ಆಸ್ಟ್ರೇಲಿಯಾದ ವ್ಯಾಪಾರಿಯೊಬ್ಬರು ತಮ್ಮ 20 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ದಾನಗೈದಿದ್ದಾರೆ.

ಕ್ಯಾನ್‌ಬೆರಾ[ಡಿ.16]: ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ವ್ಯಾಪಾರ ನಡೆಸುತ್ತಿದ್ದ ಸ್ಟ್ಯಾನ್ ಪೆರಾನ್ ತಮ್ಮ 2.8 ಶತಕೋಟಿ ಆಸ್ತಿಯನ್ನು ದಾನ ಮಾಡಿದ್ದಾರೆ. ಪೆರಾನ್ ನವೆಂಬರ್ ತಿಂಗಳಿನಲ್ಲಿ ತಮ್ಮ 96 ವರ್ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸುದ್ದಿ ಸಂಸ್ಥೆ 'ಸಿನ್ಹುವಾ' ನೀಡಿರುವ ವರದಿಯನ್ವಯ ಗುರುವಾರದಂದು ಸ್ಟ್ಯಾನ್ ಅಂತಿಮ ಸಂಸ್ಕಾರ ನಡೆಸಲಾಗಿದ್ದು, ಕುಟುಂಬಸ್ಥರು ಹಾಗೂ ಮಿತ್ರರು ಪಾಲ್ಗೊಂಡಿದ್ದರೆನ್ನಲಾಗಿದೆ. ತಮ್ಮ ಸಾವಿಗೂ ಮುನ್ನ ಇವರು ಲಿಖಿತ ಹೇಳಿಕೆ ನೀಡುವ ಮೂಲಕ ತನ್ನ ಹೆಚ್ಚಿನ ಆಸ್ತಿಯನ್ನು ತಾವು ಆರಂಭಿಸಿದ ಸ್ಟ್ಯಾನ್ ಪೆರಾನ್ ಚಾರಿಟಿ ಸಂಸ್ಥೆಗೆ ನೀಡಬೇಕೆಂದು ತಿಳಿಸಿದ್ದಾರೆ.

ಈ ಕುರಿತಾಗಿ ಬರೆದಿರುವ ಸ್ಟ್ಯಾನ್ 'ನಾನು ನನ್ನ ಬಾಲ್ಯದಲ್ಲಿ ಕಂಡಿದ್ದ ಕನಸನ್ನು ಸಾಕಾರಗೊಳಿಸಿದ್ದೇನೆ. ನನ್ನ ಕುಟುಂಬಕ್ಕಾಗಿಯೂ ಬಹಳಷ್ಟು ಮಾಡಿದ್ದೇನೆ. ಆದರೆ ನಾನು ಸಂಪಾದಿಸಿದ ಹಣದಿಂದ ಬಡವರ ಹಾಗೂ ವಂಚಿತರ ಜೀವನವನ್ನು ಬದಲಾಯಿಸಲು ಯಶಸ್ವಿಯಾಗಿದ್ದೇನೆ ಎಂಬ ವಿಚಾರದಿಂದ ನನಗೆ ಬಹಳಷ್ಟು ಖುಷಿಯಾಗುತ್ತಿದೆ' ಎಂದಿದ್ದಾರೆ.

ಸ್ಟ್ಯಾನ್ ಆರಂಭಿಸಿದ ಚಾರಿಟೇಬಲ್ ಸಂಸ್ಥೆ ಆಸ್ಟ್ರೇಲಿಯಾದ ಮಕ್ಕಳ ಆರೋಗ್ಯದ ವಿಚಾರವಾಗಿ ಕಾರ್ಯ ನಿರ್ವಹಿಸುತ್ತದೆ. ಆದರೀಗ ಸ್ಟ್ಯಾನ್ ನಿಧನದ ಬಳಿಕ ಈ ಜವಾಬ್ದಾರಿ ಅವರ ಮಗಳ ಹೆಗಲಿಗೇರಿದೆ. ಸ್ಟ್ಯಾನ್ ತಮ್ಮ ಬಾಲ್ಯವನ್ನು ಬಡತನದಲ್ಲೇ ಕಳೆದಿದ್ದರು. ಆದರೆ ನಿಧಾನವಾಗಿ ಅವರು ತಮ್ಮ ಕಠಿಣ ಪರಿಶ್ರಮದಿಂದ ದೇಶದಾದ್ಯಂತ ತಮ್ಮ ವ್ಯಾಪಾರ ವಹಿವಾಟು ಹಬ್ಬಿಸುವಲ್ಲಿ ಯಶಸ್ವಿಯಾಗಿದ್ದರು.