ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರದ ಸಚಿವ ನಿತಿನ್ ನಬಿ ಆಯ್ಕೆ, ಶುಭಕೋರಿದ ಜೆಪಿ ನಡ್ಡಾ, ಬಿಜೆಪಿಯ ಡೈನಾಮಿಕ್ ನಾಯಕ ಎಂದೇ ಗುರಿತಿಸಿಕೊಂಡಿರುವ ನಿತಿನ್ ನಬಿ ಆಯ್ಕೆಗೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಯಾರು ಈ ನಿತಿನ್ ನಬಿ?
ನವದೆಹಲಿ (ಡಿ.14) ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರದ ಸಚಿವ ನಿತಿನ್ ನಬಿ ಆಯ್ಕೆಯಾಗಿದ್ದಾರೆ. ನಿತಿಶ್ ಕುಮಾರ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ನಿತಿನ್ ನಬಿಗೆ ಶುಭಾಶಗಳ ಮಹಾಪೂರವೇ ಹರಿದು ಬಂದಿದೆ. ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್ ಸರ್ವಾನುಮತದಿಂದ ನಿತಿನ್ ನಬಿಯನ್ನು ಆಯ್ಕೆ ಮಾಡಿದೆ. ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿತಿನ್ ನಬಿಯನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
ನಿತಿನ್ ನಬಿ ಆಯ್ಕೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ನಾಯಕ ನಿತಿನ್ ನಬಿಗೆ ಅಭಿನಂದನೆಗಳು. ಯುವ ನಾಯಕ ತನ್ನ ಕಠಿಣ ಪರಿಶ್ರಮದ ಮೂಲಕ ಪಕ್ಷದಲ್ಲಿ ಅಪಾರ ಅನುಭವ ಪಡೆದಿದ್ದಾರೆ. ಬಿಹಾರದಲ್ಲಿ ಶಾಸಕರಾಗಿ, ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಜನರ ಆಶೋತ್ತರಗಳು, ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಪ್ರತಿಯೊಬ್ಬರನ್ನು ಗೌರವದಿಂದ ಕಾಣುವ ನಿತಿನ್ ನಬಿ ಕಾರ್ಯಾಧ್ಯಕ್ಷತೆಯಲ್ಲಿ ಬಿಜೆಪಿ ಮತ್ತಷ್ಟು ಉತ್ತುಂಗಕ್ಕೆ ಏರಲಿದೆ. ನಿತಿನ್ ನಬಿನ್ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬಿಹಾರದ ಕಾಯಸ್ಥ ಸಮುದಾಯದ ನಾಯಕ
ಬಿಹಾರದ ಕಾಯಸ್ಥ ಸಮುದಾಯದ ನಾಯಕನಾಗಿರುವ ನಿತಿನ್ ನಬಿನ್ ಬಿಜೆಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಧಿಕಾರವದಿ ಮುಗಿದಿದೆ. ಲೋಕಸಭೆ ಚುನಾವಣೆ ಬಳಿಕವೂ ಅವಧಿ ವಿಸ್ತರಣೆ ಮಾಡಲಾಗಿತ್ತು. ಜೆಪಿ ನಡ್ಡಾ ಬಳಿಕ ನಿತಿನ್ ನಬಿನ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಲಿದ್ದಾರೆ ಎಂದು ವರದಿಯಾಗಿದೆ. ಜನವರಿ 2020ರಲ್ಲಿ ಜೆಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು. ಬಿಜಿಪಿಯ ಡೈನಾಮಿಕ್ ಲೀಡರ್ ನಿತಿನ್ ನಬಿನ್ ಆಯ್ಕೆಗೆ ಜೆಪಿ ನಡ್ಡಾ ಸಂತಸ ಹಂಚಿಕೊಂಡಿದ್ದಾರೆ.
ತಂದೆ ಸಾವಿನ ಬಳಿಕ ಬಿಜೆಪಿ ಸೇರಿಕೊಂಡ ನಿತಿನ್ ನಬಿನ್
ನಿತಿನ್ ನಬಿನ್ ಕುಟುಂಬ ರಾಜಕೀಯ ಹಿನ್ನಲೆ ಹೊಂದಿದೆ. ನಿತಿನ್ ನಬಿನ್ ತಂದೆ ನಬಿನ್ ಕಿಶೋರ್ ಪ್ರಸಾದ್ ಸಿನ್ಹ ಬಿಜೆಪಿಯ ಹಿರಿಯ ನಾಯಕರಾಗಿದ್ದರು. ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಂದೆ ನಿಧನದ ಬಳಿಕ ಬಿಜೆಪಿಯಲ್ಲಿ ನಿತಿನ್ ನಬಿನ್ ಸಕ್ರಿಯರಾದರು. ಹಂತ ಹಂತವಾಗಿ ಬಿಜೆಪಿಯಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಕಾರ್ಯಕರ್ತನಾಗಿ, ಮುಖಂಡನಾಗಿ, ಶಾಸಕನಾಗಿ ಬಳಿಕ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ನಿತಿಶ್ ಕುಮಾರ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


