ಬೆಂಗಳೂರು :  ಬೇಸಿಗೆ ರಜೆ ಮುಗಿದಿದ್ದು, 2019-20ನೇ ಸಾಲಿನ ಶೈಕ್ಷಣಿಕ ತರಗತಿಗಳು ರಾಜ್ಯಾದ್ಯಂತ ಬುಧವಾರದಿಂದ ಪುನಾರಂಭಗೊಳ್ಳಲಿವೆ. ಹೈದರಾಬಾದ್‌ ಕರ್ನಾಟಕ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜೂ.13ರವರೆಗೆ ಬೇಸಿಗೆ ರಜೆ ಮುಂದುವರಿಸುವಂತೆ ಮತ್ತು ರಂಜಾನ್‌ ಅಂಗವಾಗಿ ಉರ್ದು ಮಾಧ್ಯಮ ಶಾಲೆಗಳಲ್ಲಿ ತರಗತಿ ವೇಳಾಪಟ್ಟಿ ಬದಲಾವಣೆ ಮಾಡಿಕೊಂಡು ತರಗತಿಗಳನ್ನು ನಡೆಸುವಂತೆ ನಿರ್ದೇಶನ ನೀಡಲಾಗಿದೆ.

ವರ್ಷದ ಮೊದಲ ದಿನ ಶಾಲಾ ಆವರಣ ಹಬ್ಬದಂತೆ ಕಂಗೊಳಿಸಬೇಕು. ಆದ್ದರಿಂದ ಶಾಲೆಗಳ ಕಟ್ಟಡಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ, ಆವರಣದಲ್ಲಿ ರಂಗೋಲಿ ಬಿಡಿಸಬೇಕು. ಹೂವುಗಳಿಂದ ಅಲಂಕಾರ ಮಾಡಿ ಮಕ್ಕಳು ಸಂತೋಷದಿಂದ ಶಾಲೆಗೆ ಬರುವಂತೆ ಮಾಡಬೇಕು ಮತ್ತು ಮಕ್ಕಳಿಂದಲೇ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಿ ಮೊದಲ ದಿನವನ್ನು ಖುಷಿಯಿಂದ ಕಳೆಯುವಂತಿರಬೇಕು ಎಂದು ತಿಳಿಸಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು, ಸ್ಥಳೀಯ ನಾಗರಿಕರು, ಹಿರಿಯ ವಿದ್ಯಾರ್ಥಿಗಳು ಮತ್ತು ಜನಪ್ರತಿನಿಧಿಗಳನ್ನು ಆಹ್ವಾನಿಸಿ ಶಾಲಾ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಬೇಕು. ಪಠ್ಯಪುಸ್ತಕಗಳು ಸೇರಿದಂತೆ ಶಾಲಾ ಪ್ರೋತ್ಸಾಹಕ ಸಾಮಗ್ರಿಗಳನ್ನು ಗಣ್ಯರ ಸಮ್ಮುಖದಲ್ಲಿ ವಿತರಿಸಬೇಕು. ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಮಾಡುವ ಮೂಲಕ ಶಾಲಾರಂಭ ಮಾಡಬೇಕು ಎಂದು ಸೂಚಿಸಿದೆ.

ಶಾಲಾ ಸುರಕ್ಷತೆ, ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಬೇಕು. ಬೋಧನಾ ಕೊಠಡಿಗಳು, ಅಡುಗೆ ಕೋಣೆಗಳನ್ನು ಸ್ವಚ್ಛವಾಗಿಟ್ಟುಕೊಂಡು ಶಾಲೆಗಳನ್ನು ಆರಂಭಿಸಬೇಕು ಎಂದು ನಿರ್ದೇಶನ ನೀಡಿದೆ.

ಉರ್ದು ಶಾಲೆ ವೇಳಾಪಟ್ಟಿ ಬದಲು:

ರಂಜಾನ್‌ ಮುಗಿಯುವತನಕ ಉರ್ದು ಮಾಧ್ಯಮ ಶಾಲೆಗಳಲ್ಲಿ ಪ್ರಾರ್ಥನೆಗೆ ಹೋಗಲು ಅನುಕೂಲವಾಗುವಂತೆ ಉರ್ದು ಮತ್ತು ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ವೇಳಾಪಟ್ಟಿಪ್ರಕಟಿಸಿದೆ. ಬೆಳಗ್ಗೆ 7.50ರಿಂದ 9.50ರ ವರೆಗೆ ತರಗತಿ, 9.50ರಿಂದ 10.05ರ ವರೆಗೆ ಬಿಡುವು ಮತ್ತು 10.05ರಿಂದ ಮಧ್ಯಾಹ್ನ 12.45ರ ವರೆಗೆ ತರಗತಿಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ.