Asianet Suvarna News Asianet Suvarna News

ದೈಹಿಕವಾಗಿ ನ್ಯೂನತೆಗಳಿದ್ದರೂ ಜೀವನೋತ್ಸಾಹ ಕಳೆದುಕೊಳ್ಳದ ಮಹಾನ್ ಚೇತನ ಸ್ಟೀಫನ್ ಹಾಕಿಂಗ್

ಕಳೆದೆರಡು ಶತಮಾನಗಳ ಕಾಲಘಟ್ಟದಲ್ಲಿ ಆಲ್ಬರ್ಟ್  ಐನ್‌ಸ್ಟೀನ್ ಅವರನ್ನು ಬಿಟ್ಟರೆ ಜನಮಾನಸದಲ್ಲಿ ಬೆರೆತುಹೋದ ಮತ್ತೊಬ್ಬ ವಿಜ್ಞಾನಿಯೆಂದರೆ ಅದು ಸ್ಟೀಫನ್ ಹಾಕಿಂಗ್ ಮಾತ್ರ. ಮೊನ್ನೆ ಮಾರ್ಚ್  ಹದಿನಾಲ್ಕು - ಭೌತವಿಜ್ಞಾನಿಗಳು ಸಂಭ್ರಮಿಸುವ ಐನ್‌ಸ್ಟೀನ್  ಹುಟ್ಟುಹಬ್ಬ ಹಾಗೂ ಗಣಿತಜ್ಞರು ಆಚರಿಸುವ ‘ಪೈ - 3.14’  ದಿನಾಚರಣೆ. ಅಂದೇ ತೀರಿಕೊಂಡ ಸ್ಟೀಫನ್ ಹಾಕಿಂಗ್  (ಸೀಟು ಸಿಗದ ಕಾರಣ) ಗಣಿತ ವಿಜ್ಞಾನದಲ್ಲಿ ಸಂಶೋಧನೆ
ನಡೆಸಲಾಗದೆಯೇ ಭೌತವಿಜ್ಞಾನವನ್ನು ಅಧ್ಯಯನಕ್ಕೆ  ತಮ್ಮನ್ನು ಅರ್ಪಿಸಿಕೊಂಡವರು. ಆ ಸಿಟ್ಟಿನಿಂದಲೋ ಏನೋ  ಕ್ಲಿಷ್ಟ ಗಣಿತ ಸೂತ್ರಗಳ ಸೋಂಕಿಲ್ಲದ ಬ್ರಹ್ಮಾಂಡ ಭಾಷ್ಯವನ್ನು  ಮುಂದೊಂದು ದಿನ ಅವರು ಬರೆದರು. ಕೋಟ್ಯಂತರ ಗಣಿತ  ಭೀತ ಜನರು ಆ ವಿಶ್ವ ಉಗಮ ವಿವರಣೆಯ ‘ಕಾಲದ ಸಂಕ್ಷಿಪ್ತ  ಚರಿತ್ರೆ’ಯನ್ನು ಖರೀದಿಸಿದರು.

Stephen Hawking Was a Living Metaphor for the Scientific Endeavor

ಬೆಂಗಳೂರು (ಮಾ. 17): ಕಳೆದೆರಡು ಶತಮಾನಗಳ ಕಾಲಘಟ್ಟದಲ್ಲಿ ಆಲ್ಬರ್ಟ್  ಐನ್‌ಸ್ಟೀನ್ ಅವರನ್ನು ಬಿಟ್ಟರೆ ಜನಮಾನಸದಲ್ಲಿ ಬೆರೆತುಹೋದ ಮತ್ತೊಬ್ಬ ವಿಜ್ಞಾನಿಯೆಂದರೆ ಅದು ಸ್ಟೀಫನ್ ಹಾಕಿಂಗ್ ಮಾತ್ರ. ಮೊನ್ನೆ ಮಾರ್ಚ್  ಹದಿನಾಲ್ಕು - ಭೌತವಿಜ್ಞಾನಿಗಳು ಸಂಭ್ರಮಿಸುವ ಐನ್‌ಸ್ಟೀನ್  ಹುಟ್ಟುಹಬ್ಬ ಹಾಗೂ ಗಣಿತಜ್ಞರು ಆಚರಿಸುವ ‘ಪೈ - 3.14’  ದಿನಾಚರಣೆ. ಅಂದೇ ತೀರಿಕೊಂಡ ಸ್ಟೀಫನ್ ಹಾಕಿಂಗ್  (ಸೀಟು ಸಿಗದ ಕಾರಣ) ಗಣಿತ ವಿಜ್ಞಾನದಲ್ಲಿ ಸಂಶೋಧನೆ
ನಡೆಸಲಾಗದೆಯೇ ಭೌತವಿಜ್ಞಾನವನ್ನು ಅಧ್ಯಯನಕ್ಕೆ  ತಮ್ಮನ್ನು ಅರ್ಪಿಸಿಕೊಂಡವರು. ಆ ಸಿಟ್ಟಿನಿಂದಲೋ ಏನೋ  ಕ್ಲಿಷ್ಟ ಗಣಿತ ಸೂತ್ರಗಳ ಸೋಂಕಿಲ್ಲದ ಬ್ರಹ್ಮಾಂಡ ಭಾಷ್ಯವನ್ನು  ಮುಂದೊಂದು ದಿನ ಅವರು ಬರೆದರು. ಕೋಟ್ಯಂತರ ಗಣಿತ  ಭೀತ ಜನರು ಆ ವಿಶ್ವ ಉಗಮ ವಿವರಣೆಯ ‘ಕಾಲದ ಸಂಕ್ಷಿಪ್ತ  ಚರಿತ್ರೆ’ಯನ್ನು ಖರೀದಿಸಿದರು.
 

ಬೆಟ್ಟಿಂಗ್ ಹವ್ಯಾಸವಿತ್ತು
ಚುಚ್ಚುಮಾತಿಗೆ ಹೆಸರಾದ ಹಾಕಿಂಗ್ ಅವರೇ  ಬರೆದುಕೊಂಡಂತೆ ‘ಜಗತ್ತಿನಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ  ಖರೀದಿಯಾಗಿ ಅತಿ ಕಡಿಮೆ ಜನರು ಓದಿದ ಪುಸ್ತಕವಿದು’.  ತಾನು ಸೋಲುವುದು ಖಚಿತವಾಗಿದ್ದರೂ ಬೆಟ್ಟಿಂಗ್   ಕಟ್ಟುವುದು ಹಾಕಿಂಗ್ ಅವರ ಹವ್ಯಾಸಗಳಲ್ಲಿ ಒಂದಾಗಿತ್ತು. 1975 ರಲ್ಲಿ ಅಮೆರಿಕದ ಭೌತವಿಜ್ಞಾನಿ ಕಿಪ್ ಥೋರ್ನ್ ಅವರೊಂದಿಗೆ ಕಾಸ್ಮಿಕ್ ಎಕ್ಸ್-ಕಿರಣಗಳ ಮೂಲವಾದ  ‘ಸಿಗ್ನಸ್ ಎಕ್ಸ್-1’ ಒಂದು ಕಪ್ಪು ಕುಳಿಯಲ್ಲವೆಂದು ಬೆಟ್  ಕಟ್ಟಿದ್ದರು. 1990 ರಲ್ಲಿ ಅದನ್ನು ಸೋತರು, ಪೋಲಿ ಪತ್ರಿಕೆ  ‘ಪೆಂಟ್ ಹೌಸ್’ನ ಒಂದು ವರ್ಷದ ಚಂದಾ ಹಣವನ್ನು  ಥೋರ್ನ್ ಪರವಾಗಿ ಅವರು ತುಂಬಬೇಕಾಯಿತು. ಹಾಕಿಂಗ್  ಅವರು ಥೋರ್ನ್ ಅವರೊಡನೆ ಸೇರಿಕೊಂಡು ಕ್ಯಾಲ್‌ಟೆಕ್‌ನ  ಭೌತವಿಜ್ಞಾನಿ ಜಾನ್ ಪ್ರೆಸ್ಕಿಲ್ ಅವರೊಂದಿಗೆ ಉಳಿದೆಲ್ಲ ದ್ರವ್ಯಗಳಂತೆ ಮಾಹಿತಿಯನ್ನೂ ಕಪ್ಪುಕುಳಿಗಳು ಆಪೋಶನ ತೆಗೆದುಕೊಳ್ಳಬಲ್ಲದೆಂದು ಬೆಟ್ ಕಟ್ಟಿದ್ದರು, ಎಂದಿನಂತೆ  ಸೋತ ಹಾಕಿಂಗ್ ಬೆಟ್ ಕಟ್ಟಿದ್ದ ವಿಶ್ವಕೋಶವನ್ನು ಪ್ರೆಸ್ಕಿಲ್‌ಗೆ ನೀಡಿದರು. ತೀರಾ ಇತ್ತೀಚಿನ ಅವರ ಸೋಲೆಂದರೆ ಹಿಗ್ಸ್- ಬೋಸಾನ್ ಕಣ ಕಂಡು ಹಿಡಿಯಲು ಸಾಧ್ಯವೇ ಇಲ್ಲವೆಂದು  ಯೂನಿವರ್ಸಿಟಿ ಆಫ್ ಮಿಶಿಗನ್‌ನ ಭೌತವಿಜ್ಞಾನ ಪ್ರೊಫೆಸರ್  ಗಾರ್ಡನ್ ಕೇನ್ ಅವರೊಂದಿಗೆ ಕಟ್ಟಿದ್ದ ಬೆಟ್. 2012 ರಲ್ಲಿ  ‘ಗಾಡ್ ಪಾರ್ಟಿಕಲ್ ಹಿಗ್ಸ್-ಬೋಸಾನ್’ ತನ್ನ ಇರುವಿಕೆಯನ್ನು ಸಾಬೀತು ಪಡಿಸಿ ಹಾಕಿಂಗ್ ಅವರಿಗೆ ನೂರು ಡಾಲರ್'ಗಳ ನಷ್ಟವುಂಟು ಮಾಡಿತು. ಇಂಥ ಬೆಟಿಂಗ್‌ಗಳೆಲ್ಲವನ್ನೂ  ಹಾಕಿಂಗ್ ಸೋತಿರಬಹುದು. ಆದರೆ ಹಾಕಿಂಗ್ ಇನ್ನೆರಡು  ವರ್ಷ ಮಾತ್ರ ಬದುಕಬಹುದೆಂದು 1963 ರಲ್ಲಿ ವೈದ್ಯರು  ನುಡಿದಿದ್ದ ಭವಿಷ್ಯವಾಣಿಯನ್ನು ಮುಂದಿನ ಐವತ್ತೈದು  ವರ್ಷಗಳ ಕಾಲ ಸುಳ್ಳೆಂದೇ ಸಾಬೀತು ಮಾಡಿದರು. 

ನ್ಯೂಟನ್ ಜಾಗದಲ್ಲಿ ಹಾಕಿಂಗ್ 

ಹಾಕಿಂಗ್ ಇದ್ದದ್ದೇ ಹಾಗೆ. ಇಪ್ಪತ್ತೊಂದರ ತರುಣ  ವಯಸ್ಸಿನಲ್ಲಿಯೇ ಗಾಲಿ ಕುರ್ಚಿಗೆ ಅಂಟಿಕೊಳ್ಳಬೇಕಾದ ಅನಿವಾರ್ಯವನ್ನು ಒಪ್ಪಿಕೊಂಡು ಅದರ ಜತೆಯಲ್ಲಿಯೇ  ಓಟಕ್ಕಣಿಯಾದರು. ಬಯಸಿ ಬಯಸಿ ಪ್ರವೇಶ ಪಡೆದುಕೊಂಡ  ಕೇಂಬ್ರಿಜ್‌ನಲ್ಲಿಯೇ ಪಿಎಚ್‌ಡಿ ಪದವಿ ಪಡೆದು, ಎಂಟು ವರ್ಷ ವಿವಿಧ ಸಂಶೋಧನಾಲಯಗಳಲ್ಲಿ ಕೆಲಸ ಮಾಡಿ, ತವರಿಗೇ ಮರಳಿ ಬಂದರು. ಮೊನ್ನೆಯ ತನಕ ಪ್ರಾಧ್ಯಾಪಕ  ವೃತ್ತಿಯ ನಲವತ್ತೈದು ವರ್ಷಗಳನ್ನು ಅಲ್ಲಿಯೇ ಕಳೆದರು.  ಅದೇ ವಿಶ್ವವಿದ್ಯಾಲಯದಲ್ಲಿ ಗುರುತ್ವ ಬಲದ ಪಿತಾಮಹ ಐಸಾಕ್ ನ್ಯೂಟನ್ ಕುಳಿತಿದ್ದ ಪ್ರಾಧ್ಯಾಪಕ ಪೀಠವನ್ನೂ ಕೆಲಕಾಲ  ಅವರು ಅಲಂಕರಿಸಿದರು. ವಿಶ್ವದ ಉಗಮ ಕುರಿತಂತೆ ಇರುವ  ಬಿಗ್ ಬ್ಯಾಂಗ್ ಅಥವಾ ಮಹಾಸ್ಫೋಟ ಸಿದ್ಧಾಂತದ ಪ್ರಬಲ
ಪ್ರತಿಪಾದಕರಾದರು. ಫ್ರೆಡ್ ಹಾಯ್ಲ್‌ರಂಥ ಮಹಾ ಮಹಿಮರೊಂದಿಗೆ ‘ಮಹಾ ಸ್ಫೋಟ’ದ ಕುರಿತು ಸಿಡಿದೆದ್ದಿದ್ದರು. ‘ಸ್ಪೇಸ್’ (ಅವಕಾಶ) ‘ಟೈಮ್’ಗಳ (ಸಮಯ)’ ವಿಶಿಷ್ಟ ಸಮ್ಮಿಲನದಿಂದಾಗಿ ಈ ವಿಶ್ವವೆಂಬ ಬ್ರಹ್ಮಾಂಡದ ಉಗಮವಾಯಿತೆಂಬ
‘ಐನ್‌ಸ್ಟೀನ್ ಸಿದ್ಧಾಂತ’ವನ್ನು ಸಾಬೀತು ಪಡಿಸಲು ತಮಗೆ ದೊರೆತ ಎಲ್ಲ ಅವಕಾಶಗಳನ್ನೂ ಬಳಸಿಕೊಂಡು ತಮ್ಮೆಲ್ಲ ಸಮಯವನ್ನೂ ಮೀಸಲಿಟ್ಟರು. ಅದಕ್ಕೆಂದೇ ಐನ್‌ಸ್ಟೀನರ ‘ಸಾಮಾನ್ಯ ಸಾಪೇಕ್ಷ ಸಿದ್ಧಾಂತ’ ಹಾಗೂ ‘ಕ್ವಾಂಟಮ್
ಸಿದ್ಧಾಂತ’ಗಳನ್ನು ಏಕ ವೇದಿಕೆಯಲ್ಲಿ ಚರ್ಚಿಸಲಾರಂಭಿಸಿದರು. ಅವುಗಳ ಜೋಡಣೆಯಿಂದ ವಿಶ್ವದ ಉಗಮಕ್ಕೆ ನಿಖರ ಸಾಕ್ಷಿ ದೊರಕುವುದೆಂದರು. ‘ಕ್ವಾಂಟಮ್ ಸಿದ್ಧಾಂತ’ವೆಂಬ ಅನುರೂಪದ ವಿಷಯದಲ್ಲಿರುವ ‘ಏಕತೆಯಲ್ಲಿನ ಅನೇಕತೆ-
ಅನೇಕತೆಯಲ್ಲಿನ ಭಿನ್ನತೆ-ಸೀಮಿತೆಯಲ್ಲಿನ ಅನಂತತೆ’ ಗಳಂಥ ಒಡಪುಗಳನ್ನು ಬಿಡಿಸಹೊರಟರು. ಇದೇ ಸಮಯದಲ್ಲಿ ‘ಈ  ಕಾಲಕ್ಕೆ ಆರಂಭವೆಂಬುದಿತ್ತೆ? ಕಾಲ ಹಿಮ್ಮುಖವಾಗಿ ಚಲಿಸಬಲ್ಲದೆ? ಈ ವಿಶ್ವ ಅನಂತವೆ ಅಥವಾ ಅದಕ್ಕೂ ಸೀಮೆಯುಂಟೆ?  ಇಂಥ ಜಗದ್ಕೌತುಕದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು  ನ್ಯೂಟನ್‌ರಿಂದ ಐನ್‌ಸ್ಟೀನ್ ಅವರವರೆಗೆ ಎಲ್ಲ ಪೂರ್ವಸೂರಿಗಳ ಸಿದ್ಧಾಂತ-ಪ್ರಮೇಯಗಳನ್ನು ಒರೆಗಲ್ಲಿನಲ್ಲಿ ತಿಕ್ಕಿ ತೀಡಿದರು.

ಕುರ್ಚಿಯಲ್ಲಿ ಕೂತು ಸಂಪಾದಿಸಿದ್ದು
ಈ ವಿಶ್ವದ ಉಗಮ ಒಬ್ಬ ಸೃಷ್ಟಿಕರ್ತನಿಂದಾಯಿತೆ? ಹಾಗಿದ್ದರೆ ಅವನ ಸೃಷ್ಟಿಗೆ ಅನುಕೂಲವಾಗಲೆಂದೇ ನಿರ್ಮಿತವಾದ ವಾತಾವರಣವನ್ನು ವಿನ್ಯಾಸಗೊಳಿಸಿದವರಾರು? ವಿಶ್ವದ ನಿರಂತರ ಚಲನೆಗೆ ಚಾಲನೆಯಿತ್ತವರಾರು? ವಿಜ್ಞಾನ ಇವೆಲ್ಲ ಪ್ರಶ್ನೆಗಳಿಗೆ ವಿಭಿನ್ನ ಸಮಜಾಯಿಶಿಗಳನ್ನು ನೀಡಬಲ್ಲದೆ? ಅಥವಾ ಅವರೇ ಪ್ರತಿಪಾದಿಸಿದ ‘ಸ್ಟ್ರಿಂಗ್ ಥಿಯರಿ’ಯಂತೆ ಗಾತ್ರವೇ ಇಲ್ಲದ ಏಕ ಆಯಾಮದ ಬಿಂದುಗಳು ಅನಂತ ಆಗಸದಲ್ಲಿ ತೇಲುತ್ತಾ, ಒಂದಕ್ಕೊಂದು ಜೋಡಣೆಯಾಗುತ್ತಾ, ಪರಸ್ಪರ
ಅನುಸಂಧಿಸುತ್ತಾ ಬ್ರಹ್ಮಾಂಡ ಸೃಷ್ಟಿಸಿತೆ? ಈ ಕುರಿತಂತೆ ತಮ್ಮ ಹದಿಮೂರು ವಿಜ್ಞಾನ ಗ್ರಂಥಗಳಲ್ಲಿ ಹಾಕಿಂಗ್ ವಿವರಣೆಗಳನ್ನು  ನೀಡಿದ್ದಾರೆ, ವಿವಾದಗಳನ್ನು ಸೃಷ್ಟಿಸಿದ್ದಾರೆ, ಸಮಸ್ಯೆಗಳನ್ನು  ಮತ್ತಷ್ಟು ಕಗ್ಗಂಟಾಗಿಸಿದ್ದಾರೆ. ಈ ಕಾರ್ಯಗಳಿಗೆ ನೊಬೆಲ್  ಪುರಸ್ಕಾರದ ಹೊರತಾಗಿ ಉಳಿದೆಲ್ಲ ಜಗನ್ಮಾನ್ಯ ಪ್ರಶಸ್ತಿಗಳು  ಅವರ ಕೊರಳನ್ನಲಂಕರಿಸಿವೆ. ಸಹಸ್ರಾರು ನೇರ ವಿದ್ಯಾರ್ಥಿಗಳು  ಲಕ್ಷಾಂತರ ಪರೋಕ್ಷ ಶಿಷ್ಯರು ಕೋಟ್ಯಂತರ ಅಭಿಮಾನಿಗಳನ್ನು  ತಮ್ಮ ಗಾಲಿ ಕುರ್ಚಿಯ ಓಟದಲ್ಲೇ ಅವರು ಸಂಪಾದಿಸಿದ್ದಾರೆ.  ಬೆರಳ ತುದಿಯ ಬೆರಗು  ಆಧುನಿಕ ತಂತ್ರಜ್ಞಾನದ ನೆರವಿಲ್ಲದಿದ್ದರೆ ಹಾಕಿಂಗ್ ಎಂಬ  ಮಹಾ ಪ್ರತಿಭೆ ಕಪ್ಪು ಕುಳಿಯೊಳಗೆ ನಶಿಸಿಹೋಗುತ್ತಿತ್ತು. ನಿಧಾನ  ಗತಿಯಲ್ಲಿ ಚಲನೆಯ ಮೇಲಿನ ನಿಯಂತ್ರಣ ತಪ್ಪುತ್ತಿದ್ದರೂ
ಅವರ ಮಿದುಳು ಪ್ರಖರವಾಗಿ ಕಾರ್ಯನಿರ್ವಹಿಸುತ್ತಿತ್ತು. ‘ಸಾವು ಅತಿ ಸನಿಹದಲ್ಲಿದೆಯೆಂದು ಅರಿವಾದೊಡನೆ ಜೀವನದ ಸಾರ್ಥಕತೆಯೇನೆಂಬುದು ಮನವರಿಕೆಯಾಗುತ್ತದೆ. ಹಾಗೆಯೇ  ಮಾಡಲು ಅದೆಷ್ಟು ಕೆಲಸಗಳು ಬಾಕಿಯಿವೆಂಬುದೂ
ಗೊತ್ತಾಗುತ್ತದೆ’, ‘ದೈಹಿಕವಾಗಿ ನ್ಯೂನತೆಗಳಿದ್ದರೂ ಜೀವನೋತ್ಸಾಹದಲ್ಲಿ ನ್ಯೂನತೆಗಳನ್ನಿಟ್ಟುಕೊಳ್ಳಬಾರದು’ - ಇದು  ಹಾಕಿಂಗ್ ತಾವೇ ಬರೆದು ಅಕ್ಷರಶಃ ಪರಿಪಾಲಿಸಿದ ಘೋಷವಾಕ್ಯ.

ಬಹುಶಃ ತನ್ನ ಗೋರಿಯ ಮೇಲೆ ಯಾವ  ಒಕ್ಕಣೆಯಿರಬೇಕೆಂದು ಮೊದಲೇ ಬರೆದುಕೊಂಡಿದ್ದ ವಿಜ್ಞಾನಿ  ಹಾಕಿಂಗ್ ಮಾತ್ರವಿರಬಹುದು. ‘ಹಾಕಿಂಗ್ ವಿಕಿರಣದ  ಗಣಿತಸೂತ್ರ’ ತಮ್ಮ ಗೋರಿಯನ್ನು ಅಲಂಕರಿಸಬೇಕೆಂಬ ಬಯಕೆಯನ್ನು 2002 ರ ಬರಹವೊಂದರಲ್ಲಿ ತೋಡಿಕೊಂಡಿದ್ದರು.  ಅವರದೇ ಮಾತುಗಳಾದ ‘ನಾವು ಹಾಗೂ ನಮ್ಮ ವಿಶ್ವದ ಅಸ್ಥಿತ್ವವಿರುವುದೇಕೆಂಬ ಚರ್ಚೆಯಲ್ಲಿ ಕೇವಲ  ತತ್ವಜ್ಞಾನಿಗಳು ಮತ್ತು ವಿಜ್ಞಾನಿಗಳು ಮಾತ್ರ ಭಾಗಿಯಾದರೆ ಸಾಲದು, ಜನಸಾಮಾನ್ಯರೂ ತಮ್ಮ ಅಭಿಪ್ರಾಯಗಳನ್ನು ಮಂಡಿಸಬೇಕು. ಇದು ಸಾಧ್ಯವಾದಾಗಲೇ ನಮ್ಮೆಲ್ಲರ ಸೃಷ್ಟಿಕರ್ತನ ಮನಸ್ಸಿನಲ್ಲಿ ಏನಿತ್ತೆಂಬುದು ಮನವರಿಕೆ ಯಾದೀತು’ ಕೂಡಾ ಅವರ ಗೋರಿಯ ಮೇಲೆ ರಾರಾಜಿಸಿ ದರೆ ಹಾಕಿಂಗ್ ಕಂಡ ಕನಸು ಪೂರ್ಣವಾದಂತೆ.

Follow Us:
Download App:
  • android
  • ios