Asianet Suvarna News Asianet Suvarna News

3೦೦೦ ದೇವದಾಸಿಯರಿಗೆ ಇನ್ಫಿ ಪ್ರತಿಷ್ಠಾನ ನೆರವು

ಪ್ರತಿಷ್ಠಿತ ಪೆಂಗ್ವಿನ್ ಪಬ್ಲಿಷರ್ಸ್‌ ಪ್ರಕಟಿಸಿರುವ ಡಾ. ಸುಧಾಮೂರ್ತಿ ರಚಿತ ‘ತ್ರೀ ಥೌಸಂಡ್ ಸ್ಟಿಚಸ್’ ಪುಸ್ತಕ ಬಿಡುಗಡೆ ಸಮಾರಂಭ ಶುಕ್ರವಾರ ನಗರದ ಬಸವನಗುಡಿಯ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ನಡೆಯಿತು. ದೇವದಾಸಿಯರ ಜೀವನ ಕುರಿತ ಈ ಪುಸ್ತಕವನ್ನು ಹಿರಿಯ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ ಬಿಡುಗಡೆ ಮಾಡಿದರು.

Sudha Murty comes out with new book

ಬೆಂಗಳೂರು(ಜು.15): ದೇವದಾಸಿ’ಯಂತಹ ಅನಿಷ್ಟ ಪದ್ಧತಿಗಳು ದೇಶಾದ್ಯಂತ ಹರಡಿವೆ. ಅವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆ ಪದ್ಧತಿಗಳಲ್ಲಿ ಸಿಲುಕಿರುವ ಜನಾಂಗವನ್ನು ಸಂಘಟಿಸಿ ಜಾಗೃತಿ ಮೂಡಿಸುವುದೊಂದೇ ಪರಿಹಾರ ಎಂದು ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ. ಸುಧಾಮೂರ್ತಿ ಹೇಳಿದ್ದಾರೆ.

ಪ್ರತಿಷ್ಠಿತ ಪೆಂಗ್ವಿನ್ ಪಬ್ಲಿಷರ್ಸ್‌ ಪ್ರಕಟಿಸಿರುವ ಡಾ. ಸುಧಾಮೂರ್ತಿ ರಚಿತ ‘ತ್ರೀ ಥೌಸಂಡ್ ಸ್ಟಿಚಸ್’ ಪುಸ್ತಕ ಬಿಡುಗಡೆ ಸಮಾರಂಭ ಶುಕ್ರವಾರ ನಗರದ ಬಸವನಗುಡಿಯ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ನಡೆಯಿತು. ದೇವದಾಸಿಯರ ಜೀವನ ಕುರಿತ ಈ ಪುಸ್ತಕವನ್ನು ಹಿರಿಯ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ ಬಿಡುಗಡೆ ಮಾಡಿದರು.

ಬಳಿಕ ಸಭಿಕರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಈ ವೇಳೆ ತಮ್ಮ ಒಡೆತನದ ಇನ್ಫೋಸಿಸ್ ಫೌಂಡೇಷನ್ ಮೂಲಕ ರಾಯಚೂರು ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಿದ್ದೇವೆ. ಆದರೆ, ಇಡೀ ದೇಶದಲ್ಲಿ ಇಂತಹ ಕೆಟ್ಟ ಪದ್ಧತಿಗಳಿವೆ ಎಂದರು. ಎಲ್ಲವನ್ನೂ ಹೋಗಲಾಡಿಸಲು ನಿಮ್ಮ ಸಲಹೆ ಏನು? ಸರ್ಕಾರಗಳಿಗೆ ನೀವು ಹೇಳುವ ಪಾಠವಾದರೂ ಏನು? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಧಾ ಮೂರ್ತಿ ಅವರು, ದೇಶಾದ್ಯಂತ ಇರುವ ಇಂತಹ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಸರ್ಕಾರಗಳೂ ಅನೇಕ ಯೋಜನೆಗಳನ್ನು ತಂದಿವೆ. ಆದರೆ, ಅವುಗಳು ತಲುಪಬೇಕಾದವರಿಗೆ ತಲುಪುತ್ತಿಲ್ಲ, ಕೆಲವೆಡೆ ಯೋಜನೆಗಳ ಬಗ್ಗೆ ಮಾಹಿತಿಯೇ ಇಲ್ಲ,

ಇನ್ನು ಕೆಲವೆಡೆ ಯೋಜನೆಗಳು ದುರ್ಬಳಕೆಯಾಗುತ್ತಿವೆ. ಹಾಗಾಗಿ ಎಲ್ಲೆಲ್ಲಿ ಅಂತಹ ಕೆಟ್ಟ ಪದ್ಧತಿಗಳು ಇನ್ನೂ ಜೀವಂತವಾಗಿವೆ ಅಲ್ಲಿನ ಜನರನ್ನು ಸಂಘಟಿಸಿ, ತಾವು ಅನುಸರಿಸುತ್ತಿರುವ ಪದ್ಧತಿ ಅಥವಾ ಸಂಪ್ರದಾಯ ತಪ್ಪು, ಸರ್ಕಾರ ನಿಮಗಾಗಿ ಇಂತಹ ಯೋಜನೆಗಳನ್ನು ತಂದಿದೆ, ಉಪಯೋಗಿಸಿಕೊಂಡು ಮುಂದೆ ಬನ್ನಿ ಎಂದು ಹೆಚ್ಚುವರಿ ಸಹಾಯ, ಹಣಕಾಸಿನ ನೆರವು,ಕಾನೂನಿನ ಸಹಕಾರಗಳನ್ನು ಸಮಾಜಮುಖಿ ಸಂಸ್ಥೆಗಳು ಮಾಡಬೇಕು ಎಂದು ಸಲಹೆ ನೀಡಿದರು.

ಬಡವರು ಎಂದೂ ವಂಚಿಸುವುದಿಲ್ಲ, ವಂಚಿಸುವವರಲ್ಲಿ ಶ್ರೀಮಂತರೇ ಹೆಚ್ಚು. ರಾಯಚೂರು ಜಿಲ್ಲೆಯಲ್ಲಿ ಇಂದು ೩೦೦೦ ಮಹಿಳೆಯರು ದೇವದಾಸಿ ಪದ್ಧತಿಯಿಂದ ಹೊರಬಂದು ತಮ್ಮದೇ ಸ್ವಂತ ಬದುಕು ಕಟ್ಟಿಕೊಂಡಿದ್ದಾರೆ. ಅವರ ಮಕ್ಕಳು ವೈದ್ಯ, ಎಂಜಿನಿಯರ್, ಪೊಲೀಸ್ ಸೇರಿದಂತೆ ಅನೇಕ ವೃತ್ತಿ ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ನನ್ನ ಪತಿ ನಾರಾಯಣಮೂರ್ತಿ ಅವರಿಗೆ ಧನ್ಯವಾದ ಹೇಳಬಯಸುತ್ತೇನೆ. ತಮ್ಮ ಹಣವನ್ನ ಏನು ಮಾಡಿದೆ, ಯಾವುದಕ್ಕೆ ಖರ್ಚು ಮಾಡಿದೆ ಎಂದು ಎಂದೂ ಕೇಳಿಲ್ಲ. ನನ್ನ ಕೆಲಸಗಳಿಗೆ ಅವರು ನಿರಂತರವಾಗಿ ಸಹಕಾರ ನೀಡುತ್ತಾ ಬರುತ್ತಿದ್ದಾರೆ ಎಂದರು.

ಪುಸ್ತಕದ ಹಣ ಸ್ವಂತಕ್ಕೆ ಬಳಸಲ್ಲ: ನಾನು ಬರೆದ ಎಲ್ಲಾ ಪುಸ್ತಕಗಳಿಂದ ಬಂದ ಹಣವನ್ನು ನಾನು ನನ್ನ ಸ್ವಂತಕ್ಕೆ ಬಳಸಿಲ್ಲ. ಎಲ್ಲವನ್ನೂ ಬೇರೆಯವರ ನೆರವಿಗೆ ಬಳಕೆಯಾಗುತ್ತದೆ. ಪ್ರಾಮಾಣಿಕವಾಗಿ ದುಡಿದು ಹಣವನ್ನು ಖರ್ಚು ಮಾಡಬೇಕು. ನಮಗೆ ನಮ್ಮ ಕುಟುಂಬಕ್ಕೆ ಅಗತ್ಯದಷ್ಟು ಹಣ ಉಳಿಸಿಕೊಂಡು ಮಿಕ್ಕಿದ್ದನ್ನು ಸಮಾಜಸೇವೆಗೆ ಬಳಸಬೇಕು. ಕೆಲವರಿಗೆ ತಮಗೆ ಎಷ್ಟು ಹಣ, ಸಂಪತ್ತಿದ್ದರೂ ತೃಪ್ತಿಯಾಗುವುದಿಲ್ಲ. ಇನ್ನಷ್ಟು ಬೇಕೆಂಬ ಆಸೆ ಬೆಳೆ ಯುತ್ತಲೇ ಇರುತ್ತದೆ. ಆದರೆ, ನಮಗೆ ಬೇಕಿರುವುದು ನಾನು ಸುಖವಾಗಿರಬೇಕು ಎನ್ನುವುದಕ್ಕಿಂತ ಮೊದಲು ಬೇರೆಯವರ ಕಷ್ಟಗಳಿಗೆ ಸ್ಪಂಧಿಸುವ ಗುಣ ಎಂದರು.

ಭಾಷಾಂತರಕ್ಕೆ ಕೊಡಲ್ಲ:

ಮಾತೃಭಾಷೆಯಲ್ಲಿ ಬರೆಯುವುದರಿಂದ ನನ್ನ ಭಾವನೆಗಳನ್ನು ಸಮಂಜಸವಾಗಿ ವ್ಯಕ್ತಪಡಿಸಲು ಸುಲಭ ಎನ್ನುತ್ತೀರಿ, ಇಂಗ್ಲಿಷ್ ಬರವಣಿಗೆಯಲ್ಲಿ ಇದು ಸಾಧ್ಯವಾ ಎಂಬ ಪ್ರಶ್ನೆಗೆ, ನನ್ನ ಕನ್ನಡದ ಪುಸ್ತಕಗಳಂತೆ ಇಂಗ್ಲಿಷ್ ಪುಸ್ತಕಗಳನ್ನೂ ನಾನೇ ಬರೆಯುತ್ತೇನೆ. ಯಾರಿಗೂ ಭಾಷಾಂತಕ್ಕೆ ನೀಡುವುದಿಲ್ಲ. ಹಾಗಾಗಿ ಕನ್ನಡದ ಬರವಣೆಗೆಯಲ್ಲಿರುವಷ್ಟೇ ಭಾವನೆಗಳ ಆಳ, ಅಗಲ ಇಂಗ್ಲೀಷ್ ಪುಸ್ತಕಗಳನ್ನೂ ಇರುತ್ತದೆ ಎಂದು ಭಾವಿಸಿದ್ದೇನೆ ಎಂದರು. ಬಿಡುವಿಲ್ಲದ ಸಮಯದಲ್ಲಿ ಬರವಣಿಗೆಗೆ ಹೇಗೆ ಸಮಯ ಕಾಯ್ದಿರಿಸುವಿರಿ ಎಂಬ ಮತ್ತೊಬ್ಬರ ಪ್ರಶ್ನೆಗೆ, ಪ್ರತಿಯೊಬ್ಬರಿಗೂ ದಿನದಲ್ಲಿ 24

ಗಂಟೆಯೇ ದೊರೆಯುವುದು. ಸಮಯ ಮಾಡಿ ಕೊಳ್ಳಬೇಕು. ನಾನು ಮದುವೆ, ಹುಟ್ಟು ಹಬ್ಬದಂತಹ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ಆ ಸಮಯವನ್ನು ಬರವಣಿಗೆಗೆ ಉಪಯೋಗಿಸುತ್ತೇನೆ ಎಂದರು.

ಅಭಯ್ ಕಾರ್ಯ ಶ್ಲಾಘನೀಯ:

ರಾಯಚೂರು ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ನಿರ್ಮೂಲನೆಗೆ ತನ್ನ ವೃತ್ತಿಯನ್ನು ಬಿಟ್ಟು ಬಂದು ಇನ್ಫೋಸಿಸ್ ಸೇರಿ ಸೇವೆ ಸಲ್ಲಿಸುತ್ತಿರುವ ಅಭಯ್ ಅವರ ಕಾರ್ಯ ಶ್ಲಾಘನೀಯ. 16 ವರ್ಷದಿಂದ ಅವರು ನಮ್ಮ ಜತೆ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಅವರಿಗೆ 10 ಸಾವಿರ ರು. ವೇತನ ನೀಡಲಾಯಿತು. ಆದರೆ, ಅವರು ತನಗೆ ಆರೇ ಸಾವಿರ ಸಾಕು ಎಂದು ಅಷ್ಟಕ್ಕೇ ತೃಪ್ತಿಯಿಂದ ಕೆಲಸ ಮಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನನ್ನ ಬರವಣಿಗೆಯನ್ನು ಪ್ರೋತ್ಸಾಹಿಸಿದ್ದು ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ ಮತ್ತು ಉದ್ಯಮಿ ಜಿಆರ್‌ಡಿ ಟಾಟಾ. ಇಂದಿನ ತ್ರಿ ತೌಸೆಂಡ್ ಸ್ಟಿಚಸ್ ಪುಸ್ತಕ 16ನೇ ಇಂಗ್ಲಿಷ್ ಪುಸ್ತಕ ಎಂದು ಹೇಳಿದರು.

(ಕನ್ನಡಪ್ರಭ ವಾರ್ತೆ)

 

         

Follow Us:
Download App:
  • android
  • ios