ಲಕ್ನೋ (ಮೇ. 27): ಉತ್ತರ ಪ್ರದೇಶದ ಹೃದಯ ಭಾಗದಲ್ಲಿರುವ ಅಮೇಠಿ ಅಕ್ಷರಶಃ ನೆಹರು-ಗಾಂಧಿ ಕುಟುಂಬದ ಭದ್ರಕೋಟೆ. 1980ರಲ್ಲಿ ನೆಹರು-ಗಾಂಧಿ ಕುಟುಂಬದ ಕುಡಿ ಸಂಜಯ್‌ ಗಾಂಧಿ ಮೊಟ್ಟಮೊದಲ ಬಾರಿಗೆ ಇಲ್ಲಿ ಸ್ಪರ್ಧಿಸಿ ಗೆದ್ದರು. ಅಲ್ಲಿಂದ ನೆಹರು ಕುಟುಂಬದ ಭದ್ರಕೋಟೆಯಾಗಿ ಪರಿವರ್ತನೆಯಾಯಿತು.

ಕರೆ ಮಾಡಿ ಶುಭ ಕೋರಿದ ಪಾಕ್ ಪ್ರಧಾನಿಗೆ ಮೋದಿ ಶಾಂತಿ ಪಾಠ!

ರಾಹುಲ್‌ ಗಾಂಧಿ 2004ರಿಂದಲೂ ಇಲ್ಲಿಂದ ಸ್ಪರ್ಧಿಸಿ 3 ಬಾರಿ ಸಂಸತ್‌ ಪ್ರವೇಶಿಸಿದ್ದರು. ಅದಕ್ಕೂ ಮುನ್ನ ಇದು ಸೋನಿಯಾ ಗಾಂಧಿಯವರ ಕ್ಷೇತ್ರವಾಗಿತ್ತು. ಈಗ 39 ವರ್ಷಗಳಲ್ಲಿ ಮೊದಲ ಬಾರಿ ಸ್ಮೃತಿ ಇರಾನಿ ಎದುರು 55,000 ಮತಗಳ ಅಂತರದಿಂದ ಗಾಂಧಿ ಕುಟುಂಬ ಇಲ್ಲಿ ಸೋತಿದೆ. ಅದಕ್ಕಾಗಿ ಸ್ಮೃತಿ ಇರಾನಿ ಮಾಡಿದ ಮ್ಯಾಜಿಕ್‌ ಏನು? ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಗಾಂಧಿ ಕುಟುಂಬಕ್ಕೆ ಬಹುದೊಡ್ಡ ಆಘಾತ

2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಸ್ಪರ್ಧಿಸಿ ಸೋತಿದ್ದರು. ಈ ಬಾರಿ 55,000 ಮತಗಳ ಅಂತರದಲ್ಲಿ ರಾಹುಲ್‌ ಗಾಂಧಿ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್‌ನ ಭದ್ರಕೋಟೆಯೊಳಗೆ ಕಾಲಿಟ್ಟು ಇತಿಹಾಸ ನಿರ್ಮಿಸಿದ್ದಾರೆ. ದಶಕಗಳಿಂದ ಗಾಂಧಿ ಕುಟುಂಬಕ್ಕೆ ಮತಹಾಕುತ್ತಿದ್ದ ಮತದಾರರು ಈ ಬಾರಿ ಸ್ಮೃತಿ ಇರಾನಿ ಅವರಿಗೆ ಮತ ಹಾಕಿ ಗೆಲ್ಲಿಸಿದ್ದು ಏಕೆ ಎಂಬುದಕ್ಕೆ ಉತ್ತರ ಸ್ಮೃತಿ ಇರಾನಿ ಅವರ ನಿಷ್ಠೆ ಮತ್ತು ರಾಹುಲ್‌ ಗಾಂಧಿಯ ಆಲಸ್ಯ.

ಹೌದು 2014ರಿಂದಲೂ ಸ್ಮೃತಿ ಇರಾನಿ 2019ರ ಗೆಲುವಿಗೆ ಬೇಕಾದ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದರು. ತಮ್ಮ ಕ್ಷೇತ್ರಕ್ಕೆ ಆಗಾಗ ಭೇಟಿ ನೀಡುತ್ತಲೇ ಬಂದರು. ಮದುವೆ, ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಜನರಿಗೆ ಹತ್ತಿರವಾಗಿದ್ದಾರೆ, ಉದ್ಯೋಗ, ವಿದ್ಯಾರ್ಥಿ ವೇತನ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ನೆರವಾಗಿದ್ದಾರೆ. ಅಲ್ಲಿ ಕೈಗಾರಿಕೆಗಳನ್ನು ಆರಂಭಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ನಾಯಕತ್ವದ ಕೊರತೆಯ ಬಗ್ಗೆ ಜನರ ಗಮನ ಸೆಳೆದಿದ್ದಾರೆ.

ಬೆಂ. ಗ್ರಾಮಾಂತರದಲ್ಲಿ ಬಿಜೆಪಿ ಸೋಲಲು ಕಾರಣವೇನು..?

ಇದೆಲ್ಲದರ ಫಲವಾಗಿ ದಶಕಗಳ ಕಾಲ ಕಾಂಗ್ರೆಸ್‌ನ ಹಿಡಿತದಲ್ಲಿದ್ದ ಕ್ಷೇತ್ರವನ್ನು ಸ್ಮೃತಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಗಾಂಧಿ ಕುಟುಂಬದ ಪ್ರತಿಷ್ಠೆಗೆ ಬಹುದೊಡ್ಡ ಏಟು ನೀಡಿದ್ದಾರೆ. ರಾಹುಲ್‌ ಗಾಂಧಿ ಅಮೇಠಿಯಿಂದ ಸೋತಿದ್ದು ಸಣ್ಣ ವಿಷಯವಲ್ಲ, ಅದು ನೆಹರು-ಗಾಂಧಿ ಕುಟುಂಬಕ್ಕೆ ಉಂಟಾದ ದೊಡ್ಡ ಆಘಾತ.

ಸ್ಮೃತಿ ಇರಾನಿ

ಕಳೆದ 5 ವರ್ಷದಲ್ಲಿ 21 ಸಲ ಭೇಟಿ ನೀಡಿ 26 ದಿನ ಅಮೇಠಿಯಲ್ಲಿ ವಾಸ್ತವ್ಯ, 106 ಕಾರ್ಯಕ್ರಮದಲ್ಲಿ ಭಾಗಿ

ಅಮೇಠಿ ಕುರಿತು 5 ವರ್ಷದಲ್ಲಿ 202 ಟ್ವೀಟ್‌

ರಾಹುಲ್‌ ಗಾಂಧಿ

5 ವರ್ಷದಲ್ಲಿ 17 ಸಲ ಭೇಟಿ ನೀಡಿ 35 ದಿನ ಕ್ಷೇತ್ರದಲ್ಲಿ ವಾಸ್ತವ್ಯ

ಅಮೇಠಿ ಕುರಿತು 5 ವರ್ಷದಲ್ಲಿ 28 ಟ್ವೀಟ್‌

ರಾಹುಲ್‌ ಅಮೇಠಿಯನ್ನು ಅಭಿವೃದ್ಧಿ ಮಾಡಿದ್ದಾರಾ?

ಇತ್ತ ಸ್ಮೃತಿ ತಳಮಟ್ಟದಿಂದ ಅಮೇಠಿ ಜನರನ್ನು ಸಂಪರ್ಕಕ್ಕೆ ಪಡೆದು 2019ಕ್ಕೆ ಸಿದ್ಧತೆ ನಡೆಸುತ್ತಿದ್ದರೆ, ರಾಹುಲ್‌ ಈ ಕ್ಷೇತ್ರದತ್ತ ಮುಖವನ್ನೇ ಹಾಕಲಿಲ್ಲ. ಇದೇ ರಾಹುಲ್‌ ಗಾಂಧಿ ಸೋಲಿಗೆ ಮೂಲ ಕಾರಣವಾಯಿತು. ಚುನಾವಣಾ ಸಮಯದಲ್ಲಿ ರಾಹುಲ್‌ ತಂದೆ ಹೆಸರಿನಲ್ಲಿ ಮತ ಕೇಳಿದರೇ ಹೊರತು, ಜನರ ನಂಬಿಕೆ ಗಳಿಸುವ, ಅವರನ್ನು ಭೇಟಿ ಮಾಡುವ ಯಾವುದೇ ಕೆಲಸವನ್ನೂ ಮಾಡಲಿಲ್ಲ. ಅದೇ ರಾಹುಲ್‌ ಗಾಂಧಿಗೆ ಮುಳುವಾಯಿತು.

ಈ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಸ್ವಲ್ಪವೇ ಸ್ವಲ್ಪ ಅಭಿವೃದ್ಧಿ ಕಾರ‍್ಯಗಳನ್ನು ಕೈಗೊಂಡಿದ್ದರೂ ಬಹುಶಃ ಈ ಬಾರಿಯೂ ಜಯ ಗಳಿಸುತ್ತಿದ್ದರು ಎಂಬುದು ಅಲ್ಲಿನ ಜನರ ಅಭಿಪ್ರಾಯ. ಅದೂ ಅಲ್ಲದೆ ಅಮೇಠಿಯಲ್ಲಿ ಜನರೇಶನ್‌ ಗ್ಯಾಪ್‌ ಹೆಚ್ಚಾಗಿ ಕಾಣುತ್ತಿದೆ. ಹಳೆಯ ತಲೆಮಾರಿನವರು ಕಾಂಗ್ರೆಸ್‌ಗೆ ಬದ್ಧರಾಗಿದ್ದಾರೆ, ಆದರೆ ಹೊಸ ತಲೆಮಾರಿಗೆ ಕಾಂಗ್ರೆಸ್‌ ಅಥವಾ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಬಗ್ಗೆ ಅಷ್ಟೊಂದು ನಿಷ್ಠೆ ಇಲ್ಲ. ವಿಶೇಷ ಎಂದರೆ ಹಳೆಯ ತಲೆಮಾರಿನವರಲ್ಲೂ ಕೆಲವರಿಗೆ ರಾಹುಲ್‌ ಬಗ್ಗೆ ಅಸಮಾಧಾನ ಇದೆ.

ರಾಹುಲ್‌ ಮತ್ತೆ ಇದೇ ಕ್ಷೇತ್ರದಿಂದ ಆಯ್ಕೆಯಾಗಬೇಕಿದ್ದರೆ ಕಠಿಣ ಪರಿಶ್ರಮ ಪಡಲೇಬೇಕು. ಆ ಕೆಲಸವನ್ನು ಸ್ಮೃತಿ ಇರಾನಿ ಮಾಡಿದರೆ, ಮತ್ತೊಮ್ಮೆ ಅವರೇ ಆಯ್ಕೆಯಾಗುತ್ತಾರೆ ಎಂಬ ಅಭಿಪ್ರಾಯವೂ ತಳಮಟ್ಟದಲ್ಲಿ ಕಾಣುತ್ತಿದೆ.

ಸ್ಮೃತಿ ಕೆಲಸ ಪ್ಲಸ್‌ ಮೋದಿ ಅಲೆ

2014ರಲ್ಲಿ ಸ್ಮೃತಿ ಇರಾನಿ ಅಮೇಠಿ ಕ್ಷೇತ್ರದಿಂದ ಸೋತಿದ್ದರೂ ಇಲ್ಲಿಂದಲೇ 2019ಕ್ಕೆ ಸಿದ್ಧತೆ ನಡೆಸಿದ್ದರು. ಮೋದಿ ಸಂಪುಟದಲ್ಲಿ ಸ್ಮೃತಿ ಮಂತ್ರಿಯೂ ಆಗಿ ಜನರ ಗಮನ ಸೆಳೆದಿದ್ದರು. ಇದರ ಜೊತೆಗೆ ರಾಷ್ಟ್ರದಾದ್ಯಂತ ಇದ್ದಿದ್ದ ಮೋದಿ ಅಲೆ ಸ್ಮೃತಿಗೆ ಮತ್ತಷ್ಟುನೆರವಾಯಿತು. ಈ ಅವಧಿಯಲ್ಲಿ ಬಿಜೆಪಿ ತಳಮಟ್ಟದಲ್ಲಿ ತನ್ನ ಸಂಘಟನೆಯನ್ನು ಬಲಪಡಿಸಿಕೊಂಡಿತು.

ಕಾಂಗ್ರೆಸ್‌ನ ಕ್ಷೇತ್ರಗಳಲ್ಲಿ ದಲಿತರ ಮತ್ತು ಹಿಂದುಳಿದ ವರ್ಗಗಳ ಜನರ ಗಮನ ಸೆಳೆಯಲು ಆರಂಭಿಸಿತು. ಸ್ಮೃತಿ ಇರಾನಿ ಕೂಡ ಸಾಮಾನ್ಯ ಮತದಾರರು ಮತ್ತು ಪಕ್ಷದ ಕಾರ‍್ಯಕರ್ತರನ್ನು ಒಗ್ಗೂಡಿಸುವ ಕಮಾಂಡರ್‌ ಆಗಿ ಕಾರ‍್ಯನಿರ್ವಹಿಸಿದರು. ಅವರ ಸಂವಹನಾ ಕೌಶಲ್ಯ, ಪಕ್ಷದ ಸ್ಥಳೀಯ ಕಾರ‍್ಯಕರ್ತರನ್ನು ಸಂಪರ್ಕಿಸುವ ಅವರ ಸಾಮರ್ಥ್ಯ ಮತ್ತಿತರ ಕೌಶಲ್ಯಗಳು ಅವರನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿತು. ಸದ್ಯದ ವಿದ್ಯಮಾನಗಳನ್ನು ಗಮನಿಸಿದರೆ ಕಾಂಗ್ರೆಸ್‌ ಇನ್ನು ಅಮೇಠಿಯಲ್ಲಿ ತಲೆ ಎತ್ತುವುದೇ ಕಷ್ಟಎಂಬ ಪರಿಸ್ಥಿತಿ ಇದೆ.

ಕ್ಷೇತ್ರದಾದ್ಯಂತ ಬಿಜೆಪಿಯ ಬಾವುಟಗಳು ರಾರಾಜಿಸುತ್ತಿವೆ. ಅಲ್ಲಿನ ಜನರು ಕೇಸರಿ ಶಾಲನ್ನು ಹೊದ್ದಿದ್ದಾರೆ. ಕುಟುಂಬದ ಹಿನ್ನೆಲೆಯೊಂದಿದ್ದರೆ ಸಾಲದು ತಳಮಟ್ಟದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ, ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪ ಮಾಡುವ ಜನಪ್ರತಿನಿಧಿಗಳು ಬೇಕೆಂದು ಅಲ್ಲಿನ ಜನ ಹೇಳುತ್ತಿದ್ದಾರೆ.

2017ರಲ್ಲೇ ಕಾಂಗ್ರೆಸ್‌ ಸೋಲುವ ಸುಳಿವು!

ಗಾಂಧಿ ಕುಟುಂಬದ ಭದ್ರಕೋಟೆ ಅಮೇಠಿ ಕಾಂಗ್ರೆಸ್‌ ಕೈತಪ್ಪುವ ಲಕ್ಷಣ 2017ರಲ್ಲೇ ಗೋಚರವಾಗಿತ್ತು. 2017ರ ವಿಧಾನಸಭಾ ಚುನಾವಣೆಯಲ್ಲಿ ಅಮೇಠಿಯ 5 ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕನ್ನು ಬಿಜೆಪಿ ಗೆದ್ದಿತ್ತು. ಉಳಿದ ಒಂದು ಸೀಟನ್ನು ಸಮಾಜವಾದಿ ಪಾರ್ಟಿ ಗೆದ್ದಿತ್ತು. ಆಗಲೇ ಅಮೇಠಿ ಕಾಂಗ್ರೆಸ್‌ ಕೈಬಿಟ್ಟು ಹೋಗುವ ಲಕ್ಷಣ ಗೋಚರಿಸಿತ್ತು.

‘ಎಂಪಿ ಕಾಣೆಯಾಗಿದ್ದಾರೆ’ ಕ್ಯಾಂಪೇನ್‌ ಮಾಡಿದ್ದ ಬಿಜೆಪಿ

ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ರಾಹುಲ್‌ ಗಾಂಧಿ ವಿರುದ್ಧ ‘ಸಂಸದರು ಕಾಣೆಯಾಗಿದ್ದಾರೆ’ (ಎಂಪಿ ಮಿಸ್ಸಿಂಗ್‌) ಎಂಬ ಆಂದೋಲನವನ್ನು ಆರಂಭಿಸಿತು. ಇದಕ್ಕೆ ಪ್ರತಿಯಾಗಿ ರಣತಂತ್ರ ರೂಪಿಸಲು ಕಾಂಗ್ರೆಸ್‌ ವಿಫಲವಾಯಿತು. ಅಮೇಠಿ ಕ್ಷೇತ್ರದ ವೊಟ್‌ ಶೇರ್‌ ಗಮನಿಸುವುದಾದರೆ ಸ್ಮೃತಿ ಇರಾನಿ ಒಟ್ಟು ಮತಗಳಲ್ಲಿ ಶೇ 49.7ರಷ್ಟುಮತ ಪಡೆದಿದ್ದರೆ, ರಾಹುಲ್‌ 43.9ರಷ್ಟುಮತ ಪಡೆದಿದ್ದಾರೆ.

ಅಂದರೆ ಮೇಲ್ಜಾತಿ ಜನರು, ದಲಿತರು ಮತ್ತು ಹಿಂದುಳಿದ ವರ್ಗದ ಜನರು ಸೇರಿದಂತೆ ಎಲ್ಲ ವರ್ಗದ ಜನರೂ ಸ್ಮೃತಿ ಇರಾನಿಗೆ ಬೆಂಬಲ ನೀಡಿದ್ದಾರೆ ಎಂಬುದು ಸ್ಪಷ್ಟ. ರಾಹುಲ್‌ಗೆ ಬೆಂಬಲ ನೀಡುವ ಉದ್ದೇಶದಿಂದಲೇ ಈ ಕ್ಷೇತ್ರದಲ್ಲಿ ಎಸ್ಪಿ ಮತ್ತು ಬಿಎಸ್‌ಪಿ ಸ್ಪರ್ಧಿಸಿರಲಿಲ್ಲ. ಸ್ವತಃ ಮಾಯಾವತಿ ರಾಹುಲ್‌ಗೆ ಬೆಂಬಲ ನೀಡುವಂತೆ ಕಾರ‍್ಯಕರ್ತರಲ್ಲಿ ಸಾರ್ವಜನಿಕವಾಗಿ ಕೇಳಿಕೊಂಡಿದ್ದರು.

ನೆಹರು-ಗಾಂಧಿ ಕುಟುಂಬದ ಕೈಲಿ ಅಮೇಠಿ

ಸಂಜಯ್‌ ಗಾಂಧಿ (1980-81)

ತುರ್ತು ಪರಿಸ್ಥಿತಿ ಹಿಂತೆಗೆದುಕೊಂಡ ತಕ್ಷಣ ಸಂಜಯ್‌ ಗಾಂಧಿ ಪ್ರಪ್ರಥಮ ಬಾರಿಗೆ 1977ರಲ್ಲಿ ಅಮೇಠಿಯಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಜನಸಂಖ್ಯಾ ನಿಯಂತ್ರಣದ ಭಾಗವಾಗಿ ಒತ್ತಾಯಪೂರ್ವಕ ಸಂತಾನ ಹರಣ ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಸೋತಿದ್ದರು. ಆದರೆ 1980ರ ಸಾರ್ವತ್ರಿಕ ಚುನಾವಣೆಯಲ್ಲಿ ಸಂಜಯ್‌ ಗಾಂಧಿ ಮತ್ತೆ ಸ್ಪರ್ಧಿಸಿ ಜಯಗಳಿಸಿದರು. ಆದರೆ ಅದೇ ವರ್ಷ ಜೂನ್‌ನಲ್ಲಿ ನಿಧನರಾದರು.

ರಾಜೀವ್‌ ಗಾಂಧಿ (1981-1991)

ಸಂಜಯ್‌ ಗಾಂಧಿ ನಿಧನಾನಂತರ ವಿದೇಶದಿಂದ ಭಾರತಕ್ಕೆ ಮರಳಿದ ರಾಜೀವ್‌ ಗಾಂಧಿ 1981ರಲ್ಲಿ ಅಮೇಠಿಯಿಂದ ಸ್ಪರ್ಧಿಸಿದರು. ಲೋಕದಳದ ಅಭ್ಯರ್ಥಿ ಶರದ್‌ ಯಾದವ್‌ ಅವರನ್ನು 2 ಲಕ್ಷ ಮತಗಳ ಅಂತರದಲ್ಲಿ ಸೋಲಿಸಿದರು. ಆಗಿನಿಂದ 1991ರ ವರೆಗೆ ಅಂದರೆ ಅವರ ಹತ್ಯೆವರೆಗೂ ಅಮೇಠಿಯಿಂದ ಸತತ 3 ಬಾರಿ ಆಯ್ಕೆಯಾದರು.

ಸೋನಿಯಾ ಗಾಂಧಿ (1999-2004)

ರಾಜೀವ್‌ ಗಾಂಧಿ ಹತ್ಯೆ ಬಳಿಕ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸತೀಶ್‌ ಶರ್ಮ ಅಮೇಠಿಯಲ್ಲಿ ಸ್ಪರ್ಧಿಸಿ ಜಯಗಳಿಸಿದರು. 1996ರಲ್ಲೂ ಇವರೇ ಮತ್ತೊಮ್ಮೆ ಆಯ್ಕೆಯಾದರು. 1999ರಲ್ಲಿ ಸೋನಿಯಾ ಗಾಂಧಿ ಅಮೇಠಿಯಿಂದ ಸ್ಪರ್ಧಿಸಿ ಗೆದ್ದರು. 2004ರಲ್ಲಿ ಈ ಕ್ಷೇತ್ರವನ್ನು ಮಗ ರಾಹುಲ್‌ ಗಾಂಧಿಗೆ ಬಿಟ್ಟುಕೊಟ್ಟು ಸೋನಿಯಾ ರಾಯ್‌ ಬರೇಲಿಗೆ ತೆರಳಿದರು.

ರಾಹುಲ್‌ ಗಾಂಧಿ (2004-2014)

2004ರಲ್ಲಿ ಅಮೇಠಿಯಿಂದ ಸ್ಪರ್ಧಿಸಿದ್ದ ರಾಹುಲ್‌ ಗಾಂಧಿ ಗೆದ್ದರು. 2009ರಲ್ಲಿ ಮತ್ತೊಮ್ಮೆ ಅದೇ ಕ್ಷೇತ್ರದಿಂದ ಸಂಸತ್ತಿಗೆ ಪ್ರವೇಶಿಸಿದರು. 2014ರಲ್ಲಿಯೂ ಮತ್ತೆ ಅದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ಪ್ರಬಲ ಪೈಪೋಟಿ ನೀಡಿ 1.07 ಲಕ್ಷ ಮತಗಳ ಅಂತರದಲ್ಲಿ ಸೋತಿದ್ದರು.