Asianet Suvarna News Asianet Suvarna News

ವಿದೇಶಾಂಗ ಖಾತೆಗೆ ಮೊದಲ ಬಾರಿ ಮಾಜಿ ಅಧಿಕಾರಿ ನೇಮಕ

ಮಹತ್ವದ ಹುದ್ದೆಯೊಂದನ್ನು ಮೊದಲ ಬಾರಿಗೆ ನಿವೃತ್ತ ಅಧಿಕಾರಿಯೊಬ್ಬರಿಗೆ ನೀಡಲಾಗಿದೆ. ಯಾವುದು ಖಾತೆ..?

Subrahmanyam Jaishankar gets Ministry of External Affairs
Author
Bengaluru, First Published Jun 1, 2019, 8:45 AM IST

ನವದೆಹಲಿ: ವಿದೇಶಾಂಗ ಖಾತೆಯ ನೂತನ ಸಚಿವರನ್ನಾಗಿ ಎಸ್‌. ಜೈಶಂಕರ್‌ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡುವುದರೊಂದಿಗೆ, ಇಂಥ ಮಹತ್ವದ ಹುದ್ದೆಯೊಂದನ್ನು ಮೊದಲ ಬಾರಿಗೆ ನಿವೃತ್ತ ಅಧಿಕಾರಿಯೊಬ್ಬರಿಗೆ ನೀಡಿದಂತಾಗಿದೆ. ಚೀನಾ ಮತ್ತು ಅಮೆರಿಕ ವಿಷಯದಲ್ಲಿ ತಜ್ಞರೆಂದ ಹಿರಿಮೆ ಹೊಂದಿರುವ ಎಸ್‌.ಜೈಶಂಕರ್‌, ತಮಗೆ ನೀಡಲಾದ ಹೊಸ ಹೊಣೆಯನ್ನು ಹೇಗೆ ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಇದೀಗ ಎಲ್ಲರಲ್ಲಿದೆ.

ವಿದೇಶಾಂಗ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತಿ ಹೊಂದಿ 16 ತಿಂಗಳ ಬಳಿಕ, ತಾವು ಅಧಿಕಾರಿಯಾಗಿದ್ದ ಖಾತೆಗೇ ಸಚಿವರಾಗಿ ಮರಳಿರುವ ಜೈಶಂಕರ್‌, ಮುಂದಿನ ದಿನಗಳಲ್ಲಿ ಜಿ-20, ಶಾಂಗೈ ಸಹಕಾರ ಸಂಘಟನೆ, ಬ್ರಿಕ್ಸ್‌ ಸಂಘಟನೆ ಸೇರಿದಂತೆ ವಿವಿಧ ಜಾಗತಿಕ ಸಂಘಟನೆಗಳಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟುಎತ್ತರಕ್ಕೆ ಏರಿಸುವ ಮಹತ್ವದ ಜವಾಬ್ದಾರಿ ಹೊಂದಿದ್ದಾರೆ. ಜೊತೆಗೆ ಈ ಹಿಂದೆ ಈ ಖಾತೆಯನ್ನು ನಿರ್ವಹಿಸಿದ್ದ ಸುಷ್ಮಾ ಸ್ವರಾಜ್‌, ಕೇವಲ ರಾಜತಾಂತ್ರಿಕ ಕೆಲಸಗಳಿಗೆ ಮಾತ್ರವೇ ಸೀಮಿತವಾಗದೇ, ವಿದೇಶದಲ್ಲಿ ಸಂಕಷ್ಟದಲ್ಲಿರುವ ಭಾರತೀಯರಿಗೆ ಮಾನವೀಯ ನೆರವು ಕಲ್ಪಿಸುವ ಮೂಲಕ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದರು. ಆ ಹೊಣೆಯನ್ನೂ ಮುಂದುವರೆಸಿಕೊಂಡು ಹೋಗುವ ಹೊಣೆ ಜೈಶಂಕರ್‌ ಅವರ ಮೇಲಿದೆ.

1977ನೇ ಬ್ಯಾಚಿನ್‌ ಐಎಫ್‌ಎಸ್‌ ಅಧಿಕಾರಿ ಜೈಶಂಕರ್‌ ಸಿಂಗಾಪುರ, ಜೆಕ್‌ ರಿಪಬ್ಲಿಕ್‌, ಅಮೆರಿಕ ಮತ್ತು ಚೀನಾದಲ್ಲಿ ಭಾರತೀಯ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಜೊತೆಗೆ 2007ರಲ್ಲಿ ಭಾರತ ಮತ್ತು ಅಮೆರಿಕ ನಡುವೆ ಮಾಡಿಕೊಳ್ಳಲಾದ ಪರಮಾಣು ಒಪ್ಪಂದದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. 2015ರಲ್ಲಿ ಅಂದಿನ ವಿದೇಶಾಂಗ ಇಲಾಖೆ ಕಾರ್ಯದರ್ಶಿಯಾಗಿದ್ದ ಸುಜಾತಾ ಸಿಂಗ್‌ ಅವರನ್ನು ತೆಗೆದು, ಆ ಸ್ಥಾನಕ್ಕೆ ಜೈಶಂಕರ್‌ ಅವರನ್ನು ನೇಮಕ ಮಾಡಿದಾಗ ಭಾರೀ ವಿರೋಧವೇ ಕೇಳಿಬಂದಿತ್ತು.

ಇನ್ನೊಂದು ವಿಶೇಷವೆಂದರೆ ಜೈಶಂಕರ್‌ ಅವರ ಪತ್ನಿ ಹೆಸರು ಕ್ಯೋಕೋ ಅವರು ಜಪಾನ್‌ ಮೂಲದವರು.

Follow Us:
Download App:
  • android
  • ios