ಬೆಂಗಳೂರು (ಸೆ. 07): ಹಿಂದು ಸಂಘಟನೆಗಳ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯಲು ಆಡಳಿತಾರೂಢ ಬಿಜೆಪಿ ನಿರ್ಧರಿಸಿದೆ.

ಪಕ್ಷದ ಕಚೇರಿಯಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದ ನಂತರ ಪಕ್ಷದ ಇತರ ಮುಖಂಡರ ಒತ್ತಾಯದ ಮೇರೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಕರಣಗಳನ್ನು ವಾಪಸ್‌ ಪಡೆಯುವ ಬಗ್ಗೆ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.

ಕಳೆದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ನಡೆಸಿದ ಹಲವಾರು ಪ್ರತಿಭಟನೆ ವೇಳೆ ರಾಜ್ಯಾದ್ಯಂತ ನೂರಾರು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇದೀಗ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಆ ಪ್ರಕರಣಗಳನ್ನು ವಾಪಸ್‌ ಪಡೆಯುವ ಬಗ್ಗೆ ಒತ್ತಡ ಬಂದಿತ್ತು. ಹಲವು ಶಾಸಕರು ಹಾಗೂ ಮುಖಂಡರೂ ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದರು.

ಕೋರ್‌ ಕಮಿಟಿ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಸಚಿವರಾದ ಸಿ.ಟಿ.ರವಿ, ಕೆ.ಎಸ್‌.ಈಶ್ವರಪ್ಪ ಮೊದಲಾದವರು ಈ ವಿಷಯ ಪ್ರಸ್ತಾಪ ಮಾಡಿದ್ದರಿಂದ ಕೆಲಕಾಲ ಚರ್ಚೆ ನಡೆಯಿತು. ಆಗ ಕಾಂಗ್ರೆಸ್‌ ಸರ್ಕಾರ ಪ್ರಕರಣ ದಾಖಲಿಸಿದ್ದರ ಬಗ್ಗೆ ನಾವೆಲ್ಲ ಹೋರಾಟ ನಡೆಸಿದ್ದೆವು.

ಇದೀಗ ನಮ್ಮದೇ ಸರ್ಕಾರ ಆಡಳಿತದಲ್ಲಿರುವುದರಿಂದ ತಕ್ಷಣ ಪ್ರಕರಣಗಳನ್ನು ವಾಪಸ್‌ ಪಡೆಯುವ ಮೂಲಕ ಸಹಸ್ರಾರು ಕಾರ್ಯಕರ್ತರ ನೆರವಿಗೆ ಧಾವಿಸಬಹುದು. ಅವೆಲ್ಲವೂ ಗಂಭೀರ ಪ್ರಕರಣಗಳಲ್ಲ ಎಂದು ವಾದ ಮಂಡಿಸಿದರು. ಅಂತಿಮವಾಗಿ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ.

ಗಣೇಶೋತ್ಸವ ಮುಚ್ಚಳಿಕೆಗೆ ಆಕ್ಷೇಪ:

ಇದೇ ವೇಳೆ ಗಣೇಶೋತ್ಸವ ಮೆರವಣಿಗೆಗಾಗಿ ಸಂಘಟನೆಗಳು ಅಥವಾ ಆಯೋಜಕರು ಪೊಲೀಸರಿಗೆ ಮುಚ್ಚಳಿಕೆ (ಬಾಂಡ್‌) ಬರೆದುಕೊಡುವುದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಕೋರ್‌ ಕಮಿಟಿ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕಾಂಗ್ರೆಸ್‌ ಅಥವಾ ಜೆಡಿಎಸ್‌ ಸರ್ಕಾರಗಳು ಅಸ್ತಿತ್ವದಲ್ಲಿದ್ದಾಗ ಮುಚ್ಚಳಿಕೆ ಬರೆದುಕೊಡುವುದನ್ನು ಕಡ್ಡಾಯಗೊಳಿಸಿದ್ದರೆ ಸುಮ್ಮನಿರಬಹುದಿತ್ತು. ಆದರೆ, ಬಿಜೆಪಿ ಆಡಳಿತದಲ್ಲಿರುವಾಗ ಇಂಥ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಕಾನ್ಫರೆನ್ಸ್‌ ವೇಳೆ ಸೂಚನೆ ನೀಡಿದ್ದರು.

ಗಣೇಶೋತ್ಸವ ಮೆರವಣಿಗೆ ವಿಜೃಂಭಣೆಯಿಂದ ನಡೆಯಬೇಕು. ಗದ್ದಲ ಅಥವಾ ಗಲಾಟೆ ಆದಲ್ಲಿ ಪ್ರಕರಣ ದಾಖಲಾಗುತ್ತದೆ. ಹಾಗಿರುವಾಗ ಮುಚ್ಚಳಿಕೆ ಯಾಕೆ ಬೇಕು ಎಂದು ಕೆಲವು ಸಚಿವರೂ ಸೇರಿದಂತೆ ಮುಖಂಡರು ಖಾರವಾಗಿ ಪ್ರಶ್ನಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಪರಿಶೀಲಿಸಿ ನೋಡುವುದಾಗಿ ತಿಳಿಸಿದರು ಎಂದು ತಿಳಿದುಬಂದಿದೆ.