ಸೋಮವಾರ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಉಭಯ ಶಾಸಕರು ಕುಮಾರಸ್ವಾಮಿ ಹೇಳಿಕೆಯನ್ನು ಉಲ್ಲೇಖಿಸಿ ತೀವ್ರ ವಾಗ್ದಾಳಿ ನಡೆಸಿದರಲ್ಲದೆ, ಮೂರು ದಿನಗಳ ಕಾಲ ಸುಮ್ಮನಿದ್ದ ಕುಮಾರಸ್ವಾಮಿ ಈಗ ನಮ್ಮ ಮೇಲೆ ಎತ್ತಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಸೂಟ್‌'ಕೇಸ್ ಸಂಸ್ಕೃತಿ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಆಪಾದನೆಗೆ ಪಕ್ಷದ ಬಂಡಾಯ ಶಾಸಕರು ಗರಂ ಆಗಿದ್ದಾರೆ. ಪಕ್ಷದವರಿಗೇ ತಿಳಿಯದ ಅಪರಿಚಿತ ಬಿ.ಎಂ. ಫಾರೂಕ್ ರಾಜ್ಯಸಭಾ ಚುನಾವಣೆ ಅಭ್ಯರ್ಥಿಯಾದಾಗ ಸೂಟ್‌'ಕೇಸ್ ಬಂದಿಲ್ಲವೇ ಎಂದು ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಖಾರವಾಗಿ ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಬಾರದು. ಯಾರು ಯಾರು ಸೂಟ್‌'ಕೇಸ್ ತಗೊಂಡಿದ್ದಾರೆ ಮತ್ತು ಕೊಟ್ಟಿದ್ದಾರೆ ಎಂಬುದರ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದು ಸವಾಲು ಹಾಕಿದ್ದಾರೆ.

ಸೋಮವಾರ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಉಭಯ ಶಾಸಕರು ಕುಮಾರಸ್ವಾಮಿ ಹೇಳಿಕೆಯನ್ನು ಉಲ್ಲೇಖಿಸಿ ತೀವ್ರ ವಾಗ್ದಾಳಿ ನಡೆಸಿದರಲ್ಲದೆ, ಮೂರು ದಿನಗಳ ಕಾಲ ಸುಮ್ಮನಿದ್ದ ಕುಮಾರಸ್ವಾಮಿ ಈಗ ನಮ್ಮ ಮೇಲೆ ಎತ್ತಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಬಾಲಕೃಷ್ಣ ಅವರು ಮಾತನಾಡಿ, ನಮಗೇ ತಿಳಿಯದ ಫಾರೂಕ್ ಅವರು ಪಕ್ಷಕ್ಕೆ ದಿಢೀರ್ ಸೇರಿದ್ದು ಹೇಗೆ? ಅದರಲ್ಲೂ ಅವರು ರಾಜ್ಯಸಭಾ ಅಭ್ಯರ್ಥಿಯಾಗಿದ್ದು ಹೇಗೆ ? ಆಗ ಪಕ್ಷಕ್ಕೆ ಸೂಟ್‌'ಕೇಸ್ ಬರಲಿಲ್ಲವೇ. ಅಷ್ಟಕ್ಕೂ ಸೂಟ್‌'ಕೇಸ್ ಇಲ್ಲದೆ ಪಕ್ಷ ನಡೆಸಲು ಸಾಧ್ಯವಿಲ್ಲ ಎಂದು ಈ ಹಿಂದೆ ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಆದ್ದರಿಂದ ಸೂಟ್‌'ಕೇಸ್ ಪಡೆದಿರುವುದು ನಿಜ ಎಂಬುದನ್ನು ಅವರು ಒಪ್ಪಿಕೊಳ್ಳಬೇಕು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ
epaper.kannadaprabha.in