ಸೋಮಣ್ಣಗೆ ಅರಸೀಕೆರೆ ಟಿಕೆಟ್‌ಗಾಗಿ ಒತ್ತಡ

First Published 5, Apr 2018, 8:05 AM IST
Supporters Demand BS Yeddyurappa To Give Arasikere Assembly Ticket To Somanna
Highlights

ಹನೂರು ಕ್ಷೇತ್ರದಿಂದ ಟಿಕೆಟ್‌ ತಪ್ಪಿದ ಬಳಿಕ ವಿಧಾನಪರಿಷತ್‌ ಸದಸ್ಯ ವಿ.ಸೋಮಣ್ಣ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವುದರ ಬಗ್ಗೆ ಇನ್ನೂ ಸ್ಪಷ್ಟಚಿತ್ರಣ ಮೂಡದ ನಡುವೆಯೇ ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದಿಂದ ಟಿಕೆಟ್‌ ನೀಡುವಂತೆ ಆ ಕ್ಷೇತ್ರದ ಮುಖಂಡರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ ಪ್ರಸಂಗ ನಡೆದಿದೆ.

ಬೆಂಗಳೂರು : ಹನೂರು ಕ್ಷೇತ್ರದಿಂದ ಟಿಕೆಟ್‌ ತಪ್ಪಿದ ಬಳಿಕ ವಿಧಾನಪರಿಷತ್‌ ಸದಸ್ಯ ವಿ.ಸೋಮಣ್ಣ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವುದರ ಬಗ್ಗೆ ಇನ್ನೂ ಸ್ಪಷ್ಟಚಿತ್ರಣ ಮೂಡದ ನಡುವೆಯೇ ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದಿಂದ ಟಿಕೆಟ್‌ ನೀಡುವಂತೆ ಆ ಕ್ಷೇತ್ರದ ಮುಖಂಡರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ ಪ್ರಸಂಗ ನಡೆದಿದೆ.

ಬುಧವಾರ ಪಕ್ಷದ ಕಚೇರಿಯಲ್ಲಿ ಹಲವು ಮುಖಂಡರ ಸೇರ್ಪಡೆ ಕಾರ್ಯಕ್ರಮ ಬಳಿಕ ವಾಪಸ್‌ ತೆರಳಲು ಕಾರು ಹತ್ತಲು ಮುಂದಾದಾಗ ಅರಸೀಕೆರೆ ಕ್ಷೇತ್ರದ ಪಕ್ಷದ ಕಾರ್ಯಕರ್ತರು ಮುತ್ತಿಗೆ ಹಾಕಿದರು.

ಅರಸೀಕೆರೆ ತಾಲೂಕು ಮುಖಂಡ ಬಸವರಾಜು ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಸೋಮಣ್ಣ ಬೇಕೇ ಬೇಕು ಎಂದು ಘೋಷಣೆ ಕೂಗಿದರು. ಹಾಸನ ಜಿಲ್ಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಸೋಮಣ್ಣ ಅವರಿಗೆ ಟಿಕೆಟ್‌ ನೀಡುವಂತೆ ಆಗ್ರಹಿಸಿದರು. ಅಲ್ಲದೇ, ಟಿಕೆಟ್‌ ನೀಡಿದರೆ ಅವರನ್ನು ಗೆಲ್ಲಿಸಿಕೊಡುವ ಜವಾಬ್ದಾರಿ ನಮ್ಮದು ಎಂದು ಹೇಳಿದರು. ಆದರೆ, ಪಕ್ಷದ ಕಾರ್ಯಕರ್ತರ ಮನವಿಗೆ ಯಡಿಯೂರಪ್ಪ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಸಿಟ್ಟಿನಿಂದಲೇ ಕಾರಿನಲ್ಲಿ ತೆರಳಿದರು.

ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸೋಮಣ್ಣ, ಅರಸೀಕೆರೆ ಕ್ಷೇತ್ರದಲ್ಲಿ ನನ್ನ ಪುತ್ರ ಅರುಣ್‌ಗೆ ಟಿಕೆಟ್‌ ನೀಡುವ ಕುರಿತು ಪಕ್ಷದ ಮುಖಂಡರು ಭರವಸೆ ನೀಡಿದ್ದಾರೆ. ಕೆಲವೊಂದು ಅಡ್ಡಿಗಳಿದ್ದು, ಅವರನ್ನು ಬಗೆಹರಿಸಿ ಟಿಕೆಟ್‌ ಕೊಡುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಸಮಸ್ಯೆಗಳನ್ನು ನಿವಾರಿಸಿಕೊಂಡು ಶುಕ್ರವಾರ ನನ್ನ ಮಗನನ್ನು ಕ್ಷೇತ್ರಕ್ಕೆ ಕಳುಹಿಸುತ್ತೇನೆ. ಅಲ್ಲಿಯೇ ಮನೆ ಮಾಡಿಕೊಂಡು ವಾಸ ಮಾಡಲಾಗುವುದು. ಗೆದ್ದರೂ, ಸೋತರೂ ಅರಸೀಕೆರೆಯೇ ಆತನಿಗೆ ತವರು. ನೀವು ಬೆಂಬಲಿಸಬೇಕು. ಪಕ್ಷದಲ್ಲಿ ಇತ್ತೀಚೆಗೆ ನಡೆದ ವಿದ್ಯಮಾನಗಳು ಬೇಸರ ತಂದಿವೆ. ಯಡಿಯೂರಪ್ಪ ಅವರು ವಜ್ರ, ಚಿನ್ನ ಇದ್ದಂತೆ. ಕೆಲವರು ಅವರಿಗೆ ಏನನ್ನೋ ಹೇಳಿ ಬೇರೆ ಅಭಿಪ್ರಾಯ ಮೂಡಿಸುತ್ತಿದ್ದಾರೆ. ನನ್ನ ಬಗ್ಗೆ ಅಪಪ್ರಚಾರ ಮಾಡಿಸುತ್ತಿದ್ದಾರೆ. ಇದು ನೋವು ತಂದಿದೆ ಎಂದರು.

ಪಕ್ಷದಲ್ಲಿ ಇಂಥ ಬೆಳವಣಿಗೆಗಳು ಸಹಜ. ಇದಕ್ಕೆಲ್ಲ ಎದೆಗುಂದುವುದಿಲ್ಲ. ಪಕ್ಷಕ್ಕಾಗಿ ದುಡಿಯುತ್ತೇನೆ. ಯಡಿಯೂಪ್ಪ ಅವರನ್ನು ಮುಖ್ಯಮಂತ್ರಿ ಮಾಡಿಯೇ ಮಾಡುತ್ತೇವೆ. ಯಾರು ಏನೇ ಕಿರುಕುಳ ನೀಡಲಿ, ಅದನ್ನೆಲ್ಲಾ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ. ಅರಸೀಕೆರೆ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಜನರು ಬಿಜೆಪಿ ಬೆಂಬಲಿಸಿದರೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

loader