Asianet Suvarna News Asianet Suvarna News

ಚುನಾವಣಾ ಪ್ರಚಾರಕ್ಕೆ ಕಿಚ್ಚ ಸುದೀಪ್‌ ಬರಲ್ಲ?

ಚುನಾವಣೆಯ ಹೊಸ್ತಿಲಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಾಕಷ್ಟುಕುತೂಹಲ ಮೂಡಿಸಿರುವ ಖ್ಯಾತ ಚಿತ್ರನಟ ಸುದೀಪ್‌ ಅವರು ರಾಜಕೀಯ ಪ್ರವೇಶಿಸುವುದು ಇರಲಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷದ ಪರ ಪ್ರಚಾರಕ್ಕೂ ತೆರಳದೆ ಚಿತ್ರವೊಂದರ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ.

Sudeep Not Participate In Election Campaign

ವಿಜಯ್‌ ಮಲಗಿಹಾಳ

ಬೆಂಗಳೂರು : ಚುನಾವಣೆಯ ಹೊಸ್ತಿಲಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಾಕಷ್ಟುಕುತೂಹಲ ಮೂಡಿಸಿರುವ ಖ್ಯಾತ ಚಿತ್ರನಟ ಸುದೀಪ್‌ ಅವರು ರಾಜಕೀಯ ಪ್ರವೇಶಿಸುವುದು ಇರಲಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷದ ಪರ ಪ್ರಚಾರಕ್ಕೂ ತೆರಳದೆ ಚಿತ್ರವೊಂದರ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ.

ಸ್ಯಾಂಡಲ್‌ವುಡ್‌ನ ಕೆಸಿಸಿ ಕ್ರಿಕೆಟ್‌ ಟೂರ್ನಿ ಮುಗಿಸಿದ ನಂತರ ಸುದೀಪ್‌ ಅವರು ಸೂರಪ್ಪಬಾಬು ನಿರ್ಮಾಣದ ‘ಕೋಟಿಗೊಬ್ಬ 3’ ಚಲನಚಿತ್ರದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಪ್ರಯಾಣ ಬೆಳೆಸಿ ಮತದಾನಕ್ಕೂ ಎರಡು ದಿನ ಮೊದಲು ಬೆಂಗಳೂರಿಗೆ ವಾಪಸಾಗುವ ನಿರೀಕ್ಷೆಯಿದೆ. ಈ ಸಂಬಂಧ ಸಿದ್ಧತೆ ನಡೆಯುತ್ತಿದೆ. ಕೊನೆಯ ಕ್ಷಣದ ಅನಿರೀಕ್ಷಿತ ಬದಲಾವಣೆ ಹೊರತುಪಡಿಸಿದರೆ ಮುಂದಿನ ವಾರಾಂತ್ಯದ ವೇಳೆ ವಿದೇಶಕ್ಕೆ ತೆರಳುವ ಸಂಭವ ಹೆಚ್ಚು ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.

ಅಂದರೆ, ಸುದೀಪ್‌ ಅವರು ಎಲ್ಲ ರಾಜಕೀಯ ಪಕ್ಷಗಳಿಂದಲೂ ಅಂತರ ಕಾಪಾಡಿಕೊಳ್ಳುವ ಮೂಲಕ ಚುನಾವಣಾ ರಾಜಕಾರಣದಿಂದ ದೂರ ಉಳಿಯುವ ಮನಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.

ಸುದೀಪ್‌ ಅವರ ಚಿಕ್ಕಪ್ಪ ಸರೋವರ್‌ ಶ್ರೀನಿವಾಸ್‌ ಅವರು ಎರಡು ಬಾರಿ ಜೆಡಿಎಸ್‌ನಿಂದ ವಿಧಾನಪರಿಷತ್‌ ಸದಸ್ಯರಾಗಿದ್ದವರು. ಇತ್ತೀಚೆಗಷ್ಟೇ ಅವರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಚಿಕ್ಕಪ್ಪ ರಾಜಕೀಯದಲ್ಲಿದ್ದರೂ ಸುದೀಪ್‌ ಅವರು ಮಾತ್ರ ರಾಜಕಾರಣದಿಂದ ಅಂತರ ಕಾಪಾಡಿಕೊಂಡೇ ಬಂದಿದ್ದಾರೆ.

ಕಳೆದ ವಾರವಷ್ಟೇ ಸುದೀಪ್‌ ಅವರು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಮನೆಗೆ ತೆರಳಿ ಉಪಾಹಾರ ಸೇವಿಸಿದ್ದರು. ಅಲ್ಲದೆ, ಸುದೀರ್ಘವಾಗಿ ಕುಮಾರಸ್ವಾಮಿ ಮತ್ತವರ ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ್ದರು. ಅದರ ಬೆನ್ನಲ್ಲೇ ಗುರುವಾರ ಬೆಳಗ್ಗೆ ಸುದೀಪ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೂ ಭೇಟಿ ನೀಡಿ ಚರ್ಚೆ ನಡೆಸಿದರು. ಕುಮಾರಸ್ವಾಮಿ ಅವರನ್ನು ಭೇಟಿಯಾಗುವ ಕೆಲ ದಿನಗಳ ಮೊದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸ್ಯಾಂಡಲ್‌ವುಡ್‌ನ ಕೆಸಿಸಿ ಕ್ರಿಕೆಟ್‌ ಟೂರ್ನಿಗೆ ಆಹ್ವಾನ ನೀಡಿದ್ದರು.

ಈ ಎಲ್ಲ ಬೆಳವಣಿಗೆಗಳ ನಡುವೆ ಬಿಜೆಪಿಯ ಕೆಲವು ನಾಯಕರು ಕೂಡ ಸುದೀಪ್‌ ಅವರನ್ನು ಸಂಪರ್ಕಿಸಿ ತಮ್ಮ ಪಕ್ಷಕ್ಕೆ ಸೇರ್ಪಡೆಯಾಗುವ ಕುರಿತಂತೆ ಹಾಗೂ ಪಕ್ಷದ ಪರ ಪ್ರಚಾರ ನಡೆಸುವಂತೆ ಮನವಿ ಮಾಡಿದ್ದರು.

ಹೀಗೆ ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳೂ ತಮಗೆ ಚುನಾವಣಾ ರಾಜಕಾರಣದಲ್ಲಿ ಭಾಗಿಯಾಗುವಂತೆ ಮನವಿ ರೂಪದ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಸುದೀಪ್‌ ಅವರು ಚುನಾವಣಾ ಪ್ರಚಾರ ಅವಧಿ ಮುಗಿಯುವವರೆಗೆ ಶೂಟಿಂಗ್‌ ನೆಪದಲ್ಲಾದರೂ ದೂರ ಉಳಿದರೆ ಹೇಗೆ ಎಂಬ ಚಿಂತನೆಯನ್ನು ಅವರ ಆಪ್ತರ ಬಳಿ ಹಂಚಿಕೊಂಡಿದ್ದಾರೆ. ಇದಕ್ಕೆ ಅವರ ಆಪ್ತರೂ ಸಹಮತ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios