Asianet Suvarna News Asianet Suvarna News

ಸರ್ಕಾರಿ ಆಸ್ಪತ್ರೆಗಳಲ್ಲಿ ಈಗ ಔಷಧ ಸಿಗುತ್ತಿಲ್ಲ; ರೋಗಿಗಳ ಪರದಾಟ ಕೇಳುವವರ್ಯಾರು?

ಆರೋಗ್ಯ ಇಲಾಖೆಯು 2018-19ನೇ ಸಾಲಿನ ಔಷಧಗಳ ಖರೀದಿಗೆ ಕರೆದಿದ್ದ ಸುಮಾರು 300 ಕೋಟಿ ರು. ಮೊತ್ತದ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಬಹಿರಂಗವಾಗಿದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಬಿಡ್‌ದಾರರು ಸಲ್ಲಿಕೆ ಮಾಡಿರುವ ರಹಸ್ಯ ದಾಖಲೆಗಳು ಅಧಿಕಾರಿಗಳಿಂದಲೇ ಅಕ್ರಮವಾಗಿ ಸೋರಿಕೆಯಾಗಿವೆ. 

state govt hospitals facing scarcity of medicines
Author
Bengaluru, First Published Aug 31, 2019, 7:58 AM IST

ಬೆಂಗಳೂರು (ಆ. 31):  ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ಔಷಧ ಪೂರೈಸುವ ಕರ್ನಾಟಕ ಸ್ಟೇಟ್‌ ಡ್ರಗ್ಸ್‌ ಲಾಜಿಸ್ಟಿಕ್ಸ್‌ ಅಂಡ್‌ ವೇರ್‌ ಹೌಸಿಂಗ್‌ ಸೊಸೈಟಿಯ (ಕೆಡಿಎಲ್‌ಡಬ್ಲ್ಯುಎಸ್‌) ಉಗ್ರಾಣಗಳಲ್ಲಿ ಔಷಧಿಗಳ ಕೊರತೆ ಎದುರಾಗಿದೆ. ಹೀಗಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಕೆಲವು ಅಗತ್ಯ ಮತ್ತು ಜೀವರಕ್ಷಕ ಔಷಧಿಗಳು ಲಭ್ಯವಾಗದೆ ಬಡ ರೋಗಿಗಳು ಪರದಾಡುವಂತಾಗಿದೆ.

ಕೆಡಿಎಲ್‌ಡಬ್ಲ್ಯುಡಿಎಸ್‌ ರಾಜ್ಯದಲ್ಲಿ ಒಟ್ಟು 26 ಉಗ್ರಾಣ ಹೊಂದಿದ್ದು, ಆಸ್ಪತ್ರೆಗಳಿಗೆ ಅಗತ್ಯವಿರುವ ಔಷಧಗಳ ಖರೀದಿ, ದಾಸ್ತಾನು ಹಾಗೂ ಪೂರೈಕೆ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಔಷಧ ಖರೀದಿ ಟೆಂಡರ್‌ನಲ್ಲಿ ಆಗುತ್ತಿರುವ ನ್ಯೂನತೆ ಹಾಗೂ ಭ್ರಷ್ಟಾಚಾರ, ಔಷಧ ಪೂರೈಸಿರುವ ಕಂಪನಿಗಳಿಗೆ ಸೂಕ್ತ ಸಮಯದಲ್ಲಿ ಹಣ ನೀಡದಿರುವುದು ಸೇರಿದಂತೆ ಹಲವು ಕಾರಣಗಳಿಗೆ ಟೆಂಡರ್‌ನಲ್ಲಿ ಭಾಗವಹಿಸಲು ಕಂಪನಿಗಳು ಹಿಂದೇಟು ಹಾಕುತ್ತಿವೆ. ಇದರ ಪರಿಣಾಮವಾಗಿ ಔಷಧ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿದೆ.

ಆರೋಗ್ಯ ಇಲಾಖೆಯು 2018-19ನೇ ಸಾಲಿನ ಔಷಧಗಳ ಖರೀದಿಗೆ ಕರೆದಿದ್ದ ಸುಮಾರು 300 ಕೋಟಿ ರು. ಮೊತ್ತದ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಬಹಿರಂಗವಾಗಿದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಬಿಡ್‌ದಾರರು ಸಲ್ಲಿಕೆ ಮಾಡಿರುವ ರಹಸ್ಯ ದಾಖಲೆಗಳು ಅಧಿಕಾರಿಗಳಿಂದಲೇ ಅಕ್ರಮವಾಗಿ ಸೋರಿಕೆಯಾಗಿವೆ.

ಈ ಬಗ್ಗೆ ‘ಕನ್ನಡಪ್ರಭ’ ವಿಶೇಷ ವರದಿ ಮಾಡಿತ್ತು. ಹೀಗಾಗಿ ಆರೋಗ್ಯ ಇಲಾಖೆಯು ಟೆಂಡರ್‌ ಅನ್ನು ತಡೆ ಹಿಡಿದು, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಿತ್ತು. ಬಳಿಕ ಔಷಧ ಖರೀದಿಗೆ ಸೂಕ್ತ ಪ್ರಕ್ರಿಯೆ ನಡೆಸದ ಪರಿಣಾಮ ಸರ್ಕಾರಿ, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ವೈದ್ಯಕೀಯ ಮಹಾವಿಶ್ವವಿದ್ಯಾಲಯ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಕಾಲದಲ್ಲಿ ಔಷಧ ಪೂರೈಸಲು ಸಾಧ್ಯವಾಗುತ್ತಿಲ್ಲ.

ನಾಯಿ, ಹಾವು ಕಡಿತ ಔಷಧಕ್ಕೆ ಬರ:

ಪ್ರಸ್ತುತ ಕೆಲವು ಕಂಪನಿಗಳು ಸೊಸೈಟಿಗೆ ಔಷಧ ಪೂರೈಕೆ ಮಾಡುತ್ತಿವೆ. ಕಂಪನಿಗಳು ಪೂರೈಸಿರುವ ಔಷಧಗಳ ಗುಣಮಟ್ಟಪರೀಕ್ಷೆ ನಡೆಸಿ ಹಸಿರು, ಹಳದಿ, ಕೆಂಪು ಎಂಬ ಭಾಗಗಳಾಗಿ ವಿಂಗಡಿಸಲಾಗುತ್ತದೆ. ಕೆಂಪು ಪಟ್ಟಿಗೆ ಸೇರುವ ಔಷಧಗಳು ಬಳಕೆಗೆ ಯೋಗ್ಯವಾದದ್ದಲ್ಲ. ಪ್ರಸ್ತುತ ಸೊಸೈಟಿಯಲ್ಲಿ ಈ ವರ್ಗದ ಔಷಧಗಳೇ 40ಕ್ಕೂ ಹೆಚ್ಚಿವೆ. ನಾಯಿ ಕಡಿತ, ಹಾವು ಕಡಿತದಂತಹ ಜೀವ ರಕ್ಷಕ ಔಷಧಗಳ ಕೊರತೆ ತುಂಬಾ ಇದೆ. ಇತ್ತೀಚೆಗೆ ಕೆಲವು ತೀವ್ರ ಕಾಯಿಲೆಗಳಿಗೆ ಪೂರಕವಾದ ಔಷಧಗಳೂ ಸಿಗುತ್ತಿಲ್ಲ ಎಂದು ಸೊಸೈಟಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ರಾಯಚೂರು, ಚಾಮರಾಜನಗರ, ಕೋಲಾರ, ಕಲಬುರಗಿ, ಯಾದಗಿರಿ ಸೇರಿದಂತೆ ‘ಕನ್ನಡಪ್ರಭ’ ಸಂಪರ್ಕಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರವೇ ಸುಮಾರು ಏಳು ಜಿಲ್ಲೆಗಳಲ್ಲಿನ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಸಿರಿಂಜ್‌ ಮತ್ತು ಪ್ಯಾರಸಿಟಮಲ್‌, ಡಿಕ್ಲೋಫೆನಾಕ್‌ ಸೇರಿದಂತೆ ಅಗತ್ಯ ಮಾತ್ರೆ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ.

ಇದಲ್ಲದೆ ರಾಜ್ಯಕ್ಕೆ ಆಮದಾಗುತ್ತಿರುವ ಕೆಲ ಔಷಧಿಗಳ ಗುಣಮಟ್ಟದಲ್ಲಿ ಲೋಪಗಳಿವೆ. ಔಷಧ ನಿಯಂತ್ರಕರು (ಡ್ರಗ್‌ ಕಂಟ್ರೋಲರ್‌) ಸೂಕ್ತವಾಗಿ ಕೆಲಸ ಮಾಡುತ್ತಿಲ್ಲ. ಇತ್ತೀಚೆಗಷ್ಟೇ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಡ್ರಗ್‌ ಕಂಟ್ರೋಲರ್‌ ಅವರು ಪ್ರಮಾಣೀಕರಿಸಿದ ಔಷಧದಿಂದಲೇ 24 ಮಂದಿ ಕಣ್ಣಿಗೆ ಹಾನಿಯಾಗಿತ್ತು. ಇದರಲ್ಲಿ ಐದು ಮಂದಿ ಶಾಶ್ವತ ಅಂಧತ್ವಕ್ಕೆ ಗುರಿಯಾಗುವಂತಾಯಿತು. ಹೀಗೆ ಆರೋಗ್ಯ ಇಲಾಖೆ, ಸೊಸೈಟಿ ಹಾಗೂ ಡ್ರಗ್‌ ಕಂಟ್ರೋಲರ್‌ ಅವರ ನಿರ್ಲಕ್ಷ್ಯದಿಂದ ಔಷಧ ಪೂರೈಕೆಯಲ್ಲಿ ವಿಳಂಬವಾಗುತ್ತಿದೆ.

ನೆರೆ ಸಂತ್ರಸ್ತರಿಗಾಗಿ ತುರ್ತು ಟೆಂಡರ್‌:

ನೆರೆ ಸಂತ್ರಸ್ತರಿಗೆ ಪೂರೈಸಲು ಸಹ ಔಷಧಗಳ ಕೊರತೆ ಇತ್ತು. ಆದರೆ, ಆರೋಗ್ಯ ಇಲಾಖೆಯು ಟೆಂಡರ್‌ ಪ್ರಕ್ರಿಯೆ ಇಲ್ಲದೆ ನೇರವಾಗಿ ಔಷಧ ಖರೀದಿಸಲು ಅವಕಾಶ ನೀಡಿತ್ತು. ಹೀಗಾಗಿ 90 ಲಕ್ಷ ರು.ವರೆಗಿನ ಔಷಧಗಳನ್ನು ನೇರವಾಗಿ ಖರೀದಿಸಿ ಪೂರೈಸಲಾಯಿತು. ಇಲ್ಲದಿದ್ದರೆ ನೆರೆ ಸಂತ್ರಸ್ತರಿಗೂ ಸಹ ಸಮಸ್ಯೆ ಉಂಟಾಗುತ್ತಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ.

ಖಾಸಗಿ ಮಳಿಗೆಗಳತ್ತ ಬಡವರು:

ಬಡವರಿಗೆ ಕೈಗೆಟಕುವ ದರದಲ್ಲಿ ಔಷಧ ಪೂರೈಸುವ ಸಲುವಾಗಿ ಪ್ರಾರಂಭವಾಗಿರುವ ಪ್ರಧಾನಮಂತ್ರಿ ಜನೌಷಧಾಲಯ, ಜೆನರಿಕ್‌ ಮಳಿಗೆಗಳಲ್ಲೂ ಔಷಧ ಕೊರತೆ ಉಂಟಾಗಿದೆ. ಹೀಗಾಗಿ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಔಷಧಿ ಮಳಿಗೆಗಳಿಗೆ ಹೋಗಿ ಔಷಧ ಖರೀದಿಸುವಂತಾಗಿದೆ. ತೀರಾ ಅಗತ್ಯ ಎನಿಸಿಕೊಂಡ ಗುಳಿಗೆಗಳೂ ಈ ಔಷಧಾಲಯಗಳಲ್ಲಿ ಸಿಗದೆ ಪರದಾಡುವಂತಾಗಿದೆ.

ಔಷಧಿ ಕೊರತೆಗೆ ಕಾರಣಗಳೇನು?

ಟೆಂಡರ್‌ನಲ್ಲಿ ಉಂಟಾಗಿರುವ ತಾಂತ್ರಿಕ ದೋಷ, ಔಷಧಿ ಪೂರೈಸುವ ಟೆಂಡರ್‌ದಾರರಿಗೆ ಹಣ ಪಾವತಿ ವಿಳಂಬ, ಕಳಪೆ ಗುಣಮಟ್ಟಔಷಧಿಗಳ ಪೂರೈಕೆ ಹೆಚ್ಚಳ, ಜಿಲ್ಲಾಸ್ಪತ್ರೆಗಳ ಬೇಡಿಕೆಗೆ ಅನುಗುಣವಾಗಿ ಔಷಧಿಗಳು ಅಲಭ್ಯವಾಗಿರುವುದರಿಂದ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಉಂಟಾಗಿದೆ.

ಪರೀಕ್ಷೆಗೆ ಒಳಪಡಿಸದೆ ಔಷಧ ಮಾರಾಟ ಆರೋಪ:

ಕಳೆದ 4 ವರ್ಷದಲ್ಲಿ 17,744 ಬ್ಯಾಚ್‌ಗಳಲ್ಲಿ ಲಕ್ಷಾಂತರ ಯೂನಿಟ್‌ ಔಷಧಗಳನ್ನು ಖರೀದಿಸಲಾಗಿದೆ. ಆದರೆ ಇವುಗಳ ಮಾದರಿಗಳನ್ನು ಟೆಸ್ಟಿಂಗ್‌ ಕೊಟ್ಟಿರುವ ಪ್ರಮಾಣ ಮಾತ್ರ ತೀರಾ ಕಡಿಮೆಯಿದೆ. ವಾರ್ಷಿಕವಾಗಿ ವಿವಿಧ ಔಷಧ ಕಂಪನಿಗಳು ಸುಮಾರು 300 ರಿಂದ 400 ರೀತಿಯ ಔಷಧಗಳನ್ನು ಸೊಸೈಟಿಗೆ ಪೂರೈಕೆ ಮಾಡುತ್ತವೆ. ಆದರೆ ಜನರ ಆರೋಗ್ಯದ ದೃಷ್ಟಿಯಿಂದ ಸೊಸೈಟಿಯು ಕಂಪನಿಗಳಿಂದ ಖರೀದಿಸುವ ಔಷಧಗಳ ಪೈಕಿ ಶೇಕಡ 85 ರಿಂದ 90ರಷ್ಟುಬ್ಯಾಚ್‌ಗಳಲ್ಲಿ ಬರುವ ಮಾದರಿ ಔಷಧಗಳ ಸ್ಯಾಂಪಲ್‌ಅನ್ನು ನೋಂದಾಯಿತ ಲ್ಯಾಬ್‌ನಲ್ಲಿ ಪರೀಕ್ಷೆಗೆ ಕೊಡಬೇಕು. ಆದರೆ, ಈವೆಗೆ 11,976 ಮಾದರಿಗಳ ಪರೀಕ್ಷೆ ಬಗ್ಗೆ ಮಾತ್ರ ದಾಖಲೆಗಳಿವೆ.

- ಶ್ರೀಕಾಂತ್ ಎನ್ ಗೌಡಸಂದ್ರ 

 

Follow Us:
Download App:
  • android
  • ios