು 25 ಮೀ. ಬಫರ್‌ಜೋನ್‌ ಹಸಿರು ವಲಯ ಎಂದು ಗುರು​ತಿಸಿದ್ದ ಹಸಿರು ನ್ಯಾಯಾಧಿಕರಣದ ಆದೇಶವನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದೆ.

ಇದರಿಂದಾಗಿ ಬೆಂಗಳೂರಿನಲ್ಲಿ ಕೆರೆ ಹಾಗೂ ರಾಜಕಾಲುವೆಗಳ ಬದಿಯಲ್ಲಿ ನಿರ್ಮಾಣವಾಗಿದ್ದ ಸಾವಿರಾರು ಕಟ್ಟಡಗಳು ನೆಲಸಮಗೊಳ್ಳುವ ಭೀತಿಯಿಂದ ಪಾರಾದಂತಾಗಿದೆ.

ಇದೇ ವೇಳೆ, ಹಸಿರು ನ್ಯಾಯಾಧಿಕರಣ ನಿಗದಿಪಡಿಸಿದ್ದ ಬಫರ್‌ಜೋನ್‌ ಅನ್ನು ಬದಲಿಸಿರುವ ಸುಪ್ರೀಂಕೋರ್ಟ್‌, ಬೆಂಗಳೂರಿನ ಪರಿಷ್ಕೃತ ಮಾಸ್ಟರ್‌ ಪ್ಲಾನ್‌-2015ರ ಪ್ರಕಾರ ಬಫರ್‌ ವಲಯವನ್ನು ನಿಗದಿಪಡಿಸುವಂತೆ ಸೂಚಿಸಿದೆ. ಅದರ ಪ್ರಕಾರ, ಕೆರೆ ಹಾಗೂ ಜಲಮೂಲಗಳಿಂದ 30 ಮೀಟರ್‌ವರೆಗೆ ನಿರ್ಮಾಣ ಕಾಮಗಾರಿ ಮಾಡುವಂತಿಲ್ಲ. ಇನ್ನು ಪ್ರಾಥಮಿಕ ರಾಜಕಾಲುವೆಯ ಮಧ್ಯದಿಂದ ಎರಡೂ ಬದಿಗೆ 50 ಮೀಟರ್‌, ದ್ವಿತೀಯ ರಾಜಕಾಲುವೆಯ ಮಧ್ಯದಿಂದ 25 ಮೀಟರ್‌ ಹಾಗೂ ತೃತೀಯ ರಾಜಕಾಲುವೆಗಳ ಮಧ್ಯದಿಂದ 15 ಮೀಟರ್‌ವರೆಗೆ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತಿಲ್ಲ.

ಮಂತ್ರಿ ಟೆಕ್‌ಜೋನ್‌ ಪ್ರೈ.ಲಿ. ಹಾಗೂ ಕೋರ್‌ಮೈಂಡ್‌ ಕಂಪನಿಗಳು ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದ ಕುರಿತ ಪ್ರಕರಣದಲ್ಲಿ ಈ ಹಿಂದೆ ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಕೆರೆ ಹಾಗೂ ರಾಜಕಾಲುವೆಗಳಿಗೆ ಬಫರ್‌ಜೋನ್‌ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಅದನ್ನು ಈ ಕಂಪನಿಗಳು ಹಾಗೂ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಆ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ಮಂಗಳವಾರ ನ್ಯಾಯಾಧಿಕರಣದ ಆದೇಶವನ್ನು ರದ್ದುಪಡಿಸಿ, ಪರಿಷ್ಕೃತ ಮಾಸ್ಟರ್‌ ಪ್ಲಾನ್‌ ಪ್ರಕಾರ ಬಫರ್‌ ಜೋನ್‌ ನಿಗದಿಪಡಿಸುವಂತೆ ಸೂಚಿಸಿದೆ.

ನ್ಯಾಯಾಧಿಕರಣದ ಆದೇಶದಂತೆ ಕೆರೆ, ಕಾಲುವೆಗಳ ಬಫರ್‌ಜೋನ್‌ ಅನ್ನು ಮರುನಿಗದಿಪಡಿಸಿದರೆ, ಬೆಂಗಳೂರಿನ ಶೇ.95 ಭಾಗದಲ್ಲಿ ಕಟ್ಟಡಗಳನ್ನು ನೆಲಸಮ ಗೊಳಿಸಬೇಕಾಗುತ್ತದೆ. ನ್ಯಾಯಾಧಿಕರಣಕ್ಕೆ ಬಫರ್‌ ಜೋನ್‌ ಮರುನಿಗದಿ ಮಾಡುವ ಅಧಿಕಾರವಿಲ್ಲ ಎಂಬ ರಾಜ್ಯ ಸರ್ಕಾರದ ವಾದವನ್ನು ಸುಪ್ರೀಂಕೋರ್ಟ್‌ ಪುರಸ್ಕರಿಸಿದೆ.

ರಾಜ್ಯ ಸರ್ಕಾರದ ವಾದಕ್ಕೆ ಜಯ

ಬಫರ್‌ಜೋನ್‌ ಮರುನಿಗದಿಪಡಿಸಿದ ಎನ್‌ಜಿಟಿ ತೀರ್ಪಿನ ಭಾಗವನ್ನು ರಾಜ್ಯಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಒಂದೊಮ್ಮೆ ಬಫರ್‌ ವಲಯ ವಿಚಾರವಾಗಿ ನ್ಯಾಯಾಧಿಕರಣದ ಆದೇಶವನ್ನು ಸುಪ್ರೀಂಕೋರ್ಟ್‌ ಮಾನ್ಯ ಮಾಡಿದರೆ, ಬೆಂಗಳೂರಿನಲ್ಲಿ ಲಕ್ಷಾಂತರ ಕಟ್ಟಡಗಳ ನೆಲಸಮ ಮಾಡುವುದು ಅನಿವಾರ್ಯವಾಗುತ್ತದೆ. ಇದರಿಂದ ಬೆಂಗಳೂರಿನ ಭವಿಷ್ಯವೇ ಅಲ್ಲೋಲಕಲ್ಲೋಲವಾಗುವ ಸಾಧ್ಯತೆಗಳಿವೆ ಎಂದು ರಾಜ್ಯ ಸರ್ಕಾರ ಮೇಲ್ಮನವಿಯಲ್ಲಿ ಮೊರೆ ಇಟ್ಟಿತ್ತು.

ನ್ಯಾಯಾಧಿಕರಣದ ಆದೇಶ ಏನಿತ್ತು?

ಕೆರೆಗಳಿಂದ 75 ಮೀಟರ್‌, ಪ್ರಾಥಮಿಕ ರಾಜಕಾಲುವೆಯಿಂದ 50 ಮೀಟರ್‌, ದ್ವಿತೀಯ ರಾಜಕಾಲುವೆಯಿಂದ 35 ಮೀಟರ್‌ ಹಾಗೂ ತೃತೀಯ ರಾಜಕಾಲುವೆಯಿಂದ 25 ಮೀಟರ್‌ವರೆಗೆ ಹಸಿರು ವಲಯವೆಂದು ಘೋಷಿಸಬೇಕು. ಈ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿ ನಡೆಸುವಂತಿಲ್ಲ.

ಸುಪ್ರೀಂಕೋರ್ಟ್‌ ಆದೇಶ ಏನು?

ಬಫರ್‌ ವಲಯವನ್ನು ಬೆಂಗಳೂರಿನ ಪರಿಷ್ಕೃತ ಮಾಸ್ಟರ್‌ ಪ್ಲಾನ್‌-2015ರ ಪ್ರಕಾರ ನಿಗದಿಪಡಿಸಬೇಕು. ಈ ಮಾಸ್ಟರ್‌ ಪ್ಲಾನ್‌ ಪ್ರಕಾರ ಕೆರೆಗಳಿಂದ 30 ಮೀಟರ್‌, ಪ್ರಾಥಮಿಕ ರಾಜಕಾಲುವೆಯ ಮಧ್ಯದಿಂದ 50 ಮೀಟರ್‌, ದ್ವಿತೀಯ ರಾಜಕಾಲುವೆಯ ಮಧ್ಯದಿಂದ 25 ಮೀಟರ್‌ ಹಾಗೂ ತೃತೀಯ ರಾಜಕಾಲುವೆಯ ಮಧ್ಯದಿಂದ 15 ಮೀಟರ್‌ ದೂರದವರೆಗೆ ಹಸಿರು ವಲಯವಿದ್ದು, ಅಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತಿಲ್ಲ.