Asianet Suvarna News Asianet Suvarna News

ಸುಮಲತಾಗೆ ಅದೃಷ್ಟ ತಂದು ಕೊಡುತ್ತಾ ಅಂಬಿ ಮನೆ?

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಅಂಬರೀಷ್‌ ಪತ್ನಿ ಸುಮಲತಾ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಮಂಡ್ಯ ನಗರದಲ್ಲೇ ಉಳಿಯಲು ಮನೆಯನ್ನು ಹುಡುಕಿಕೊಂಡಿದ್ದಾರೆ.
 

Sumalatha purchase rented house in Mandya
Author
Bengaluru, First Published Mar 4, 2019, 8:50 AM IST

ಮಂಡ್ಯ/ಕೆ.ಆರ್‌.ನಗರ (ಮಾ. 04): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಅಂಬರೀಷ್‌ ಪತ್ನಿ ಸುಮಲತಾ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಮಂಡ್ಯ ನಗರದಲ್ಲೇ ಉಳಿಯಲು ಮನೆಯನ್ನು ಹುಡುಕಿಕೊಂಡಿದ್ದಾರೆ.

ಮಂಡ್ಯ ಚಾಮುಂಡೇಶ್ವರಿ ನಗರ 3ನೇ ಕ್ರಾಸ್‌ನಲ್ಲಿ ಬೂದನೂರು ಅಂಕಯ್ಯ ಅವರಿಂದ ಅಂಬರೀಷ್‌ ಬಾಡಿಗೆ ಪಡೆದಿದ್ದ ಮನೆಯನ್ನೇ ಬಾಡಿಗೆ ಪಡೆಯಲು ಸುಮಲತಾ ಮುಂದಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ಅಂಬರೀಷ್‌ 2013ರ ವಿಧಾನಸಭಾ ಚುನಾವಣೆ ವೇಳೆ ಬೂದನೂರು ಅಂಕಯ್ಯ ಅವರ ಮನೆ ಬಾಡಿಗೆ ಪಡೆದು ಚುನಾವಣೆ ಎದುರಿಸಿ ಭಾರೀ ಅಂತರದಿಂದ ಗೆಲವು ಸಾಧಿಸಿದ್ದರು.

ಅಂಬರೀಷ್‌ ಅವರಿಗೆ ಈ ಮನೆ ಅದೃಷ್ಟದ ಮನೆ. ಈ ಮನೆಗೆ ಬಂದ ಮೇಲೆ ಗೆದ್ದು ಸಚಿವರೂ ಆಗಿದ್ದರು. ಸಚಿವ ಸ್ಥಾನ ಕಳೆದುಕೊಂಡ ಬಳಿಕ ಮನೆ ಖಾಲಿ ಮಾಡಿದ್ದರು. ಈಗ ಮತ್ತೆ ಅಂಬರೀಷ್‌ ಪತ್ನಿ ಸುಮಲತಾ ಅಂಬಿ ಬಾಡಿಗೆ ಪಡೆದ ಮನೆಯನ್ನೇ ಬಾಡಿಗೆ ಪಡೆದು ಚುನಾವಣೆ ಕಚೇರಿ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿಕೊಳ್ಳುತ್ತಿದ್ದಾರೆ.

ಅಲ್ಲದೇ ಸ್ವಂತ ಮನೆ ನಿರ್ಮಿಸಲು ಚಿಂತನೆ ನಡೆಸಿರುವ ಸುಮಲತಾ ನಗರದ ಬಂದೀಗೌಡ ಬಡಾವಣೆಯ ಸಂಬಂಧಿಕರ ನಿವೇಶನದಲ್ಲಿ ಅಥವಾ ಮಂಡ್ಯ ನಗರದ ಹೊರವಲಯದ ಮಂಜುನಾಥ ನಗರದಲ್ಲಿ ನಿವೇಶನದಲ್ಲಿ ಸ್ವಂತ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಈ ಕುರಿತು ಅಂಬರೀಷ್‌ ಬೆಂಬಲಿಗರೊಬ್ಬರು ಕನ್ನಡಪ್ರಭಕ್ಕೆ ಮಾಹಿತಿ ನೀಡಿ, ಸುಮಲತಾ ಅವರು ಬೂದನೂರು ಅಂಕಯ್ಯ ಅವರ ಮನೆಯನ್ನೆ ಮತ್ತೆ ಬಾಡಿಗೆ ಪಡೆಯಲು ನಿರ್ಧರಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಮನೆ ಬಾಡಿಗೆ ವಿಚಾರವಾಗಿ ಮಾತುಕತೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದ್ದಾರೆ.

ಬೇರೆ ಕ್ಷೇತ್ರದ ಬಗ್ಗೆ ಕನಸಲ್ಲೂ ಯೋಚಿಸಿಲ್ಲ:

ಅಂಬರೀಷ್‌ ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಆದರೆ, ಬೇರೆ ಕ್ಷೇತ್ರದ ಬಗ್ಗೆ ಕನಸಿನಲ್ಲಿಯೂ ಯೋಚಿಸುವುದಿಲ್ಲ ಎಂದು ಸುಮಲತಾ ತಿಳಿಸಿದ್ದಾರೆ.

ಕೆ.ಆರ್‌.ನಗರ ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ನಡೆದ ಅಂಬರೀಷ್‌ ಅಭಿಮಾನಿಗಳ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಆದರೆ, ಅಂಬರೀಷ್‌ ಅವರ ಅಭಿಮಾನಿಗಳು ರಾಜಕೀಯವಾಗಿ ಅನಾಥರಾಗಿ ಬಿಡುತ್ತೇವೆ ಹಾಗಾಗಿ ಅಣ್ಣನವರ ಸ್ಥಾನವನ್ನು ತುಂಬಬೇಕೆಂದು ಒತ್ತಡ ಹೇರುತ್ತಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಅಸ್ತಿತ್ವ ಕಾಪಾಡುವ ಸದುದ್ದೇಶದಿಂದ ಅಭಿಮಾನಿಗಳ ಮಾತಿಗೆ ಸ್ಪಂದಿಸಿದ್ದೇನೆ ಎಂದರು.

ಅಂಬರೀಷ್‌ ಅವರು ಹತ್ತಾರು ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದು, ಕ್ಷೇತ್ರದಲ್ಲಿ ಪಕ್ಷ ಮತ್ತು ಮತದಾರರು ಬಲಿಷ್ಠವಾಗಿದ್ದಾರೆ. ಜನಾಭಿಪ್ರಾಯ ಒಂದು ರೀತಿಯಿದ್ದರೆ ಅದನ್ನು ಅರ್ಥ ಮಾಡಿಕೊಳ್ಳದ ಪಕ್ಷಗಳು ಮತ್ತೊಂದು ರೀತಿಯಲ್ಲಿ ಯೋಚಿಸುತ್ತಿವೆ. ಆದರೆ, ನಾನು ಮಾತ್ರ ಈಗಾಗಲೇ ಕಾಂಗ್ರೆಸ್‌ ಪಕ್ಷದ ನಾಯಕರನ್ನು ಭೇಟಿ ಮಾಡಿ ಚುನಾವಣೆಗೆ ಸ್ಪರ್ಧಿಸುವ ನನ್ನ ಮನದ ಇಂಗಿತ ತಿಳಿಸಿದ್ದೇನೆ ಎಂದು ಹೇಳಿದರು.

ನಟರು ಮತ್ತು ರಾಜಕೀಯ ನಾಯಕರ ಮೇಲಿನ ಪ್ರೀತಿ ವಿಶ್ವಾಸ ಹಾಗೂ ಅಭಿಮಾನಿಗಳ ಗೌರವ ಎಂದಿಗೂ ಶಾಶ್ವತವಾಗಿರುತ್ತದೆ ಎಂಬುದಕ್ಕೆ ಅಂಬರೀಷ್‌ ಅವರನ್ನು ಜನತೆ ಈಗಲೂ ಗೌರವಿಸುತ್ತಿರುವುದು ಸಾಕ್ಷಿ ಎಂದು ಬಾವುಕರಾದರು. ಚುನಾವಣೆಗೆ ಸ್ಪರ್ಧಿಸುವುದಾದರೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾತ್ರ. ಬೇರೆ ಕ್ಷೇತ್ರದ ಬಗ್ಗೆ ಕನಸಿನಲ್ಲೂ ಯೋಚನೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios