ಇಸ್ಲಾಮಾಬಾದ್‌[ಮೇ.27]: ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಈ ಸಂದರ್ಭದಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೂಡಿ ಕೆಲಸ ಮಾಡುವ ಇಂಗಿತವನ್ನು ಇಮ್ರಾನ್‌ ಖಾನ್‌ ವ್ಯಕ್ತಪಡಿಸಿದ್ದಾರೆ.

ದೂರವಾಣಿ ಕರೆ ಮಾಡಿ ಶುಭ ಕೋರಿದ್ದಕ್ಕೆ ಇಮ್ರಾನ್‌ಗೆ ಧನ್ಯವಾದ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ‘ಹಿಂಸಾಚಾರ ಹಾಗೂ ಭಯೋತ್ಪಾದನೆ ಮುಕ್ತ ವಾತಾವರಣ ಹಾಗೂ ಭರವಸೆ ಮರು ಸ್ಥಾಪನೆಯು ಉಭಯ ರಾಷ್ಟ್ರಗಳ ಶಾಂತಿ ಹಾಗೂ ಅಭಿವೃದ್ಧಿಗಳ ಮೂಲ ಮಂತ್ರವಾಗಿವೆ’ ಎಂದು ಇಮ್ರಾನ್‌ಗೆ ಸಂದೇಶ ನೀಡಿದ್ದಾರೆ.

ಈ ಮೂಲಕ ಭಯೋತ್ಪಾದನೆಗೆ ಕಡಿವಾಣ ಹಾಕುವ ಮೂಲಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪಾಕಿಸ್ತಾನ ಕೆಲಸ ಮಾಡಬೇಕೆಂಬ ಸೂಚ್ಯ ಸಂದೇಶವನ್ನು ಮೋದಿ ಅವರು ದೂರವಾಣಿ ಮೂಲಕವೇ ರವಾನಿಸಿದ್ದಾರೆ.