ನವದೆಹಲಿ/ಮಂಡ್ಯ [ಜು.24]: ಮಂಡ್ಯದ ಕಾಲುವೆ ಗಳಿಗೆ ಕೃಷ್ಣರಾಜಸಾಗರ ಅಣೆಕಟ್ಟಿನಿಂದ ನೀರು ಹರಿಸುವಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮಾಡಿಕೊಂಡಿದ್ದ ಮನವಿಯನ್ನು ಸೂಕ್ತ ಕ್ರಮಕ್ಕಾಗಿ ಜಲ ಶಕ್ತಿ ಸಚಿವಾಲಯದ ಕಾರ್ಯದರ್ಶಿಗಳಿಗೆ ಕಳುಹಿಸಿಕೊಟ್ಟಿರುವುದಾಗಿ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.

ಸುಮಲತಾ ಅಂಬರೀಷ್ ಅವರು ಜೂನ್ 20 ರಂದು ಪತ್ರ ಬರೆದು ಮಂಡ್ಯದ ಕೃಷ್ಣರಾಜಸಾಗರ ಜಲಾಶಯದಿಂದ ಮಂಡ್ಯದ ಕಾಲುವೆಗಳಿಗೆ 2 ಟಿಎಂಸಿ ನೀರು ನೀಡುವಂತೆ ಕೋರಿ ಪತ್ರ ಬರೆದಿದ್ದರು.

ಜೆಡಿಎಸ್ ಆಕ್ರೋಶ: ಇದೇವೇಳೆ ಸುಮಲತಾ ಅಂಬರೀಷ್ ಅವರ ಫೇಸ್‌ಬುಕ್ ಪೇಜ್‌ನಲ್ಲಿ ‘ನನ್ನ ಮನವಿಗೆ ಸ್ಪಂದಿಸಿ ನೀರನ್ನು ಮಂಡ್ಯ ನಾಲೆಗೆ ಹರಿಸಲು ಆದೇಶಿಸಿದ ಕೇಂದ್ರ ಸಚಿವರಿಗೆ ಮಂಡ್ಯ ರೈತರ ಪರವಾಗಿ ನನ್ನ ತುಂಬು ಹೃದಯದ ಅಭಿನಂದನೆಗಳು’ ಎಂದು ಬರೆದುಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.