Asianet Suvarna News Asianet Suvarna News

ರಾಜ್ಯದ ರಸ್ತೆಗಳು ಸ್ವಚ್ಛ, ಸುರಕ್ಷಿತ: ಸಮೀಕ್ಷೆ

ಈವರೆಗೆ ವ್ಯಾಪಕ ಟೀಕೆಗೆ ಒಳಗಾಗುತ್ತಿದ ರಾಜ್ಯದ ಹೆದ್ದಾರಿಗಳು ಈ ಬಾರಿ ಹಿಂದೆಂದಿಗಿಂತಲೂ ಅತ್ಯುತ್ತಮ, ಅತ್ಯಂತ ಸ್ವಚ್ಛ, ಸುರಕ್ಷಿತ ಹಾಗೂ ಸುಗಮ ಸಂಚಾರ ಯೋಗ್ಯ ಎಂಬ ಪ್ರಶಂಸೆಗೆ ಪಾತ್ರವಾಗಿವೆ.

State Roads are Clean and Safe Says Survey

ಬೆಂಗಳೂರು: ಈವರೆಗೆ ವ್ಯಾಪಕ ಟೀಕೆಗೆ ಒಳಗಾಗುತ್ತಿದ ರಾಜ್ಯದ ಹೆದ್ದಾರಿಗಳು ಈ ಬಾರಿ ಹಿಂದೆಂದಿಗಿಂತಲೂ ಅತ್ಯುತ್ತಮ, ಅತ್ಯಂತ ಸ್ವಚ್ಛ, ಸುರಕ್ಷಿತ ಹಾಗೂ ಸುಗಮ ಸಂಚಾರ ಯೋಗ್ಯ ಎಂಬ ಪ್ರಶಂಸೆಗೆ ಪಾತ್ರವಾಗಿವೆ.

ಇದು ಕೇಂದ್ರ ಸರ್ಕಾರದ ಮಾನ್ಯತೆ ಹೊಂದಿರುವ ಎಂಡಿಆರ್’ಎ ಸಂಸ್ಥೆ ನಡೆಸಿದ್ದ ರಸ್ತೆ ಬಳಕೆದಾರರ ಸಮೀಕ್ಷೆಯಿಂದ ತಿಳಿದು ಬಂದಿದೆ. ಈ ವರದಿಯನ್ನು ರಾಜ್ಯ ಸರ್ಕಾರ ಅನುಮೋದಿಸಿ ಸದ್ಯದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ.

ಈ ವರದಿ ಪ್ರಕಾರ ಕೇವಲ ಎರಡು ವರ್ಷಗಳ ಹಿಂದೆ ರಾಜ್ಯದ ರಸ್ತೆಗಳು ಯೋಗ್ಯವಲ್ಲ ಎಂದು ಟೀಕೆ, ಟಿಪ್ಪಣಿ ಮಾಡಿದ ರಸ್ತೆ ಬಳಕೆದಾರರು ಈಗ ಅತ್ಯುತ್ತಮ ಎಂದು ಶ್ಲಾಘಿಸಿದ್ದಾರೆ. ಶೇ.60ರಷ್ಟು ಬಳಕೆದಾರರು ನಾಡಿನ ರಸ್ತೆಗಳು ಹಿತಕರ ಪ್ರಯಾಣಕ್ಕೆ ಯೋಗ್ಯ ಎಂದು ಹೇಳಿದ್ದಾರೆ. ಆದರೆ 2015ರಲ್ಲಿ ನಡೆಸಿದ ಸಮೀಕ್ಷೆ ವೇಳೆ ಶೇ.29ರಷ್ಟು ಮಂದಿ ಮಾತ್ರ ರಸ್ತೆಗಳ ಬಗ್ಗೆ ಒಳ್ಳೆ ಮಾತುಗಳನ್ನಾಡಿ, ಉಳಿದಂತೆ ತೆಗಳಿದರು.

ವಿಶ್ವ ಬ್ಯಾಂಕ್ ಸೂಚನೆಯಂತೆ ರಾಜ್ಯ ಸರ್ಕಾರ ನಡೆಸಿರುವ ರಸ್ತೆ ಬಳಕೆದಾರರು ಸಮೀಕ್ಷೆಯಲ್ಲಿ ರಾಜ್ಯದ ರಸ್ತೆಗಳು ಅತ್ಯುತ್ತಮ ಎನ್ನುವುದು ವ್ಯಕ್ತವಾಗಿದೆ. ಇದನ್ನು ರಾಜ್ಯ ಸರ್ಕಾರದ ಉನ್ನತ ಮಟ್ಟದ ಸಭೆಯಲ್ಲಿ ಅನುಮೋದಿಸಲಾಗಿದೆ. ವರದಿಯನ್ನು ಕೇಂದ್ರ ಸರ್ಕಾರ ಮತ್ತು ವಿಶ್ವ ಬ್ಯಾಂಕ್’ಗೆ ಸಲ್ಲಿಸಲಾಗುತ್ತದೆ.

ಕಿಣಿ ಲೋಕೋಪಯೋಗಿ ಇಲಾಖೆ ಕೆಶಿಪ್ ಯೋಜನೆ ಅಧೀಕ್ಷಕ ಎಂಜಿನಿಯರ್

ಆದರೆ ಈ ಬಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನದಲ್ಲಿ ಅಭಿವೃದ್ಧಿ ಪಡಿಸಿರುವ ಸುಮಾರು 30ಕ್ಕೂ ಹೆಚ್ಚಿನ ಹೆದ್ದಾರಿಗಳೂ ಸೇರಿದಂತೆ ಪ್ರಮುಖ ರಸ್ತೆಗಳು ಜನಮೆಚ್ಚುಗೆ ಗಳಿಸಿವೆ. ಇದರಲ್ಲಿ ಪ್ರತಿ ಕಿ.ಮೀ.ಗೆ ಐದು ಮಂದಿಯನ್ನು ಮಾತನಾಡಿಸಿ ರಸ್ತೆ ಸುಗಮ, ಗುಣಮಟ್ಟ ಕುರಿತು ಅಭಿಪ್ರಾಯ ಸಂಗ್ರಹಿಸಲಾಗಿದೆ. ಒಟ್ಟು ಸುಮಾರು 11,000 ಮಂದಿ ಅಭಿಪ್ರಾಯ ಸಂಗ್ರಹಿಸಿ ಮಾಹಿತಿ ಕಲೆ ಹಾಕಿ ಅವುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ ವರದಿ ಸಲ್ಲಿಸಲಾಗಿದೆ.

ಉ.ಕ. ರಸ್ತೆಗಳಿಗೆ ಹೆಚ್ಚು ಮೆಚ್ಚುಗೆ:  ನಿಯಮದಂತೆ ಸರ್ಕಾರ ಕಾಲಕಾಲಕ್ಕೆ ರಸ್ತೆ ಬಳಕೆದಾರರ ಅಭಿಪ್ರಾಯ ಮತ್ತು ತೃಪ್ತಿ ತಿಳಿಯಲು ಸಮೀಕ್ಷೆಗಳನ್ನು ನಡೆಸಬೇಕಿದ್ದು, ರಸ್ತೆ ಅಭಿವೃದ್ಧಿಗೆ ವಿಶ್ವ ಬ್ಯಾಂಕ್’ನಿಂದ ಸಾಲ ಪಡೆಯುವುದಕ್ಕೂ ಇಂಥ ಸಮೀಕ್ಷೆ ಅಗತ್ಯ. ಚಾಲ್ತಿಯಲ್ಲಿರುವ ಕೆಶಿಪ್ (ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ) ರಸ್ತೆಗಳು ಸೇರಿದಂತೆ ಎಲ್ಲಾ ಪ್ರಮುಖ ರಸ್ತೆಗಳ ಸ್ಥಿತಿಗತಿ, ಗುಣಮಟ್ಟದ ಬಗ್ಗೆ ಕಳೆದ ತಿಂಗಳು ಸಮೀಕ್ಷೆ ನಡೆಸಲಾಗಿದೆ.

ರಸ್ತೆ ಗುಣಮಟ್ಟದ ಬಗ್ಗೆ ಶೇ.41ರಷ್ಟು ಜನ ತೃಪ್ತಿ ವ್ಯಕ್ತಪಡಿಸಿದ್ದು, ಶೇ.51ರಷ್ಟು ಜನ ಸಂಚಾರ ಸೂಚನೆಗಳು ಮತ್ತು ಕಾಮಗಾರಿಗಳ ಬಳಿ ಮಾರ್ಗಸೂಚಿ ವ್ಯವಸ್ಥೆ ಬಗ್ಗೆ ಪ್ರಶಂಸಿದ್ದಾರೆ.

ಕಾಮಗಾರಿ ಕಾಲಮಿತಿ ಬಗ್ಗೆ ಶೇ.36ರಷ್ಟು ಜನ ಹಾಗೂ ಸಂಚಾರ ಅಪಘಾತಕ್ಕೆ ಸಿಗುವ ಸ್ಪಂದನೆ ಬಗ್ಗೆ ಶೇ.47ರಷ್ಟು ಬಳಕೆದಾರರು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಚಿಂತಾಮಣಿ, ಹೊಸಕೋಟೆ, ಹಾವೇರಿ, ಹಾನಗಲ್, ಚೌಡಾಪುರ-ಕಲಬುರ್ಗಿ ರಸ್ತೆಗಳ ಬಗ್ಗೆ ಶೇ.97ರಷ್ಟು ಮಂದಿ, ಗುಬ್ಬಿ-ಯಡಿಯೂರು, ಮುದ್ಗಲ್-ಗಂಗಾವತಿ ಹೆದ್ದಾರಿ ಬಗ್ಗೆ ಶೇ.95ರಷ್ಟು ಜನ ಖುಷಿ ತೋಡಿಕೊಂಡಿದ್ದಾರೆ.

ಏ್ರಪ್ರಿಲ್’ಗೆ ಎಲ್ಲಾ ರಸ್ತೆಗಳೂ ಸಿದ್ಧ: ರಾಜ್ಯ ಸರ್ಕಾರ ವಿಶ್ವ ಬ್ಯಾಂಕ್ ನೆರವಿನೊಂದಿಗೆ ರಸ್ತೆಗಳ ಅಭಿವೃದ್ಧಿ ಕೈಗೊಳ್ಳುತ್ತಿದ್ದು, ಕೆಶಿಪ್ ಪ್ರಥಮ ಹಂತದಲ್ಲಿ ಸರ್ಕಾರ ಸುಮಾರು 260 ಮಿಲಿಯನ್ ಡಾಲರ್ (ಸುಮಾರು 2260 ಕೋಟಿ ರು.) ಸಾಲ ಪಡೆದು ಸುಮಾರು 2,400 ಕಿ.ಮೀ.ರಸ್ತೆ ಅಭಿವೃದ್ಧಿ ಪಡಿಸಿದೆ.

ಇದೇ ರೀತಿ ಕೆಶಿಪ್ ಎರಡನೇ ಹಂತದಲ್ಲಿ ಮತ್ತೆ ₹1575 ಕೋಟಿ ಸಾಲ ಪಡೆದು ರಾಜ್ಯ ದ ಪಾಲು ₹700 ಕೋಟಿ ಸೇರಿಸಿ ಒಟ್ಟು ₹2250 ಕೋಟಿ ವೆಚ್ಚದಲ್ಲಿ 1200 ಕಿ.ಮೀ. ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಇದರಲ್ಲಿ ಸುಮಾರು ಶೇ.85ರಷ್ಟು ರಸ್ತೆಗಳ ಪ್ರಗತಿ ಸಾಧಿಸಲಾಗಿದೆ. ಮುಂದಿನ ವರ್ಷದ ಏ್ರಪ್ರಿಲ್ ವೇಳೆಗೆ ಈ ಯೋಜನೆ ಅಂತ್ಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

(ಸಾಂದರ್ಭಿಕ ಚಿತ್ರ)

Follow Us:
Download App:
  • android
  • ios