182 ಮೀಟರ್‌ ಎತ್ತರದ ಪ್ರತಿಮೆ ಇದಾಗಿದ್ದು, 2389 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸರ್ದಾರ್‌ ಸರೋವರ ಅಣೆಕಟ್ಟೆಯಿಂದ ಕೆಳಭಾಗಕ್ಕೆ 3.2 ಕಿ.ಮೀ. ದೂರದಲ್ಲಿ ಈ ಪ್ರತಿಮೆ ಎದ್ದು ನಿಂತಿದೆ. ಉದ್ಘಾಟನೆ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ 3400 ಕಾರ್ಮಿಕರು ಹಾಗೂ 250 ಎಂಜಿನಿಯರ್‌ಗಳು ಹಗಲು- ರಾತ್ರಿ ಎನ್ನದೇ ದುಡಿಯುತ್ತಿದ್ದಾರೆ.

ಕೇವಡಿಯಾ (ಗುಜರಾತ್‌): ದೇಶದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಸ್ಮರಣಾರ್ಥ ‘ಏಕತಾ ಪ್ರತಿಮೆ’ ಹೆಸರಿನಲ್ಲಿ ಗುಜರಾತಿನ ನರ್ಮದಾ ನದಿಯ ಮಧ್ಯೆ ನಿರ್ಮಿಸಲಾಗುತ್ತಿರುವ ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪಟೇಲರ ಜನ್ಮದಿನವಾದ ಅ.31ರಂದು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡುವ ಕೆಲಸ ಭರದಿಂದ ಸಾಗಿದೆ.

182 ಮೀಟರ್‌ ಎತ್ತರದ ಪ್ರತಿಮೆ ಇದಾಗಿದ್ದು, 2389 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸರ್ದಾರ್‌ ಸರೋವರ ಅಣೆಕಟ್ಟೆಯಿಂದ ಕೆಳಭಾಗಕ್ಕೆ 3.2 ಕಿ.ಮೀ. ದೂರದಲ್ಲಿ ಈ ಪ್ರತಿಮೆ ಎದ್ದುನಿಂತಿದೆ. ಉದ್ಘಾಟನೆ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ 3400 ಕಾರ್ಮಿಕರು ಹಾಗೂ 250 ಎಂಜಿನಿಯರ್‌ಗಳು ಹಗಲು- ರಾತ್ರಿ ಎನ್ನದೇ ದುಡಿಯುತ್ತಿದ್ದಾರೆ.

ಈ ಪ್ರತಿಮೆಯಲ್ಲೇ ವೀಕ್ಷಣಾ ಸ್ಥಳವೂ ಇರಲಿದೆ. 153 ಮೀಟರ್‌ ಎತ್ತರದಲ್ಲಿ ಒಮ್ಮೆಲೆ 200 ಮಂದಿ ವೀಕ್ಷಿಸಲು ಅವಕಾಶವಿರುತ್ತದೆ. ಅಲ್ಲಿಗೆ ಜನರನ್ನು ಕರೆದೊಯ್ಯಲು ಎರಡು ಲಿಫ್ಟ್‌ಗಳು ಕೂಡ ಇರುತ್ತವೆ.

ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರು 2013ರ ಅ.31ರಂದು ಏಕತಾ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಪ್ರತಿಮೆಗಾಗಿ ದೇಶಾದ್ಯಂತ ರೈತರಿಂದ ಕಬ್ಬಿಣವನ್ನು ಸಂಗ್ರಹಿಸಲಾಗಿತ್ತು. 2014ರ ಡಿ.3ರಂದು ಪ್ರತಿಮೆ ನಿರ್ಮಾಣ ಗುತ್ತಿಗೆಯನ್ನು ಎಲ್‌ ಆ್ಯಂಡ್‌ ಟಿ ಕಂಪನಿಗೆ ವಹಿಸಲಾಗಿತ್ತು. 42 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಕ್ಲಿಷ್ಟಕರ ವಿನ್ಯಾಸ ಹಂತದಲ್ಲಿ ಸಾಕಷ್ಟು ಸಮಯ ಹಿಡಿದಿದ್ದರಿಂದ ಗಡುವು ಕೆಲ ತಿಂಗಳು ಮುಂದಕ್ಕೆ ಹೋಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಮಗಾರಿ ಪೂರ್ಣಗೊಂಡ ಬಳಿಕ ನಿತ್ಯ 15 ಸಾವಿರ ಪ್ರವಾಸಿಗರು ಏಕತಾ ಪ್ರತಿಮೆ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಇದೆ. ಪ್ರವಾಸಿಗರಿಗಾಗಿ ತ್ರಿ ಸ್ಟಾರ್‌ ಹೋಟೆಲ್‌ ಹಾಗೂ ಟೆಂಟ್‌ಗಳನ್ನೂ ನಿರ್ಮಾಣ ಮಾಡಲಾಗುತ್ತಿದೆ.

ವಿಶೇಷತೆ:

- ಸದ್ಯ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಚೀನಾದಲ್ಲಿದೆ. ಅಲ್ಲಿನ ಲೂಶಾನ್‌ನಲ್ಲಿರುವ ಬುದ್ಧನ ಪ್ರತಿಮೆ 128 ಮೀಟರ್‌ ಎತ್ತರವಿದೆ.

- ಗುಜರಾತಿನ ಏಕತಾ ಪ್ರತಿಮೆಯು ಚೀನಾ ಬುದ್ಧನ ಪ್ರತಿಮೆಗಿಂತ 54 ಮೀಟರ್‌ ಅಧಿಕ ಎತ್ತರದ್ದಾಗಿದೆ.

- ಭೂಕಂಪ, ಬಿರುಗಾಳಿಯನ್ನೂ ಏಕತಾ ಪ್ರತಿಮೆ ತಡೆದುಕೊಳ್ಳಬಹುದು. ಇದರ ನಿರ್ಮಾಣಕ್ಕೆ 22500 ಮೆಟ್ರಿಕ್‌ ಟನ್‌ ಸಿಮೆಂಟ್‌ ಬಳಸಲಾಗಿದೆ.