ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ಗೋಮಾರಾಟ ನಿರ್ಬಂಧ ಕಾನೂನಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಸುಪ್ರೀಂ ಈ ತೀರ್ಪಿನಿಂದ ಕೇಂದ್ರ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.
ನವದೆಹಲಿ(ಜು.11): ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ಗೋ ಮಾರಾಟ ನಿರ್ಬಂಧ ಕಾಯ್ದೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿನಿಂದ ಕೇಂದ್ರ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.
ನೂತನ ಗೋ ಮಾರಾಟ ನಿಯಮಗಳಿಗೆ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ದೇಶಾದ್ಯಂತ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುವುದಿಲ್ಲ. ಕಾಯ್ದೆಯನ್ನು ಪುನರ್ ಪರಿಶೀಲಿಸಿ, ಇದರಲ್ಲಿರುವ ಕೆಲ ಅಂಶಗಳಲ್ಲಿ ತಿದ್ದುಪಡಿ ತರುತ್ತೇವೆ ಎಂದು ವಿಚಾರಣೆ ವೇಳೆ ಸುಪ್ರೀಂಕೋರ್ಟ್'ಗೆ ಕೇಂದ್ರ ತಿಳಿಸಿತು.
ಗೋ ಮಾರಾಟ ನಿರ್ಬಂಧಕ್ಕೆ ಕೇಂದ್ರ ಹೊರಡಿಸಿದ ಅಧಿಸೂಚನೆಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿತ್ತು. ಇದೀಗ ಸುಪ್ರೀಂಕೋರ್ಟ್ ರಾಷ್ಟ್ರವ್ಯಾಪಿ ಈ ಆದೇಶವನ್ನು ವಿಸ್ತರಿಸಿದೆ. "ಮದ್ರಾಸ್ ಹೈಕೋರ್ಟ್'ನ ಮಧ್ಯಂತರ ನಿರ್ದೇಶನವು ಇಡೀ ದೇಶಕ್ಕೆ ವಿಸ್ತರಿಸಬಹುದು" ಎಂದು ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್ ಮತ್ತು ನ್ಯಾ| ಡಿವೈ ಚಂದ್ರಚೂಡ್ ಅವರಿರುವ ಸುಪ್ರೀಕೋರ್ಟ್ ಪೀಠವು ತೀರ್ಪು ನೀಡಿತು.
ಕಳೆದ ತಿಂಗಳಷ್ಟೇ ಈ ಕಾಯ್ದೆ ಜಾರಿಗೊಳಿಸಿದ್ದ ಸರ್ಕಾರದ ಈ ನಿರ್ಧಾರಕ್ಕೆ ದೇಶದಾದ್ಯಂತ ಪರ ವಿರೋಧಗಳ ಕೂಗು ಕೇಳಿ ಬಂದಿತ್ತು. ವಧಾಗೃಹಗಳಿಗೆ ಗೋವುಗಳ ಮಾರಾಟಕ್ಕೆ ಕೇಂದ್ರ ಸರಕಾರ ಹಲವು ರೀತಿಯ ನಿರ್ಬಂಧಗಳನ್ನು ಹೇರಿ ಮೇ 25ರಂದು ಅಧಿಸೂಚನೆ ಹೊರಡಿಸಿತ್ತು. ಇದು ದೇಶದ ಲಕ್ಷ ಕೋಟಿ ಮಾಂಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೇ ಬಡ ರೈತರಿಗೆ ಇದು ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ ಎಂಬ ಕಾರಣಗಳಿಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಗೋಮಾಂಸವನ್ನೇ ನಿಷೇಧಿಸುವ ಹುನ್ನಾರ ಇದರಲ್ಲಿದೆ ಎಂಬ ಟೀಕೆಗಳೂ ವ್ಯಕ್ತವಾಗಿವೆ.
