ಬೆಂಗಳೂರು[ಮಾ.26]: ‘ಪ್ರಾಥಮಿಕ ಶಿಕ್ಷಣ ಪಡೆಯುವಾಗಲೇ ಕೃಷಿ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕನಸು ಕಂಡಿದ್ದೆ. ಇದೇ ಕಾರಣದಿಂದ ಪಿಯುಸಿ ಬಳಿಕ ಸಿಕ್ಕ ಮೆಡಿಕಲ್‌ ಕೋರ್ಸ್‌ ಸೀಟು ತ್ಯಜಿಸಿ ಕಷ್ಟಪಟ್ಟು ಅಧ್ಯಯನ ಮಾಡಿದ ಪರಿಣಾಮ ಹನ್ನೆರಡು ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು...’

ಸೋಮವಾರ ನಡೆದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 53ನೇ ಘಟಿಕೋತ್ಸವದಲ್ಲಿ ಏಳು ಚಿನ್ನದ ಪದಕ, ಐದು ದಾನಿಗಳ ಚಿನ್ನದ ಪದಕಗಳ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದ ಚಿಂತಾಮಣಿಯ ರೇಷ್ಮೆ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕೆ.ಸುಮಾ ಅವರು ತಮ್ಮ ಸಂತಸವನ್ನು ಈ ರೀತಿ ಹಂಚಿಕೊಂಡರು.

ದ್ವಿತೀಯ ಪಿಯುಸಿ ನಂತರ ಮೆಡಿಕಲ್‌ಗೆ ಸೇರುವಂತೆ ನೀಡಿದ ಸಲಹೆ ಮೇರೆಗೆ ಬರೆದ ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ರಾರ‍ಯಂಕ್‌ ಬಂದು ಸೀಟು ಲಭ್ಯವಾಗಿತ್ತು. ಆದರೆ, ಕೃಷಿ ಮತ್ತು ರೈತರ ಪರವಾಗಿ ಏನಾದರೂ ಸಾಧಿಸಬೇಕೆಂದು ಮೆಡಿಕಲ್‌ ಸೀಟು ತ್ಯಜಿಸಿ ಕೃಷಿ ಪದವಿ ಮಾಡಲು ಇಚ್ಛಿಸಿದೆ. ಮುಂದೆ ಜೆನಿಟಿಕ್‌ ಕ್ಷೇತ್ರದಲ್ಲಿ ಹೊಸ ಆವಿಷ್ಕಾರವನ್ನು ಮಾಡುವ ಗುರಿಯಿದೆ ಎಂದರು.

ಕೃಷಿಯಲ್ಲಿ ಸಾಧನೆ:

ಆರು ಚಿನ್ನದ ಪದಕ ಪಡೆದ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಗೌಡಗೆರೆಯ ಟಿ.ಡಿ.ಗೌಡ ಮಾತನಾಡಿ, ಕೃಷಿ ವಿಭಾಗದಲ್ಲಿ ಬಿ.ಎಸ್ಸಿ ಮಾಡಬೇಕು ಎಂಬುದು ಬಾಲ್ಯದ ಕನಸಾಗಿತ್ತು. ನಮ್ಮದು ಸುಮಾರು ಎಂಟು ಎಕರೆ ಜಮೀನಿದೆ. ಆದರೆ, ಮನೆಯ ಪರಿಸ್ಥಿತಿ ಕೆಲಸಕ್ಕೆ ಸೇರಿಕೊಳ್ಳುವ ಕಡೆಗೆ ಸೆಳೆಯುತ್ತಿದೆ. ಅಪ್ಪ ಯಾವುದಾದರೂ ಕೆಲಸ ಪಡೆಯಲಿ ಎಂದು ಆಶಿಸುತ್ತಿದ್ದಾರೆ. ಆದರೂ ಕೃಷಿಯಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಎಂದು ಕೊಂಡಿದ್ದೇನೆ ಎಂದು ಹೇಳಿದರು.

ಐಎಎಸ್‌ ಕನಸಿದೆ:

ನಾನು ಕೃಷಿಯಲ್ಲಿ ಬಿಎಸ್ಸಿಗೆ ಅನಿರೀಕ್ಷಿತವಾಗಿ ಸೇರಿದೆ. ಆದರೆ, ಇಲ್ಲಿಗೆ ಬಂದ ಮೇಲೆ ಸರಿಯಾದ ಆಯ್ಕೆ ಮಾಡಿಕೊಂಡಿದ್ದೇನೆ ಎನಿಸಿತು. ಐಎಎಸ್‌ ಅಧಿಕಾರಿಯಾಗಬೇಕು ಎಂಬ ಕನಸು ನನ್ನದಾಗಿದೆ. ಅದಕ್ಕಾಗಿ ಪದವಿ ಅಗತ್ಯವಿದ್ದರಿಂದ ಕೃಷಿ ವಿವಿಗೆ ಸೇರಿದೆ. ಇಲ್ಲಿ ನಾವೆಷ್ಟುಸಂಶೋಧನೆಗಳು ಮಾಡಿದರೂ ಅದನ್ನು ಜಾರಿಗೆ ತರಲು ಕಾನೂನಿನ ಅಗತ್ಯವಿದೆ. ಆದ್ದರಿಂದ ಅಧಿಕಾರಿಯಾಗಿ ರೈತರಿಗೆ ನೆರವಾಗುವಂತೆ ಸೇವೆ ಸಲ್ಲಿಸುತ್ತೇನೆ ಎಂದು ಆರು ಚಿನ್ನದ ಪದಕ ಪಡೆದ ಕೃಷಿ ಮಾರುಕಟ್ಟೆಹಾಗೂ ಸಹಕಾರ ವಿಭಾಗದಲ್ಲಿ ಬಿಎಸ್ಸಿ ಅಧ್ಯಯನ ಮಾಡಿದ ವಿದ್ಯಾರ್ಥಿನಿ ವೈ.ಎಲ್‌.ರಂಜಿತಾ ಕನಸು ಬಿಚ್ಚಿಟ್ಟರು.

1042 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಸೋಮವಾರ ನಡೆದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 53ನೇ ಘಟಿಕೋತ್ಸವದಲ್ಲಿ ಈ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಲಾಯಿತು. 661 ಸ್ನಾತಕ, 309 ಸ್ನಾತಕೋತ್ತರ, ಹಾಗೂ 72 ಡಾಕ್ಟರೇಟ್‌ ಪದವಿಗಳನ್ನು ಪ್ರದಾನ ಮಾಡಲಾಯಿತು. ಅಲ್ಲದೆ, 39 ವಿಶ್ವವಿದ್ಯಾನಿಲಯದ ಚಿನ್ನದ ಪದವಿ, 3 ಸ್ನಾತಕ ಮತ್ತು 4 ಸ್ನಾತಕೋತ್ತರ ಆವರಣ ಚಿನ್ನದ ಪದಕ, 73 ದಾನಿಗಳ ಚಿನ್ನದ ಪದಕ, 21 ಚಿನ್ನದ ಪದಕ ಪ್ರಮಾಣ ಪತ್ರವೂ ಸೇರಿದಂತೆ ಒಟ್ಟು 119 ಪದಕಗಳನ್ನು ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌ ಸೇರಿದಂತೆ ವಿವಿಯ ಎಲ್ಲ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.