ಕೇಂದ್ರ ಸರ್ಕಾರದಿಂದ ಭರ್ಜರಿ ಕೊಡುಗೆ : 11 ಲಕ್ಷ ಕೋಟಿ ನೆರವು

States Getting Over Rs. 11 Lakh Crore From Centre Says PM Modi
Highlights

ರಾಜ್ಯಗಳಿಗೆ ಅನುದಾನ ಹಂಚಲು ಕೇಂದ್ರ ಸರ್ಕಾರದಲ್ಲಿ ಯಾವುದೇ ಕೊರತೆ ಇಲ್ಲ. ಯುಪಿಎ ಸರ್ಕಾರದ ಕೊನೆಯ ವರ್ಷ ರಾಜ್ಯಗಳಿಗೆ ಹಂಚಿಕೆಯಾಗಿದ್ದ ಹಣಕ್ಕಿಂತ 6 ಲಕ್ಷ ಕೋಟಿ ರು. ಹಣ ಈ ಸಲ ಹೆಚ್ಚುವರಿಯಾಗಿ ರಾಜ್ಯಗಳಿಗೆ ಹಂಚಿಕೆಯಾಗಲಿದೆ. ಅರ್ಥಾತ್ 11 ಲಕ್ಷ ಕೋಟಿ ರು. ನೆರವನ್ನು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಒದಗಿಸಲಿದೆ ಎಂದು ಮೋದಿ ಅವರು ಹೇಳಿದರು.

ನವದೆಹಲಿ : ರಾಜ್ಯಗಳಿಗೆ ಅನುದಾನ ಹಂಚಲು ಕೇಂದ್ರ ಸರ್ಕಾರದಲ್ಲಿ ಯಾವುದೇ ಕೊರತೆ ಇಲ್ಲ. ಯುಪಿಎ ಸರ್ಕಾರದ ಕೊನೆಯ ವರ್ಷ ರಾಜ್ಯಗಳಿಗೆ ಹಂಚಿಕೆಯಾಗಿದ್ದ ಹಣಕ್ಕಿಂತ 6 ಲಕ್ಷ ಕೋಟಿ ರು. ಹಣ ಈ ಸಲ ಹೆಚ್ಚುವರಿಯಾಗಿ ರಾಜ್ಯಗಳಿಗೆ ಹಂಚಿಕೆಯಾಗಲಿದೆ. ಅರ್ಥಾತ್ 11 ಲಕ್ಷ ಕೋಟಿ ರು. ನೆರವನ್ನು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಒದಗಿಸಲಿದೆ ಎಂದು ಮೋದಿ ಅವರು ಹೇಳಿದರು.

23 ಮುಖ್ಯಮಂತ್ರಿಗಳು ಹಾಗೂ ಒಬ್ಬ ಲೆಫ್ಟಿನೆಂಟ್ ಗವರ್ನರ್ ಪಾಲ್ಗೊಂಡಿದ್ದ ನೀತಿ ಆಯೋಗದ ಆಡಳಿತ ಮಂಡಳಿಯ ನಾಲ್ಕನೇ ಸಭೆಯನ್ನು ಉದ್ದೇಶಿಸಿ ಭಾನುವಾರ ಅವರು ಮಾತನಾಡಿದರು.  ಸಭೆಯಲ್ಲಿ ಮುಖ್ಯಮಂತ್ರಿಗಳು ಮಾಡಿದ ಭಾಷಣವನ್ನು ನೀತಿ ಆಯೋಗವು ಗಣನೆಗೆ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿಗಳು  ನೀಡಿದ ಸಲಹೆಯನ್ವಯ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು 3 ತಿಂಗಳೊಳಗೆ ಮಾಹಿತಿ ನೀಡಬೇಕು ಎಂದು ಆಯೋಗಕ್ಕೆ ಮೋದಿ ತಾಕೀತು ಮಾಡಿದರು. ಇದೇ ವೇಳೆ ದೇಶದ ಹಲವು ಭಾಗಗಳಲ್ಲಿ  ಪ್ರವಾಹ ಕಾಣಿಸಿಕೊಂಡಿದ್ದನ್ನು ಉಲ್ಲೇಖಿಸಿದ ಅವರು, ಈ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಲ್ಲ ಕೇಂದ್ರೀಯ ನೆರವು ನೀಡಲಿದೆ ಎಂದು ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದರು. 

ಎರಡಂಕಿ ಪ್ರಗತಿ ಗುರಿ: ಭಾರತದ ಆರ್ಥಿಕ ಪ್ರಗತಿಯನ್ನು ಎರಡಂಕಿಗೆ ತೆಗೆದುಕೊಂಡು ಹೋಗುವ ಕೆಲಸಗಳು ಆಗಬೇಕು. ಇದು ಸರ್ಕಾರದ ಮುಂದಿರುವ ದೊಡ್ಡ ಸವಾಲು.  ಇದಕ್ಕಾಗಿ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಳ್ಳಲೇಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 2017 - 18  ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.7.7 ರ ಆರ್ಥಿಕ ಪ್ರಗತಿಯಾಗಿದೆ. ಆದರೆ ಇದನ್ನು ಎರಡಂಕಿಗೆ  ಲುಪಿಸುವುದು ಸವಾಲು. 

ಇದಕ್ಕಾಗಿ ಹಲವಾರು ಮಹತ್ವದ ಕ್ರಮಗಳು ಅನಿವಾರ್ಯ. ಈ ಕ್ರಮಗಳನ್ನು ಕೈಗೊಳ್ಳುವುದು ಭಾರತ-2020 ಗುರಿ ಸಾಧನೆಗೆ ಅಗತ್ಯ ಎಂದರು. ಅಲ್ಲದೆ ವಿಶ್ವವು ಭಾರತವನ್ನು 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗುವುದನ್ನು ಬಯಸುತ್ತಿದೆ ಎಂದು ಹೇಳಿದರು.

ರಾಜ್ಯಗಳ ಸಲಹೆ ಆಲಿಕೆ, ಅಳವಡಿಕೆ: ಮೋದಿ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಬೆಲೆ ನೀಡುತ್ತಿಲ್ಲ ಎಂಬ ಆರೋಪಗಳ ಬೆನ್ನಲ್ಲೇ ಒಕ್ಕೂಟ ವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಸಹಕಾರ ಒಕ್ಕೂಟ, ಒಕ್ಕೂಟ ಸಹಕಾರ ತತ್ವಗಳ ಅಡಿ ನೀತಿ ಆಯೋಗವು ಟೀಮ್ ಇಂಡಿಯಾ ತತ್ವದ ಅಡಿ ಕೆಲಸ ಮಾಡುತ್ತಿದೆ. ನೀತಿ ಆಯೋಗದ ಆಡಳಿತ ಮಂಡಳಿಯು ಭಾರತದ ಅಭಿವೃದ್ಧಿಯಲ್ಲಿ ಐತಿಹಾಸಿಕ ಬದಲಾವಣೆ ತರಬಲ್ಲದು ಎಂದು ಅಭಿಪ್ರಾಯಪಟ್ಟರು. 

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸ್ವಚ್ಛ ಭಾರತ, ಡಿಜಿಟಲ್ ಇಂಡಿಯಾ, ಕೌಶಲ್ಯಾಭಿವೃದ್ಧಿ, ಮೊದಲಾದ ಯೋಜನೆಗಳ ಉಪ ಸಮಿತಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಉಪಸಮಿತಿಗಳ ಶಿಫಾರಸುಗಳನ್ನು ವಿವಿಧ ಸಚಿವಾಲಯಗಳ ಯೋಜನೆಗಳಲ್ಲಿ ಅಳವಡಿಸಿ ಕೊಳ್ಳಲಾಗಿದೆ ಎಂದು ಉದಾಹರಿಸಿದರು. 15ನೇ ಹಣ ಕಾಸು ಆಯೋಗಕ್ಕೆ ರಾಜ್ಯಗಳು ಹೊಸ ಐಡಿಯಾಗಳನ್ನು ನೀಡಬೇಕು ಎಂದು ಪ್ರಧಾನಮಂತ್ರಿಗಳು ಮುಖ್ಯಮಂತ್ರಿ ಗಳನ್ನು ಇದೇ ಸಂದರ್ಭದಲ್ಲಿ ಕೋರಿದರು.

ವಿದ್ಯುತ್ ಉಳಿತಾಯ ಮಾಡಲು ಬೀದಿದೀಪಗಳು, ಎಲ್ಲ ಸರ್ಕಾರಿ ಕಚೇರಿಗಳು ಹಾಗೂ ಸಚಿವಾಲಯಗಳಿಗೆ ಎಲ್‌ಇಡಿ ಬಲ್ಬ್ ಬಳಸುವಂತೆ ಸೂಚಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಪ್ರಧಾನಿ ಮನವಿ ಮಾಡಿದರು. ರೈತರ ಆದಾಯ ದ್ವಿಗುಣ, 115 ಅಭಿವೃದ್ಧಿ ಶೀಲ ಜಿಲ್ಲೆಗಳ ಅಭಿವೃದ್ಧಿ, ಆಯುಷ್ಮಾನ್ ಭಾರತ, ಮಿಶನ್  ಇಂದ್ರ ಧನುಷ್, ಪೌಷ್ಟಿಕ ಯೋಜನೆ ಹಾಗೂ ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನ- ಮುಂತಾದವುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಮೂವರು ಗೈರು: ಸಭೆಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಧರಣಿನಿರತ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಜಮ್ಮು-ಕಾಶ್ಮೀರ ಮುಖ್ಯ ಮಂತ್ರಿ ಮೆಹಬೂಬಾ ಮುಫ್ತಿ ಗೈರು ಹಾಜರಾಗಿದ್ದರು. ಉಳಿದ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಪರಾಜ್ಯ ಪಾಲರು ಭಾಷಣ ಮಾಡಿ, ದೇಶ ಹಾಗೂ ರಾಜ್ಯಗಳ ಅಭಿವೃದ್ಧಿ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

loader