ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ ಆಚರಿಸಲಾದ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಕಾವೇರಿ ಕಿಚ್ಚಿಗೆ ಇವತ್ತು ಕರುನಾಡು ಹೊತ್ತಿ ಉರಿದಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆದ ಅನ್ಯಾಯ ಖಂಡಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಬಂದ್ ಗೆ ಭಾರೀ ಬೆಂಬಲ ದೊರೆತಿದೆ. ಬಂದ್ಗೆ ಸರ್ಕಾರಿ ಸಾರಿಗೆ ಸಂಸ್ಥೆ ನೌಕರರು ಬೆಂಬಲ ವ್ಯಕ್ತಪಡಿಸಿರುವುದರಿಂದ ರಾಜ್ಯಾದ್ಯಂತ ಸರ್ಕಾರಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ತಬ್ದವಾಗಿದೆ. ಬಂದ್ ಹಿನ್ನಲೆಯಲ್ಲಿ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಂದ್ ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೈಸೂರು, ಮಂಡ್ಯ, ಬೆಂಗಳೂರು, ರಾಮನಗರ, ಕೋಲಾರ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಂದ್ ಜೋರಾಗಿತ್ತು. ಪ್ರತಿಭಟನೆಗಳ ವಿಭಿನ್ನ ರೂಪಗಳ ಒಂದು ನೋಟ ಇಲ್ಲಿದೆ.
ಕಾವೇರಿ ನಾಲೆಗೆ ಹಾರಿದ ರೈತರ ರಕ್ಷಣೆ
ಕಾವೇರಿ ಹೋರಾಟ ಸಂಬಂಧ ನದಿಗೆ ಹಾರಿದ್ದ ನಾಲ್ವರು ರೈತರಲ್ಲಿ ಮೂವರ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ವಿಷದ ಬಾಟಲಿ ಹಿಡಿದು ಹಾರಿದ್ದ ರಾಮೇಗೌಡನನ್ನು 1 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಅಗ್ನಿಶಾಮಕ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ರಕ್ಷಿಸಿದ್ದಾರೆ. ಮತ್ತೊಬ್ಬ ರೈತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸದ್ಯ ಅಸ್ವಸ್ಥ ಮೂವರು ರೈತರನ್ನ ಮೈಸೂರಿನ ಕೆಆರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಕೆಆರ್ಎಸ್ ಸೇತುವೆಯಿಂದ ನಾಲ್ವರು ರೈತರು ನೀರು ಬಿಡುಗಡೆ ವಿರೋಧಿಸಿ ನದಿಗೆ ಹಾರಿದ್ದರು.
ಹಲವೆಡೆ ಜಯಾಲಲಿತಾಗೆ ತಿಥಿ
ಕಾವೇರಿ ಪ್ರತಿಭಟನೆ ಹಿನ್ನೆಲೆಯಲ್ಲಿ ದಾವಣಗೆರೆ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಜಯಲಲಿತಾ ಗೆ ಮುಕ್ತಿ ನೀಡಿ ಎಳ್ಳು ನೀರು ಬಿಡಲಾಯ್ತು.ಆನೇಕಲ್ ನಲ್ಲಿ ತಲೆ ಬೋಳಿಸಿಕೊಂಡು ಜಯಲಲಿತಾ ತಿಥಿ ಮಾಡಿಕೊಡಲಾಯ್ತು. ಇನ್ನು ಚಿಕ್ಕಬಳ್ಳಾಪುರದಲ್ಲಿ ಅಂಚೆ ಕಛೇರಿ ಮುಂಭಾಗದಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಕಛೇರಿ ಮುಂಭಾಗದಲ್ಲೇ ಕಾರ್ಯಕರ್ತರಿಂದ ತಲೆ ಕೂದಲುನ್ನು ಬೋಳಿಸಿಕೊಂಡು ಧರಣಿ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ತಲೆಬೋಳಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ.
ಜ್ಯೂ.ಉಪ್ಪಿ ಸ್ಪೆಷಲ್ ಪ್ರೊಟೆಸ್ಟ್
ಬಾಗಲಕೋಟೆಯಲ್ಲಿ ಜ್ಯೂನಿಯರ್ ಉಪೇಂದ್ರ ನೇತೃತ್ವದ ತಂಡವೊಂದು ವಿಭಿನ್ನ ಪ್ರತಿಭಟನೆ ನಡೆಸಿತು. ಮೋದಿ, ಸಿದ್ದರಾಮಯ್ಯ ಮತ್ತು ಜಯಲಲಿತಾರ ವಿರುದ್ಧ ವ್ಯಂಗ್ಯ ರೂಪಕ ನಡೆಸಿ ವಿಶಿಷ್ಟವಾಗಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಜಯಕರ್ನಾಟಕ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣ ರಸ್ತೆಯಿಂದ ಆರಂಭಗೊಂಡು ನಗರದ ವಿವಿಧೆಡೆ ಸಂಚರಿಸಿತು. ಬಸವೇಶ್ವರ ವೃತ್ತದ ಬಳಿ ಬಂದಾಗ ಮೋದಿ, ಸಿದ್ದರಾಮಯ್ಯ ಮತ್ತು ಜಯಲಲಿತಾ ಅವರ ಹೆಸರಿನ ನಾಮಫಲಕ ಹೊಂದಿದ್ದ ರೂಪಧಾರಿಗಳಿಗೆ ಕೈಗೆ ಹಗ್ಗವನ್ನು ಕಟ್ಟಿ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಜ್ಯೂನಿಯರ್ ಉಪೇಂದ್ರನಾಗಿದ್ದ ಆರ್.ಡಿ.ಬಾಬು ಜನರ ಗಮನ ಸೆಳೆದರು. ಅಲ್ಲದೆ ಉಪೇಂದ್ರನ ಪಂಚಿಂಗ್ ಡೈಲಾಗ್ಗಳ ಮಾದರಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿದರು.
ಅಂಬಿ ನಿವಾಸಕ್ಕೆ ಮುತ್ತಿಗೆ
ಕಾವೇರಿ ಹೋರಾಟದ ಬಿಸಿ ಮಾಜಿ ಸಚಿವ ಮಂಡ್ಯದ ಶಾಸಕ ಅಂಬರೀಶ್ಗೂ ಭಾರೀ ಬಿಸಿ ತಟ್ಟಿದೆ. ಬೆಂಗಳೂರಿನ ಜೆಪಿ ನಗರದ ನಿವಾಸಕ್ಕೆ ಕನ್ನಡಪರ ಸಂಘಟನೆಗಳು ಮುತ್ತಿಗೆ ಹಾಕಲು ಪ್ರಯತ್ನಿಸಿದವು. ನಂತರ ಮಾತನಾಡಿದ ಅಂಬರೀಶ್ ಪುತ್ರ ಅಭಿಷೇಕ್ಗೌಡ, ನಮ್ಮ ತಂದೆಯವರು ಅಮೆರಿಕಕ್ಕೆ ಹೋಗಿದ್ದಾರೆ. ಬೆಂಗಳೂರಿಗೆ ಬಂದ ನಂತರ ಈ ಬಗ್ಗೆ ಮಾತನಾಡಲಿದ್ದಾರೆ. ಈ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಅಂತ ಹೇಳಿದ್ದಾರೆ. ಇನ್ನು ಅಮೆರಿಕಾದಿಂದಲೇ ಶಾಸಕ ಅಂಬಿ ಮನವಿ ಮಾಡಿದ್ದು ಶಾಂತಿಯುತ ಹೋರಾಟ ನಡೆಸುವಂತೆ ಮನವಿ ಮಾಡಿದ್ದಾರೆ.
ದೇವಿ ಹೊತ್ತು ಪ್ರತಿಭಟನೆ
ವಿಜಯಪುರದಲ್ಲಿ ಜೋಗತಿ ಯಲ್ಲಮ್ಮ ದೇವಿಯ ಪ್ರತಿಮೆ ತಲೆ ಮೇಲೆ ಹೊತ್ತು ಉಭಯ ನಾಯಕರುಗಳ ಭಾವ ಚಿತ್ರದ ಮೇಲೆ ಹೆಜ್ಜೆ ಹಾಕಿದಳು. ಕಾರ್ಯಕರ್ತರು ಹುರುದುಂಬಿಸುತ್ತಿದ್ದಂತೆ ಮತ್ತಷ್ಟು ಹುಮ್ಮಸ್ಸಿನಿಂದ ಮೈಯಲ್ಲಿ ದೇವರು ಬಂದಂತೆ ಜೋಗಮ್ಮ ಕುಣಿದಳು. ಇನ್ನು ಬೆಳಗಾವಿಯ ತಮಿಳು ಸಿಎಂ ಜಯಲಲಿತಾ ಅಣಕು ಶವಯಾತ್ರೆ ನಡೆಸಿ, ಅಣಕು ಅಂತ್ಯ ಸಂಸ್ಕಾರ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತ್ತ ಮೇಲೆ ಅತ್ತಂತೆ ನಟಿಸಿ, ಬಾಯಿ ಬಡಿದುಕೊಂಡು ಮಹಿಳೆಯರು ವಿನೂತನ ಪ್ರತಿಭಟನೆ ನಡೆಸಿದರು.
ಸಿಎಂ ಸಚಿವರಿಗೆ ಸೀರೆ ತೊಡಿಸಿ ಪ್ರತಿಭಟನೆ
ಮಂಡ್ಯದಲ್ಲಿ ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಡಿಕೆಶಿ, ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಗೆ ಸೀರೆ, ರವಿಕೆ, ಲಂಗ, ಹೂವು ಮೆರವಣಿಗೆಯಲ್ಲಿ ಕಳುಹಿಸುವ ಮೂಲಕ ಪ್ರತಿಭಟನೆ ನಡೆಯಿತು. ಕೊಪ್ಪಳದಲ್ಲೂ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನಮಂತ್ರಿ ಸಿದ್ದರಾಮಯ್ಯಗೆ ಸೀರೆ ಉಡಿಸಿದ ಫ್ಲೇಕ್ಸ್ಗೆ ಬಾರುಕೋಲು ಏಟು ಹೊಡೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಯುವಸೈನ್ಯದ ಕಾರ್ಯಕರ್ತರು ಉರುಳು ಸೇವೆ ಮಾಡಿದರು.
ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ
ಮಂಡ್ಯದ ಸಂಜಯ ಸರ್ಕಲ್ ನಲ್ಲಿ ಲಯನ್ಸ್ ಕ್ಲಬ್, ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ಮಾಡಿದರು. ಇನ್ನೊಂದೆಡೆ ಮಹಿಳೆಯರು ಕೂಡಾ ತಲೆ ಮೇಲೆ ಕಲ್ಲು ಹೊತ್ತುಕೊಂಡು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಬಿಜೆಪಿ ಮುಖಂಡನೊಬ್ಬ ಎದೆ ಮೇಲೆ ಕಲ್ಲು ಹಾಕಿಕೊಂಡರು. ಪ್ರತಿಭಟನೆಯಲ್ಲಿ ೩ ವರ್ಷದ ಹೆಣ್ಣುಮಗು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮಂಡ್ಯದಲ್ಲಿ ಬಿಂದಿಗೆ ಉರುಳಿಸಿ ಪ್ರತಿಭಟನೆ ಮಾಡಲಾಯ್ತು. ಸಂಜಯ್ ಸರ್ಕಲ್ ನಲ್ಲಿ ಬಲೂನ್ ಪ್ರೊಟೆಸ್ಟ್ ಗಮನ ಸೆಳೆಯಿತು. ಇನ್ನು ರಸ್ತೆಯಲ್ಲಿ ಕರಾಟೆ ಪ್ರದರ್ಶನ - ರಸ್ತೆಯಲ್ಲಿ ಶಟ್ಲ್ ಬ್ಯಾಡ್ಮಿಂಟನ್ ಆಡಿದ ಹುಡುಗಿಯರು ಪ್ರತಿಭಟನೆಗೆ ಬೆಂಬಲ ನೀಡಿದರು.
ಪ್ರತಿಭಟನೆಗೆ ಅಂಚೆ ಕಚೇರಿ ಉಡೀಸ್
ಪ್ರತಿಭಟನಾಕಾರರ ಆಕ್ರೋಶಕ್ಕೆ ಮೈಸೂರಿನ ಹೊರ ವಲಯದ ಬೆಳವಾಡಿ ಅಂಚೆ ಕಚೇರಿ ಉಡೀಸ್ ಆಗಿತ್ತು. ಬಂದ್ ಇದ್ದರೂ ಕಚೇರಿ ತೆರೆದಿದ್ದಕ್ಕೆ ಕಲ್ಲು ತೂರಿ ಕಿಟಕಿ ಗಾಜು ಪುಡಿಗಟ್ಟಿದರು. ದಪ್ಪ ದಪ್ಪ ಕಲ್ಲುಗಳನ್ನು ಎಸೆದು ಶೆಲ್ಟರ್ ಜಖಂಗೊಳಿಸಿದರು. ಭಯಗೊಂಡ ಅಂಚೆ ಸಿಬ್ಬಂದಿ ಶಟರ್ ಎಳೆದು ಪರಾರಿಯಾದರು.
ಬೆಂಗಳೂರಿನ ಶಾಂತಿನಗರ ಮೆಟ್ರೋ ಕಚೇರಿ ಮೇಲೆ ದಾಳಿ ಮಾಡಿದ ಕನ್ನಡಪರ ಸಂಘಟನೆ ಕಾರ್ಯಕರ್ತರು ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು.
ರೈತರ ಮೇಲೆ ಖಾಕಿ ಕ್ರೌರ್ಯ
ಕೃಷ್ಣರಾಜ ಸಾಗರದ ಬಳಿ ರೈತರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಭಾರೀ ಭದ್ರತೆ ಬೇಧಿಸಿ ಒಳನುಗ್ಗಲು ಯತ್ನಿಸಿದ ರೈತರ ಮೇಲೆ ಖಾಕಿ ಕ್ರೌರ್ಯ ಮೆರೆದಿದ್ದಾರೆ. ಡ್ಯಾಮಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಹಸ್ರಾರು ರೈತರ ಮೇಲೆ ಮನಸೋ ಇಚ್ಛೆ ಲಾಠಿ ಬೀಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಪ್ರತಿಭಟನಕಾರರು ಗದ್ದೆಗೆ ಇಳಿದು ಓಡಿದರು, ನೀರಿಗೆ ಹಾರಿದರು.. ಘಟನೆಯಲ್ಲಿ ನಾಲ್ವರು ರೈತರಿಗೆ ಗಂಭೀರ ಗಾಯಗಳಾಗಿದ್ದು ಹಲವರಿಗೆ ತೀವ್ರ ಪೆಟ್ಟಾಗಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಕರಾವಳಿ ಜಿಲ್ಲೆಗಳಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ
ಕಾವೇರಿ ನೀರು ಹಂಚಿಕೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಖಂಡಿಸಿ ಕರೆ ನೀಡಲಾದ ಕರ್ನಾಟಕ ಬಂದ್ಗೆ ಕರಾವಳಿ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲಾ ಕಾಲೇಜಿಗೆ ಜಿಲ್ಲಾಡಳಿತ ರಜೆ ನೀಡಿದ್ದರೂ ನಗರದ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಖಾಸಗಿ ಮತ್ತು ಸಾರಿಗೆ ಸಂಸ್ಥೆ ಬಸ್ಗಳ ಓಡಾಟವೂ ಎಂದಿನಂತೆ ಇತ್ತು. ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಜನಜೀವನ ಸಹಜವಾಗಿತ್ತು. ಇನ್ನು ವಿವಿಧ ಕನ್ನಡಪರ ಸಂಘಟನೆಗಳು ಸಾಂಕೇತಿಕ ಬಂದ್ ನಡೆಸಿದ್ವು. ಜಿಲ್ಲಾ ಬಿಜೆಪಿ ಕೂಡಾ ಜಾಥಾ ಮತ್ತು ಪ್ರತಿಭಟನಾ ಸಭೆ ನಡೆಸಿತು.
ಕಾವೇರಿ ಹೋರಾಟಕ್ಕೆ ಚಿತ್ರರಂಗ ಸಾಥ್
ಕನ್ನಡ ಚಿತ್ರರಂಗ ಕಾವೇರಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಇಂದು ಚಿತ್ರರಂಗ ಸಂಪೂರ್ಣ ಬಂದ್ ಆಗಿತ್ತು. ಫಿಲಂ ಚೇಂಬರ್ ಮುಂಭಾಗದಲ್ಲಿ ಕನ್ನಡ ಚಿತ್ರರಂಗದ ನಟ ನಟಿಯರು ಬೆಳಗ್ಗಿನಿಂದ ಮದ್ಯಾಹ್ನದವರೆಗೆ ಧರಣಿ ನಡೆಸಿದ್ರು. ಸ್ಯಾಂಡಲ್ ವುಡ್ ನ ಪ್ರತಿಭಟನೆಗೆ ನೆಚ್ಚಿನ ತಾರೆಯರ ಅಭಿಮಾನಿಗಳು ಆಗಮಿಸಿ ಸಪೋರ್ಟ್ ನೀಡಿದರು. ಚಿತ್ರರಂಗದ ತಾರೆಯರೆಲ್ಲಾ ರೈತರ ಆಕ್ರೋಶಕ್ಕೆ ಕೈ ಜೋಡಿಸಿ,ನೆರೆ ರಾಜ್ಯ ಮತ್ತು ರಾಜ್ಯದ ರೈತರಿಗೆ ಸಹಾಯಕ್ಕೆ ಬಾರದ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಶಿವರಾಜ್ ಕುಮಾರ್,ಉಪೇಂದ್ರ,ಜಗ್ಗೇಶ್,ಗಣೇಶ್,ದರ್ಶನ್,ಪುನೀತ್ ರಾಜ್ ಕುಮಾರ್, ನಟಿಯರಾದ ಹರಿಪ್ರಿಯಾ,ರಚಿತಾರಾಮ್,ರಾಗಿಣಿ,ತಾರಾ,ಶ್ರುತಿ ಸೇರಿದಂತೆ ಹಲವಾರು ತಾರೆಯರು ಫಿಲಂ ಚೇಂಬರ್ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
