ಪರೀಕ್ಷೆ ಬರೆಯುತ್ತಿದ್ದ ವೇಳೆ ಮೂರ್ಛೆ ಹೋದ ವಿದ್ಯಾರ್ಥಿನಿ| ಪರೀಕ್ಷಾ ಹಾಲ್‌ನಲ್ಲೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

ಇಂಡಿ[ಏ.03]: ಎಸ್‌ಎಸ್‌ಎಲ್‌ಸಿ ವಿಜ್ಞಾನ ಪರೀಕ್ಷೆ ಬರೆಯುತ್ತಿದ್ದ ವೇಳೆ ಮೂರ್ಛೆ ಬಿದ್ದು, ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಧಾರುಣ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಸರ್ಕಾರ ಆದರ್ಶ ವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ನಡೆದಿದೆ.

ಇಂಡಿಯ ಸಂಜೀವಿನಿ ರಾಮಜಿ ಜಾಧವ (16) ಮೃತ ವಿದ್ಯಾರ್ಥಿನಿ.

ಮಂಗಳವಾರ ವಿಜ್ಞಾನ ಪರೀಕ್ಷೆ ಬರೆಯಲು ಎಂದಿನಂತೆ ಸಂಜೀವಿನಿ ರಾಮಜಿ, ಆದರ್ಶ ವಿದ್ಯಾಲಯದ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಳು. 9.30ಕ್ಕೆ ಪರೀಕ್ಷೆ ಆರಂಭವಾಗಿದ್ದು, 10.30ರ ವೇಳೆ ಉತ್ತರ ಬರೆಯುವಾಗ ಡೆಸ್ಕ್‌ ಮೇಲೆಯೇ ಮೂರ್ಛೆ ಹೋಗಿದ್ದಾಳೆ.

ಪರೀಕ್ಷಾ ಕೇಂದ್ರದಲ್ಲಿಯೇ ಇದ್ದ ಬಿಇಒ ಎಸ್‌.ಬಿ.ಬಿಂಗೇರಿ ಕೂಡಲೇ ವಿದ್ಯಾರ್ಥಿನಿಯನ್ನು ತಮ್ಮ ವಾಹನದಲ್ಲಿಯೇ ಪರೀಕ್ಷಾ ಸಿಬ್ಬಂದಿಯೊಂದಿಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಚಿಕಿತ್ಸೆ ಫಲಿಸದೆ ವಿದ್ಯಾರ್ಥಿನಿ ಅಸುನೀಗಿದ್ದಾಳೆ.

ಪೋಷಕರ ಆರೋಪ:

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಉಪಕರಣಗಳ ಕೊರತೆಯಿಂದ ವಿದ್ಯಾರ್ಥಿನಿಗೆ ಸರಿಯಾಗಿ ಚಿಕಿತ್ಸೆ ನೀಡಲು ವೈದ್ಯರಿಂದ ಸಾಧ್ಯವಾಗಿಲ್ಲ. ವಿಜಯಪುರಕ್ಕೆ ರವಾನಿಸಲು ಇಂಡಿ ಸರ್ಕಾರಿ ಆಸ್ಪತ್ರೆಯಿಂದ ಸೂಕ್ತ ಸಮಯಕ್ಕೆ ವ್ಯವಸ್ಥೆ ಮಾಡಲಿಲ್ಲ, ಒಂದು ಗಂಟೆಗಳ ಕಾಲ ಸತಾಯಿಸಿದರು ಎಂದು ಮೃತ ವಿದ್ಯಾರ್ಥಿನಿಯ ಪಾಲಕರು ಆರೋಪಿಸಿದ್ದಾರೆ.