ನೀಲ್ ಪ್ರಕಾಶ್ ಎಂಬ ಅಮಾಯಕ ವ್ಯಕ್ತಿತ್ವ ಅಬು ಖಾಲೆದ್ ಎಂಬ ಉಗ್ರಗಾಮಿಯಾಗಿದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಪಯಣ.

ಬೆಂಗಳೂರು: ವಿಶ್ವಮಟ್ಟದಲ್ಲಿ ಇತ್ತೀಚೆಗೆ ಹೆಚ್ಚು ಚಾಲ್ತಿಯಲ್ಲಿರುವ ಹೆಸರು ಅಬು ಖಾಲಿದ್ ಅಲ್-ಕಾಂಬೋಡಿ ಅಲಿಯಾಸ್ ನೀಲ್ ಪ್ರಕಾಶ್. ಕೆಲ ದಿನಗಳ ಹಿಂದಷ್ಟೇ ಈತನ ಬಂಧನವಾಗಿದೆ ಎಂಬ ಸುದ್ದಿ ರಾರಾಜಿಸುತ್ತಿದ್ದಂತೆಯೇ ಅಮೆರಿಕದ ಗುಪ್ತಚರ ಸಂಸ್ಥೆಗಳು ಮತ್ತೆ ಜಾಗೃತಗೊಂಡಿವೆ. ಯಾಕೆಂದರೆ, ಕಳೆದ ವರ್ಷದಂದು ಇರಾಕ್'ನ ಮೋಸುಲ್ ನಗರದಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ 24 ನೀಲ್ ಪ್ರಕಾಶ್ ಸಾವನ್ನಪ್ಪಿದ್ದಾನೆಂದು ಅಧಿಕಾರಿಗಳು ಘೋಷಿಸಿದ್ದರು. ಗುರುತೇ ಸಿಗದಂತಿದ್ದ ಶವವನ್ನು ನೀಲ್ ಪ್ರಕಾಶ್'ನದ್ದೆಂದು ಭಾವಿಸಲಾಗಿತ್ತು. ಆದರೆ, ಇದೀಗ ಆತ ಜೀವಂತವಾಗಿರುವ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. ನೀಲ್ ಪ್ರಕಾಶ್ ಎಂಬ ಅಮಾಯಕ ವ್ಯಕ್ತಿತ್ವ ಅಬು ಖಾಲೆದ್ ಎಂಬ ಉಗ್ರಗಾಮಿಯಾಗಿದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಪಯಣ.

ಯಾರು ಈ ನೀಲ್ ಪ್ರಕಾಶ್?
ಈತನ ಹೆಸರು ಕೇಳಿ ಬಹುಶಃ ಹಿಂದೂ ಕ್ರೈಸ್ತ ಪೋಷಕರಿಗೆ ಜನಿಸಿದವನಿರಬೇಕು ಎಂದುಕೊಂಡಿರುತ್ತೀರಿ. ಆದರೆ, ಆಸ್ಟ್ರೇಲಿಯಾದಲ್ಲಿ ಜನಿಸಿದ ನೀಲ್ ಪ್ರಕಾಶ್ ಓರ್ವ ಬೌದ್ಧ ಧರ್ಮೀಯ. ತಂದೆ ಫಿಜಿ ರಾಷ್ಟ್ರೀಯನಾದರೆ, ತಾಯಿ ಕಾಂಬೋಡಿಯಾದವರು. ಆದರೆ, ದೇವರ ವಿಷಯದಲ್ಲಿ ಬಹಳ ಗೊಂದಲದಲ್ಲಿದ್ದ ವ್ಯಕ್ತಿತ್ವ ನೀಲ್ ಪ್ರಕಾಶ್'ದ್ದು. ಬೌದ್ಧ ಧರ್ಮದ ನಿರೀಶ್ವರ ವಾದದ ತತ್ವ ಈತನಿಗೆ ಪಥ್ಯವಾಗಿರುವುದಿಲ್ಲ. ದೇವರಿದ್ದಾನೆ ಎಂದು ನಂಬಿಕೊಂಡಿದ್ದವನಿಗೆ ದೇವರ ದಾರಿ ತೋರಿಸುತ್ತೇನೆಂದು ಆಕರ್ಷಿಸುತ್ತಾರೆ ಇಸ್ಲಾಂ ಧರ್ಮಬೋಧಕರು. ಆ ಧರ್ಮದ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಇಸ್ಲಾಂಗೆ ಮತಾಂತರಗೊಳ್ಳುತ್ತಾನೆ. ಮುಸ್ಲಿಂ ಸ್ನೇಹಿತರ ಮೂಲಕ ಇಸ್ಲಾಂ ಧರ್ಮವನ್ನರಿಯಲು ಶುರು ಆಡುತ್ತಾನೆ. ಸ್ನೇಹಿತರ ಪ್ರೇರಪಣೆಯ ಮೇರೆಗೆ ಅಲ್ಲಾಹುಗೆ ಭಕ್ತಿಯಿಂದ ನಮಿಸುವ ಶಾಹದಾ ಪ್ರಾರ್ಥನೆಯನ್ನು ಮಾಡುತ್ತಾನೆ. ಇದು ಆತನ ಜೀವನದ ದಿಕ್ಕನ್ನೇ ಬದಲಿಸುತ್ತದೆ. ಈ ಪ್ರಾರ್ಥನೆ ಮಾಡಿದಾಗ ತನಗೆ ಅವರ್ಣನೀಯ ಸಂತೋಷವಾಯಿತು ಎಂದು ಈತ ಹೇಳಿಕೊಂಡಿದ್ದಿದೆ. ಇದು ಇಸ್ಲಾಂ ಧರ್ಮದ ಮೇಲೆ ಆತನಿಗಿರುವ ಬದ್ಧತೆಯನ್ನು ಗಟ್ಟಿಗೊಳಿಸುತ್ತದೆ.

ಬೋಸ್ನಿಯಾದ ಉಗ್ರನ ಸಂಪರ್ಕ:
ಆದರೆ, ಈತನ ಜೀವನದಲ್ಲಿ ಮತ್ತೊಂದು ಟರ್ನಿಂಗ್ ಪಾಯಿಂಟ್ ಆಗಿದ್ದು ಹಾರುನ್ ಮೆಹಿಚೆವಿಚ್ ಎಂಬ ಬೋಸ್ನಿಯಾ ಉಗ್ರನ ಸಂಪರ್ಕ. ಮೆಲ್ಬೋರ್ನ್'ನ ಇಸ್ಲಾಮಿಕ್ ಕೇಂದ್ರವೊಂದರಲ್ಲಿ ನೀಲ್ ಪ್ರಕಾಶ್'ಗೆ ಇಸ್ಲಾಂ ಧರ್ಮದ ಬಗ್ಗೆ ಇನ್ನಷ್ಟು ಬೋಧನೆಗಳಾಗುತ್ತವೆ. ಇಷ್ಟೇ ಆಗಿದ್ದರೆ ನೀಲ್ ಪ್ರಕಾಶ್ ಮಾಮೂಲಿಯ ಮತಾಂತರಿಯಷ್ಟೇ ಆಗಿರುತ್ತಿದ್ದನು. ಆದರೆ, ನೀಲ್ ಪ್ರಕಾಶ್'ರಲ್ಲಿ ಬದಲಾವಣೆ ವ್ಯಕ್ತವಾಗಲು ಕಾರಣವಾಗಿದ್ದು, ತನ್ನನ್ನ ತಾನು ಪ್ರಶ್ನಿಸಲು ಆರಂಭಿಸಿದಾಗ. "ನಾನೇನು ಮಾಡುತ್ತಿದ್ದೇನೆ? ನನಗೆ ಕೆಲಸವಿದೆ, ಆದಾಯವಿದೆ, ಕಾರು, ಮನೆ ಎಲ್ಲಾ ಇದೆ. ಆದರೆ, ನಾನೇನು ತ್ಯಾಗ ಮಾಡಿದ್ದೇನೆ? ಅಲ್ಲಾಹುಗಾಗಿ ನಾನೇನು ಮಾಡಿದ್ದೇನೆ. ದಿನವೂ ರಾತ್ರಿ ಬೆಚ್ಚಗೆ ಆರಾಮವಾಗಿ ಮಲಗುತ್ತಿದ್ದೇನೆ. ಬೇರೆ ದೇಶಗಳಲ್ಲಿ ಬಳಲುತ್ತಿರುವ ಮುಸ್ಲಿಂ ಬಾಂಧವರ ಬಗ್ಗೆ ನನಗೆ ಚಿಂತೆಯಾಗಲು ಶುರುವಾಯಿತು" ಎಂದು ಈತ ವಿಡಿಯೋವೊಂದರಲ್ಲಿ ಒಂದೊಮ್ಮೆ ಹೇಳಿಕೊಂಡಿದ್ದುಂಟು.

ನೀಲ್ ಪ್ರಕಾಶ್ ತನ್ನ ಜೀವನವನ್ನು ಇಸ್ಲಾಂ ಧರ್ಮಕ್ಕೋಸ್ಕರ ಮುಡಿಪಾಗಿಡುತ್ತಾನೆ. ತನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಇಸ್ಲಾಂ ಧರ್ಮಕಾರ್ಯಕ್ಕಾಗಿ ಹಿಜ್ರಾ ತೊಡುತ್ತಾನೆ. 2013ರಲ್ಲಿ ಮಲೇಷ್ಯಾ ಮೂಲಕ ಸಿರಿಯಾದ ರಾಕ್ಕಾ ಪಟ್ಟಣ ತಲುಪುತ್ತಾನೆ. ಅಲ್ಲಿಂದ ನೀಲ್ ಪ್ರಕಾಶ್'ನ ಜಿಹಾದಿ ಹೋರಾಟದ ಇನ್ನೊಂದು ಅಧ್ಯಾಯ ಪ್ರಾರಂಭವಾಗುತ್ತದೆ.

ಸಿರಿಯಾದಲ್ಲಿ ಆಸ್ಟ್ರೇಲಿಯಾ ಮೂಲದ ಮುಸ್ಲಿಮರನೇಕರು ಜಿಹಾದಿ ಹೋರಾಟದಲ್ಲಿ ತೊಡಗಿಕೊಂಡಿದ್ದು ಪ್ರಕಾಶ್'ಗೆ ಸಹಾಯವಾಗುತ್ತದೆ. ಹೆಚ್ಚು ಸಕ್ರಿಯವಾಗಿ ಜಿಹಾದ್'ಗೆ ತೊಡಗಿಕೊಳ್ಳುತ್ತಾನೆ. ಆಸ್ಟ್ರೇಲಿಯಾದಲ್ಲಿ ಅನೇಕ ಭಯೋತ್ಪಾದಕ ಕೃತ್ಯಗಳಲ್ಲಿ ಈತನ ಕೈವಾಡವಿರುತ್ತದೆ. ಹೊಸಬರನ್ನು ಜಿಹಾದಿ ಹೋರಾಟಕ್ಕೆ ಪ್ರೇರೇಪಿಸುವ ಕೆಲಸದಲ್ಲಿ ಈತ ಮಗ್ನನಾಗುತ್ತಾನೆ.

"ಮೂರು ವರ್ಷಗಳ ಕೆಳಗೆ ನಾನು ಮುಸ್ಲಿಮರ ಜೊತೆ ಶರಿಯಾ ನಿಬಂಧನೆಯಡಿಯಲ್ಲಿ ಬದುಕು ನಡೆಸುತ್ತೇನೆ ಎಂದು ಯಾರಾದರೂ ಹೇಳಿದ್ದರೆ ನಾನವರನ್ನು ಹುಚ್ಚರೆಂದೇ ಹೇಳುತ್ತಿದ್ದೆ. ಆದರೆ, ಅಲ್ಲಾಹುವಿನ ಮಾಯೆ ನೋಡಿರಿ ಹೇಗಿದೆ ಅಂತ... ನನ್ನಲ್ಲಿ ತಂದಿರುವ ಬದಲಾವಣೆಯನ್ನು ನೀವೇ ನೋಡಿರಿ. ನಿಮಗೂ ಇಂತಹ ಬದಲಾವಣೆ ಆಗಲು ಸಾಧ್ಯ. ಅದಕ್ಕಾಗಿ ನೀವು ನಂಬಿಕೆ, ವಿಶ್ವಾಸ ಹೊಂದಿರಬೇಕು" ಎಂದು ಈತ ವಿಡಿಯೋವೊಂದರಲ್ಲಿ ಮಾತನಾಡಿದ್ದಾನೆ.

(ಮಾಹಿತಿ: ಬಿಬಿಸಿ)