ಇಸ್ಲಮಾಬಾದ್[ಮಾ.02]: ಭಾರತದ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನದ ಎಫ್‌ 16 ವಿಮಾನಗಳ ಪೈಕಿ ಒಂದು ವಿಮಾನವನ್ನು ಭಾರತೀಯ ವಿಂಗ್‌ಕಮಾಂಡರ್‌ ಅಭಿನಂದನ್‌ ಹೊಡೆದುರುಳಿಸಿದ್ದರು. ಈ ವಿಮಾನ ಪತನಗೊಂಡ ವೇಳೆ ಅದರಲ್ಲಿದ್ದ ಪೈಲಟ್‌ ಸುರಕ್ಷಿತವಾಗಿ ಹೊರನೆಗೆದಿದ್ದರಾದರೂ, ಅವರು ಭಾರತೀಯ ಪೈಲಟ್‌ ಎಂದು ಪಾಕಿಗಳೇ ಅವರನ್ನು ಬಡಿದು ಕೊಂದಿದ್ದಾರೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಗುರುವಾರ ಭಾರತದ ಮೇಲೆ ದಾಳಿಗೆ ಆಗಮಿಸಿದ್ದ ಮೂರು ಎಫ್‌ 16 ವಿಮಾನಗಳನ್ನು, ಭಾರತದ ಮಿಗ್‌ ವಿಮಾನಗಳು ಓಡಿಸಿದ್ದವು. ಈ ವೇಳೆ ಒಂದು ಎಫ್‌ 16 ವಿಮಾನವನ್ನು ಸ್ವತಃ ಅಭಿನಂದನ್‌ ಹೊಡೆದುರುಳಿಸಿದ್ದರು. ಈ ವಿಮಾನ ಪಾಕ್‌ ಆಕ್ರಮಿತ ಕಾಶ್ಮೀರದ ಲಾಮ್‌ ಕಣಿವೆಯಲ್ಲಿ ಬಿದಿತ್ತು. ಅದೇ ವೇಳೆ ಪಾಕ್‌ ಪಡೆಗಳ ದಾಳಿ ವೇಳೆ ಅಭಿ ಹಾರಿಸುತ್ತಿದ್ದ ವಿಮಾನ ಕೂಡಾ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉರುಳಿಬಿದ್ದಿತ್ತು. ಅಭಿನಂದನ್‌ ಅವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದರಾದರೂ, ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಮತ್ತೊಂದೆಡೆ ಎಫ್‌ 16 ವಿಮಾನ ಚಲಾಯಿಸುತ್ತಿದ್ದ ಶಹಾಜ್‌ ಉದ್‌ ದಿನ್‌ ಪ್ಯಾರಾಚೂಟ್‌ ಬಳಸಿ ಸುರಕ್ಷಿತವಾಗಿ ಕೆಳಗೆ ಇಳಿದಿದ್ದರಾದರೂ, ಅವರನ್ನು ಭಾರತೀಯ ಯೋಧ ಎಂದು ತಪ್ಪಾಗಿ ಎಣಿಸಿದ ಲಾಮ್‌ ಕಣಿವೆ ಪ್ರದೇಶದ ಜನರು, ಅವರನ್ನು ಹೊಡೆದು ಹತ್ಯೆ ಮಾಡಿದ್ದಾರೆ.

ಭಾರತದ ಮೇಲೆ ದಾಳಿಗೆ ಎಫ್‌ 16 ವಿಮಾನ ಬಳಸಿ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದ್ದ ಪಾಕಿಸ್ತಾನ, ಅದೇ ಕಾರಣ ಎಫ್‌ 16 ವಿಮಾನ ಪತನ ಮತ್ತು ಅದರಲ್ಲಿದ್ದ ಪೈಲಟ್‌ ಸಾವನ್ನು ಮುಚ್ಚಿಹಾಕುವ ಯತ್ನ ಮಾಡಿದೆ ಎಂದು ಹೇಳಲಾಗಿದೆ.