ಶಾಜಹಾನ್‌ ತಾಜಮಹಲನ್ನು ಬರೆದುಕೊಟ್ಟಿದ್ದಕ್ಕೆ ಸಹಿ ತೋರಿಸಿ!

First Published 12, Apr 2018, 10:03 AM IST
Sunni board says Shah Jahan gave it Taj ownership SC asks for papers
Highlights

ತನ್ನ ಪತ್ನಿ ಮುಮ್ತಾಜ್‌ಳ ನೆನಪಿಗೆ ಮೊಘಲ್‌ ಚಕ್ರವರ್ತಿ ಶಾಜಹಾನ್‌ ನಿರ್ಮಿಸಿದ್ದು ಎನ್ನಲಾದ ಪ್ರೇಮಸೌಧ ತಾಜಮಹಲ್‌ನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಕುತೂಹಲಕರ ಪ್ರಕರಣವೊಂದು ವಿಚಾರಣೆಯಲ್ಲಿದೆ.

ನವದೆಹಲಿ: ತನ್ನ ಪತ್ನಿ ಮುಮ್ತಾಜ್‌ಳ ನೆನಪಿಗೆ ಮೊಘಲ್‌ ಚಕ್ರವರ್ತಿ ಶಾಜಹಾನ್‌ ನಿರ್ಮಿಸಿದ್ದು ಎನ್ನಲಾದ ಪ್ರೇಮಸೌಧ ತಾಜಮಹಲ್‌ನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಕುತೂಹಲಕರ ಪ್ರಕರಣವೊಂದು ವಿಚಾರಣೆಯಲ್ಲಿದೆ.

ತಾಜಮಹಲನ್ನು ಸ್ವತಃ ಶಾಜಹಾನ್‌ ತನಗೆ ಬರೆದುಕೊಟ್ಟಿದ್ದಾನೆ ಎಂದು ಉತ್ತರ ಪ್ರದೇಶದ ಸುನ್ನಿ ವಕ್ಫ್ ಮಂಡಳಿ ದಾವೆ ಹೂಡಿದ್ದು, ಸದ್ಯ ಪುರಾತತ್ವ ಸರ್ವೇಕ್ಷಣಾಲಯದ ಅಧೀನದಲ್ಲಿರುವ ಪ್ರೇಮಸೌಧವನ್ನು ತನಗೆ ಒಪ್ಪಿಸಬೇಕೆಂದು ಕೋರಿದೆ. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌, ಶಾಜಹಾನ್‌ ತಾಜಮಹಲನ್ನು ನಿಮಗೆ ಬರೆದುಕೊಟ್ಟಿದ್ದಾನೆ ಎಂಬುದಕ್ಕೆ ಒಂದು ವಾರದಲ್ಲಿ ಸಾಕ್ಷ್ಯದ ರೂಪದಲ್ಲಿ ಶಾಜಹಾನ್‌ನ ಸಹಿ ಇರುವ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು ಎಂದು ಸುನ್ನಿ ವಕ್ಫ್ ಮಂಡಳಿಗೆ ಸೂಚನೆ ನೀಡಿದೆ.

ತಾಜಮಹಲಿನ ನಿರ್ಮಾಣ ಪೂರ್ಣಗೊಂಡ 18 ವರ್ಷಗಳ ನಂತರ 1666ರಲ್ಲಿ ಶಾಜಹಾನ್‌ ಮೃತಪಟ್ಟಿದ್ದಾನೆ. ಮೇಲಾಗಿ, ಆತ ಮರಣ ಹೊಂದುವುದಕ್ಕೂ ಮುನ್ನ ಆತನ ಪುತ್ರ ಔರಂಗಜೇಬನೇ ಸಿಂಹಾಸನ ಕಬಳಿಸಲು ಶಾಜಹಾನ್‌ನನ್ನು ಆಗ್ರಾದ ಕೋಟೆಯಲ್ಲಿ ಬಂಧನದಲ್ಲಿಟ್ಟಿದ್ದ. ಅಲ್ಲಿಂದಲೇ ಶಾಜಹಾನ್‌ ತಾಜಮಹಲನ್ನು ನೋಡುತ್ತಿದ್ದ ಮತ್ತು ಬಂಧನದಲ್ಲಿದ್ದಾಗಲೇ ಮೃತಪಟ್ಟಎಂದು ಇತಿಹಾಸ ಹೇಳುತ್ತದೆ. ಈ ಹಿನ್ನೆಲೆಯಲ್ಲಿ ವಕ್ಫ್ ಮಂಡಳಿಯ ವಾದಕ್ಕೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಅಚ್ಚರಿ ವ್ಯಕ್ತಪಡಿಸಿದ್ದು, ಶಾಜಹಾನ್‌ನ ಸಹಿಯನ್ನು ನಮಗೆ ತೋರಿಸಿ ಎಂದು ಸೂಚನೆ ನೀಡಿದೆ.

‘ವಕ್ಫ್ನಾಮಾಕ್ಕೆ ಶಾಜಹಾನ್‌ ಸಹಿ ಹಾಕಿದ್ದು ಹೇಗೆ? ಅವನು ಜೈಲಿನಲ್ಲಿದ್ದುಕೊಂಡು ತಾಜಮಹಲನ್ನು ನೋಡುತ್ತಿದ್ದ. 17ನೇ ಶತಮಾನದ ಈ ಭವ್ಯ ಸೌಧವನ್ನು ಭಾರತದಲ್ಲಿ ಮೊಘಲ್‌ ಆಳ್ವಿಕೆ ಅಂತ್ಯಗೊಂಡ ನಂತರ ಬ್ರಿಟಿಷರು ವಶಪಡಿಸಿಕೊಂಡರು. ಸ್ವಾತಂತ್ರ್ಯಾನಂತರ ಬ್ರಿಟಿಷರ ಬಳಿಯಿದ್ದ ಭಾರತದ ಪುರಾತನ ಆಸ್ತಿಗಳೆಲ್ಲ ಪುರಾತತ್ವ ಇಲಾಖೆಯ ವಶಕ್ಕೆ ಬಂದವು’ ಎಂದು ನ್ಯಾ ದೀಪಕ್‌ ಮಿಶ್ರಾ ಬುಧವಾರದ ವಿಚಾರಣೆ ವೇಳೆ ಹೇಳಿದರು.

ಮೊಹಮ್ಮದ್‌ ಇರ್ಫಾನ್‌ ಬೇದರ್‌ ಎಂಬುವರು ದಶಕದ ಹಿಂದೆ ಸುನ್ನಿ ವಕ್ಫ್ ಮಂಡಳಿಗೆ ಮನವಿಯೊಂದನ್ನು ಸಲ್ಲಿಸಿ, ತಾಜಮಹಲನ್ನು ವಕ್ಫ್ ಮಂಡಳಿಯ ಆಸ್ತಿಯೆಂದು ಘೋಷಿಸಲು ಕೋರಿದ್ದರು. ಅದಕ್ಕೆ ಬೆಲೆ ಸಿಗದಿದ್ದಾಗ ಅಲಹಾಬಾದ್‌ ಹೈಕೋರ್ಟ್‌ಗೆ ಹೋಗಿದ್ದರು. ಹೈಕೋರ್ಟ್‌ ಆತನ ಮನವಿಯನ್ನು ಪರಿಶೀಲಿಸುವಂತೆ ಸೂಚಿಸಿತ್ತು. ಅದರಂತೆ 2005ರಲ್ಲಿ ತಾಜಮಹಲ್‌ ತನ್ನ ಆಸ್ತಿ ಎಂದು ಸುನ್ನಿ ವಕ್ಫ್ ಮಂಡಳಿ ನಿರ್ಧಾರ ಪ್ರಕಟಿಸಿತ್ತು. ಅದನ್ನು ಪ್ರಶ್ನಿಸಿ ಪುರಾತತ್ವ ಇಲಾಖೆ ಸುಪ್ರಿಂಕೋರ್ಟ್‌ಗೆ ಹೋಗಿದೆ.

loader