ರಫೆಲ್ ಯುದ್ಧ ವಿಮಾನ ಖರೀದಿ ವೆಚ್ಚದ ಮಾಹಿತಿಗೆ ಸುಪ್ರೀಂ ಕೋರ್ಟ್ ಸೂಚನೆ! ಯುದ್ಧ ವಿಮಾನದ ಖರೀದಿಗೆ ಮಾಡುತ್ತಿರುವ ವೆಚ್ಚದ ಮಾಹಿತಿ ಕೊಡುವಂತೆ ಕೇಂದ್ರಕ್ಕೆ ಸೂಚನೆ! ರಫೆಲ್ ಒಪ್ಪಂದದ ಸಂಪೂರ್ಣ ಮಾಹಿತಿ ಕೋರಿದ್ದ ಸುಪ್ರೀಂ ಕೋರ್ಟ್! ಮುಚ್ಚಿದ ಲಕೋಟೆಯಲ್ಲಿ ರಫೆಲ್ ಒಪ್ಪಂದದ ಮಾಹಿತಿ ಸಲ್ಲಿಸಿದ್ದ ಕೇಂದ್ರ ಸರ್ಕಾರ! ಒಪ್ಪಂದದ ವೆಚ್ಚದ ಕುರಿತೂ ಮಾಹಿತಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ  

ನವದೆಹಲಿ(ಅ.31): ರಫೆಲ್ ಯುದ್ಧ ವಿಮಾನ ಬೆಲೆ ಕುರಿತ ಸಂಪೂರ್ಣ ಮಾಹಿತಿಗಳನ್ನು ಮುಚ್ಚಿದ ಲಕೋಟೆಯಲ್ಲಿ 10 ದಿನಗಳೊಳಗಾಗಿ ಸಲ್ಲಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. 

59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ಯುದ್ಧ ವಿಮಾನಗಳನ್ನು ಫ್ರಾನ್ಸ್ ನಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಒಪ್ಪಂದದಲ್ಲಿ ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರ ಭಾರೀ ಅವ್ಯವಹಾರ ನಡೆಸಿದ್ದು, ಒಪ್ಪಂದ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಕೋರಿ ಎಂ.ಎಲ್.ಶರ್ಮಾ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 

ಈ ಅರ್ಜಿಯನ್ನು ಅ.10 ರಂದು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾಯಮೂರ್ತಿ ಎಸ್.ಕೆ. ಕೌಲ್ ಮತ್ತು ಕೆ.ಎಂ ಜೋಸೆಫ್ ಅವರನ್ನೊಳಗೊಂಡ ಪೀಠ, ಅ. 29ರೊಳಗೆ ರಫೆಲ್ ಒಪ್ಪಂದದಲ್ಲಿ ಕೈಗೊಂಡ ಪ್ರಕ್ರಿಯೆ ಕುರಿತು ಮೊಹರು ಮಾಡಿದ ಲಕೋಟೆಯಲ್ಲಿ ವಿವರ ಸಲ್ಲಿಸುವಂತೆ ಸೂಚನೆ ನೀಡಿತ್ತು. 

ಸುಪ್ರೀಂಕೋರ್ಟ್ ಆದೇಶದಂತೆಯೇ ಅ.27 ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತಂತೆ ವರದಿ ಸಲ್ಲಿಸಿತ್ತು.

Scroll to load tweet…

ಕೇಂದ್ರ ಸರ್ಕಾರ ಸಲ್ಲಿಸಿದ್ದ ವರದಿಯನ್ನು ಪರಿಶೀಲನೆ ನಡೆಸಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ವಿಮಾನಗಳ ಬೆಲೆ ಕುರಿತು ಸಂಪೂರ್ಣ ಮಾಹಿತಿಗಳನ್ನು ಮುಚ್ಚಿದ ಲಕೋಟೆಯಲ್ಲಿ 10 ದಿನಗಳೊಳಗಾಗಿ ಸಲ್ಲಿಸುವಂತೆ ಮತ್ತೆ ಸೂಚನೆ ನೀಡಿದ್ದಾರೆ.