ಬೆಂಗಳೂರು[ಮಾ.21]: ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ರಾಜ್ಯಾದ್ಯಂತ ಗುರುವಾರ (ಮಾ.21)ದಿಂದ ಆರಂಭವಾಗಲಿದ್ದು, ಈ ಬಾರಿ 8,41,649 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

ರಾಜ್ಯದ 2847 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಈ ಪೈಕಿ ಸರ್ಕಾರಿ 1,140 ಮತ್ತು ಅನುದಾನಿತ 1,124, ಖಾಸಗಿ 583 ಕೇಂದ್ರಗಳಿವೆ. ಇದರಲ್ಲಿ 46 ಸೂಕ್ಷ್ಮ ಪರೀಕ್ಷಾ ಕೇಂದ್ರ, 7 ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಿವೆ. ರಾಜ್ಯದ ಒಟ್ಟು 14,454 ಶಾಲೆಗಳಿಂದ 8,41,649 ವಿದ್ಯಾರ್ಥಿಗಳಲ್ಲಿ, 4651 ವಿಕಲಚೇತನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 3578 ವಿದ್ಯಾರ್ಥಿಗಳ ಹೆಚ್ಚಳವಾಗಿದೆ ಎಂದು ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ. ರಾಜ್ಯಾದ್ಯಂತ ಏಕಕಾಲದಲ್ಲಿ ಗುರುವಾರ ಬೆಳಗ್ಗೆ 9.30ಕ್ಕೆ ರಿಂದ ಪರೀಕ್ಷೆ ಆರಂಭಗೊಳ್ಳಲಿವೆ. ಈ ಬಾರಿ ಕನಿಷ್ಠ ಹಾಜರಾತಿ ಕೊರತೆಯಿಂದ 10,572 ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಜರಾಗಲು ಮಂಡಳಿಯು ಅವಕಾಶ ನೀಡಿಲ್ಲ. ಏ.4ರವರೆಗೆ ಪರೀಕ್ಷೆಗಳು ನಡೆಯಲಿವೆ.

ಶಿಕ್ಷಣ ಇಲಾಖೆಯು ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಪೊಲೀಸ್‌ ಇಲಾಖೆ, ವಾಣಿಜ್ಯತೆರಿಗೆ, ಖಜಾನೆ ಇಲಾಖೆಗಳ ಸಹಕಾರ ಕೋರಿದೆ. ಎಲ್ಲ ಖಜಾನೆಗಳಲ್ಲಿ ಪರೀಕ್ಷಾ ಗೌಪ್ಯ ಸಾಮಗ್ರಿಗಳನ್ನು ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಅಲ್ಲದೇ ಸೂಕ್ತ ಬಂದೋಬಸ್‌್ತ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ನಡೆಯಬಹುದಾದ ಅಕ್ರಮಗಳನ್ನು ತಡೆಗಟ್ಟುವುದಕ್ಕಾಗಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಗುರುತಿನ ಚೀಟಿ ನೀಡಲಾಗಿದೆ.

ವಿದ್ಯಾರ್ಥಿಗಳು ಸ್ಮಾರ್ಟ್‌ ವಾಚ್‌ ಕಟ್ಟಿಕೊಂಡು ಪರೀಕ್ಷಾ ಕೇಂದ್ರಕ್ಕೆ ಬರಲು ನಿಷೇಧವಿದ್ದು, ಅನಲಾಗ್‌ ವಾಚ್‌ರ್‍ ಕಟ್ಟಿಕೊಳ್ಳಬಹುದು. ಪರೀಕ್ಷಾ ಕೇಂದ್ರಗಳ 200 ಮೀಟರ್‌ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಿ ಜೆರಾಕ್ಸ್‌ ಅಂಗಡಿಗಳನ್ನು ಮುಚ್ಚಿಸಲು ಕ್ರಮವಹಿಸಿದೆ. ಪರೀಕ್ಷೆ ಬರೆಯುವ ಬೆಂಗಳೂರಿನ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಿದೆ.

+++++

ವಿದ್ಯಾರ್ಥಿಗಳೇ ಭಯ ಬೇಡ, ಆಲ್‌ ದಿ ಬೆಸ್ಟ್‌!

ಜೀವನದ ಬಹುಮುಖ್ಯ ಪರೀಕ್ಷೆಯಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆ ಬೇಕಿರುವುದು ಆತ್ಮವಿಶ್ವಾಸ. ಯಾವ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಡಿ. ಗೊಂದಲ, ಭಯಪಡಬೇಕಿಲ್ಲ. ನಿರಾತಂಕವಾಗಿ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆದು ಮುಗಿಸಿ. ಉಳಿದ ಪ್ರಶ್ನೆಗಳಿಗೆ ಕೊನೆಯಲ್ಲಿ ನೆನಪಿಸಿಕೊಂಡು ಉತ್ತರ ಬರೆಯಲು ಪ್ರಯತ್ನಿಸಿ. ತಾಳ್ಮೆಯಿಂದ ಪರೀಕ್ಷೆ ಎದುರಿಸಿ.

ಪರೀಕ್ಷೆಗೆ ಹಾಜರಾಗುವ ಮುನ್ನ ಈ ಕೆಲ ಎಚ್ಚರಿಕೆಗಳನ್ನು ವಹಿಸಿ:

* ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಪ್ರವೇಶಪತ್ರ, ಪೆನ್ನು ಮುಂತಾದ ಅಗತ್ಯ ವಸ್ತುಗಳನ್ನು ಕೊಂಡೊಯ್ಯುವುದನ್ನು ಮರೆಯಬೇಡಿ

* ಮೊಬೈಲ್‌, ಸ್ಮಾರ್ಟ್‌ ವಾಚ್‌ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಕೊಂಡೊಯ್ಯುವಂತಿಲ್ಲ

* ಪರೀಕ್ಷಾ ಕೇಂದ್ರಗಳಿಗೆ ಅರ್ಧಗಂಟೆ ಮೊದಲು ಹಾಜರಾಗಿ ನಿಮ್ಮ ಹಾಲ್‌ಟಿಕೆಟ್‌ ಸಂಖ್ಯೆ ಇರುವ ಕೊಠಡಿ ಹುಡುಕಿಕೊಳ್ಳಿ

* ಪ್ರಶ್ನೆ ಪತ್ರಿಕೆ ಕೈ ಸೇರಿದ ಬಳಿಕ ಕೆಲ ನಿಮಿಷ ಎಲ್ಲ ಪ್ರಶ್ನೆಗಳನ್ನೂ ಓದಿಕೊಳ್ಳಿ

* ಯಾವುದೇ ಪ್ರಶ್ನೆಯನ್ನೂ ಬಿಡದೆ ಗೊತ್ತಿರುವಷ್ಟುಉತ್ತರವನ್ನೇ ಬರೆಯಿರಿ

* ಉತ್ತರ ಮರೆತಿರಬಹುದಾದ ಪ್ರಶ್ನೆಗಳಿಗೆ ಕೊನೆಯಲ್ಲಿ ನಿಧಾನವಾಗಿ ನೆನಪಿಸಿಕೊಂಡು ಉತ್ತರಿಸಲು ಪ್ರಯತ್ನಿಸಿ