ಕಾಂಕ್ರೀಟ್ ಮೇಲ್ಸೇತುವೆಗೆ ಹೋಲಿಸಿದರೆ ಉಕ್ಕಿನ ಸೇತುವೆ ದುಬಾರಿ;20ಕ್ಕಿಂತ ಹೆಚ್ಚು ವರ್ಷ ಬಾಳಿಕೆ ಬರೋದಿಲ್ಲ; ಉಕ್ಕಿನ ಸೇತುವೆಗಿಂತ ಕಾಂಕ್ರೀಟ್'ನಂತಹ ಖಾಯಂ ವ್ಯವಸ್ಥೆಯೇ ಉತ್ತಮ;ಪ್ರೀಕ್ಯಾಸ್ಟ್ ಕಾಂಕ್ರೀಟ್ ತಂತ್ರಜ್ಞಾನ ಉಪಯೋಗಿಸಿ ಕಾಂಕ್ರೀಟ್ ಮೇಲ್ಸೇತುವೆಯನ್ನೂ ತ್ವರಿತಗತಿಯಲ್ಲಿ ನಿರ್ಮಿಸಲು ಸಾಧ್ಯ;

ಬೆಂಗಳೂರು: ರಾಜ್ಯ ಸರಕಾರದ ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹಸಿರು ನ್ಯಾಯಾಧಿಕರಣವು ಯೋಜನೆಗೆ ತಡೆ ನೀಡಿದೆ. ಆದರೆ, ಸರಕಾರ ಮಾತ್ರ ಈಗಲೂ ಸ್ಟೀಲ್ ಬ್ರಿಡ್ಜ್ ಯೋಜನೆಯ ಆಸೆ ಕೈಬಿಟ್ಟಿಲ್ಲ. ಅಷ್ಟಕ್ಕೂ ಸ್ಟೀಲ್ ಫ್ಲೈಓವರ್ ಯೋಜನೆಗೆ ಪರ-ವಿರೋಧಗಳು ಏನೇನಿವೆ ಎಂಬುದನ್ನು ನೋಡೋಣ.

ಸರಕಾರದ ವಾದವೇನು?

* ಹೆಬ್ಬಾಳ ರಸ್ತೆಯಲ್ಲಿರುವ ವಿಪರೀತ ಟ್ರಾಫಿಕ್'ನ ಸಮಸ್ಯೆಯನ್ನು ತಗ್ಗಿಸಲು ಸಾಧ್ಯ

* ಬಹಳ ಬೇಗ ಉಕ್ಕಿನ ಸೇತುವೆ ನಿರ್ಮಿಸಲು ಸಾಧ್ಯ

* ಕಡಿಯಲಾಗುವ 800 ಮರಗಳ ಬದಲು ನಗರದ ವಿವಿಧೆಡೆ 60 ಸಾವಿರ ಸಸಿಗಳನ್ನು ನೆಟ್ಟು ಪೋಷಿಸಲಾಗುವುದು

* ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದ್ದೇವೆ. ನಮಗೆ ಬಂದಿರುವ ಬಹುತೇಕ ಇಮೇಲ್'ಗಳಲ್ಲಿ ಯೋಜನೆಗೆ ಬೆಂಬಲ ವ್ಯಕ್ತವಾಗಿದೆ ಎಂಬುದು ಸರಕಾರದ ಹೇಳಿಕೆ

* ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಪ್ರಸ್ತಾವ ಬಂದಿದ್ದ ಬಿಡಿಎಯ ತಾಂತ್ರಿಕ ಸಲಹಾ ಸಮಿತಿಯಿಂದಲೇ ಹೊರತು ಸರಕಾರದ ಹೆಜ್ಜೆಯಲ್ಲ

ಸ್ಟೀಲ್ ಬ್ರಿಡ್ಜ್ ಯಾಕೆ ಬೇಡ?

* ಕಾಂಕ್ರೀಟ್ ಮೇಲ್ಸೇತುವೆಗೆ ಹೋಲಿಸಿದರೆ ಉಕ್ಕಿನ ಸೇತುವೆ ದುಬಾರಿ

* 20ಕ್ಕಿಂತ ಹೆಚ್ಚು ವರ್ಷ ಬಾಳಿಕೆ ಬರೋದಿಲ್ಲ; ಉಕ್ಕಿನ ಸೇತುವೆಗಿಂತ ಕಾಂಕ್ರೀಟ್'ನಂತಹ ಖಾಯಂ ವ್ಯವಸ್ಥೆಯೇ ಉತ್ತಮ

* ಪ್ರೀಕ್ಯಾಸ್ಟ್ ಕಾಂಕ್ರೀಟ್ ತಂತ್ರಜ್ಞಾನ ಉಪಯೋಗಿಸಿ ಕಾಂಕ್ರೀಟ್ ಮೇಲ್ಸೇತುವೆಯನ್ನೂ ತ್ವರಿತಗತಿಯಲ್ಲಿ ನಿರ್ಮಿಸಲು ಸಾಧ್ಯ

* ಸ್ಟೀಲ್ ಬ್ರಿಡ್ಜ್ ಅನ್ನು ಸಾಮಾನ್ಯವಾಗಿ ಕೆರೆ, ನದಿಗಳ ಮೇಲೆ ಸೇತುವೆಯಾಗಿ ನಿರ್ಮಿಸುತ್ತಾರೆ. ಆದರೆ, ನಗರದಲ್ಲಿ ಇದು ಸೂಕ್ತವಲ್ಲ

* ಉಕ್ಕಿನ ಸೇತುವೆಯಿಂದ ಅದುರುವಿಕೆ ಮತ್ತು ಶಬ್ದದ ಹಾಳಿ ಬರುತ್ತದೆ. ಇದರ ಮೈಂಟೆನೆನ್ಸ್'ಗೆ ಕೋಟ್ಯಂತ ಹಣವೂ ವೆಚ್ಚವಾಗುತ್ತದೆ.

* ಬಸವೇಶ್ವರ ಸರ್ಕಲ್'ನಿಂದ ಹೆಬ್ಬಾಳದವರೆಗಿನ ಸ್ಟೀಲ್ ಫ್ಲೈಓವರ್ ನಿರ್ಮಾಣದಲ್ಲಿ 800ಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತದೆ; ನೆಹರೂ ತಾರಾಲಯದ ಸ್ವಲ್ಪ ಭೂಮಿಯನ್ನು ಬಿಟ್ಟುಕೊಡಬೇಕಾಗುತ್ತದೆ.

* ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡದೇ ಏಕಪಕ್ಷೀಯವಾಗಿ ನಿರ್ಧಾರ; ಕೇವಲ 293 ಮಂದಿಯ ಅಭಿಪ್ರಾಯ ಪಡೆದು ನಿರ್ಧರಿಸಲಾಗಿದೆಯಂತೆ

* ಮುಂಬರುವ ಚುನಾವಣೆಗೆ ಹಣ ಸಂಗ್ರಹಿಸಲು ಸರಕಾರದಿಂದ ಈ ಯೋಜನೆ ನಡೆಯುತ್ತಿದೆ ಎಂಬ ಆರೋಪವಿದೆ.

* ಬಿಡಿಎ ತಾಂತ್ರಿಕ ಸಲಹಾ ಸಮಿತಿಯು ಈ ಯೋಜನೆಗೆ ಅನುಮೋದನೆ ನೀಡಿದೆ ಎನ್ನುವುದು ಸುಳ್ಳು. ಕಳೆದ 5 ವರ್ಷಗಳಿಂದ ಈ ಸಮಿತಿ ಸಕ್ರಿಯವಾಗಿಯೇ ಇಲ್ಲ. ಸಮಿತಿಯ ಮುಖ್ಯಸ್ಥರಾಗಿದ್ದ ರಸ್ತೆ ತಂತ್ರಜ್ಞಾನ ತಜ್ಞ ಪ್ರೊ| ಸಿಇಜಿ ಜಸ್ಟೋ ಅವರು ಪಾರ್ಶ್ವವಾಯು ಆಘಾತಕ್ಕೊಳಗಾಗಿ ಮೂರು ವರ್ಷಗಳ ಹಿಂದೆಯೇ ರಾಜೀನಾಮೆ ನೀಡಿದ್ದರು ಎಂಬುದು ವಿರೋಧಿಗಳ ವಾದ.

* ಯೋಜನೆಗೆ ಆರಂಭದಲ್ಲಿ ಅಂದಾಜು ಮಾಡಿದ್ದು 1,350 ಕೋಟಿ ರೂ. ಆದರೆ, ಟೆಂಡರ್ ಆಗಿದ್ದು 1791 ಕೋಟಿಗೆ. ಹೆಚ್ಚುವರಿ 500 ಕೋಟಿ ವೆಚ್ಚ.

* ಟೆಂಡರ್ ಪಾರದರ್ಶಕವಾಗಿಲ್ಲ. ಬ್ಲ್ಯಾಕ್'ಲಿಸ್ಟ್'ನಲ್ಲಿರುವ ನಾಗಾರ್ಜುನ ಮತ್ತು ಎನ್'ಸಿಸಿ ಸಂಸ್ಥೆಗಳಿಗೆ ಈ ಯೋಜನೆಗೆ ಗುತ್ತಿಗೆ ಕೊಟ್ಟಿರುವುದು ಅನುಮಾನ ಮೂಡಿಸಿದೆ.

* ಯೋಜನೆಯ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡುವ ಡಿಪಿಆರ್ ತಯಾರಿಸಿಲ್ಲ; ಟ್ರಾಫಿಕ್ ಪೊಲೀಸ್, ಪರಿಸರ ಇಲಾಖೆಗಳ ಅನುಮತಿ ಪಡೆದಿಲ್ಲ

* ಸೇತುವೆ 68 ಅಡಿ ಎತ್ತರದಲ್ಲಿರಬಹುದಾದ್ದರಿಂದ ಸಿಎಂ ನಿವಾಸ, ವಾಯುಪಡೆ ತರಬೇತಿ ಸಂಸ್ಥೆ ಮೊದಲಾದ ಸೂಕ್ಷ್ಮ ಸ್ಥಳಗಳಿಗೆ ಭದ್ರತಾ ಅಪಾಯ ಇರಲಿದೆ.