ಎಲ್ಲೆಡೆ ಬಿರುಗಾಳಿಯನ್ನೇ ಎಬ್ಬಿಸಿರುವ ಮೀ ಟೂ ಅಭಿಯಾನ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ರೀತಿಯ ಚರ್ಚೆಯನ್ನೇ ಹುಟ್ಟು ಹಾಕಿದೆ. ಶ್ರುತಿ - ಸರ್ಜಾ ನಡುವೆ ಇದೀಗ ಸಂಧಾನ ನಡೆಸಲು ಮುಂದಾಗಿದ್ದು ಅಂಬರೀಶ್ ಮಧ್ಯಸ್ಥಿಕೆ ವಹಿಸಲಿದ್ದಾರೆ. 

ಬೆಂಗಳೂರು : ಅರ್ಜುನ್‌ ಸರ್ಜಾ ಮೇಲೆ ಶ್ರುತಿ ಹರಿಹರನ್‌ ಮಾಡಿರುವ ‘ಮೀ ಟೂ’ ಆರೋಪ ಕುರಿತ ಚರ್ಚೆ ನಡೆಸಲು ಮತ್ತು ಸಂಧಾನ ನಡೆಸುವ ಉದ್ದೇಶದಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಧಾನ ಸಮಿತಿ ಸಭೆ ಕರೆದಿದೆ. ಗುರುವಾರ ಸಂಧಾನ ಸಮಿತಿ ಸಭೆ ನಡೆಯಲಿದ್ದು, ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್‌ ಸಭೆಯಲ್ಲಿ ಭಾಗಹಿಸುತ್ತಿದ್ದಾರೆ.

ಗುರುವಾರ ಸಂಜೆ 4 ಗಂಟೆಗೆ ಸಭೆ ನಿಗದಿ ಆಗಿದೆ. ಬುಧವಾರವೇ ನಟ ಅರ್ಜುನ್‌ ಸರ್ಜಾ ಮತ್ತು ಅವರ ಮೇಲೆ ಮೀಟೂ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್‌ ಅವರಿಗೆ ಸಭೆಗೆ ಬರುವಂತೆ ವಾಣಿಜ್ಯ ಮಂಡಳಿಯಿದ ಬುಲಾವ್‌ ಹೋಗಿದೆ. ಪತ್ರದ ಜತೆಗೆ ಫೋನ್‌ ಕರೆಯ ಮೂಲಕವೂ ಸಭೆಗೆ ಬರುವಂತೆ ಸೂಚಿಸಿರುವುದಾಗಿ ವಾಣಿಜ್ಯ ಮಂಡಳಿ ಮೂಲಗಳು ತಿಳಿಸಿವೆ. ಅರ್ಜುನ್‌ ಸರ್ಜಾ ಮತ್ತು ಶ್ರುತಿ ಹರಿಹರನ್‌ ಈ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ವಾಣಿಜ್ಯ ಮಂಡಳಿ ಮೂಲಗಳು ತಿಳಿಸಿವೆ.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಹಿರಿಯ ನಟ ಅಂಬರೀಶ್‌ ನೇತೃತ್ವದಲ್ಲಿ ನಡೆಯುವ ಈ ಸಭೆಗೆ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ.ರಾ. ಗೋವಿಂದು, ಕೆ.ವಿ. ಚಂದ್ರಶೇಖರ್‌, ಹಿರಿಯ ನಟಿ ಬಿ. ಸರೋಜಾ ದೇವಿ, ಸುಧಾರಾಣಿ, ಪ್ರೇಮಾ ಸೇರಿದಂತೆ ಚಿತ್ರೋದ್ಯಮದ ಅನೇಕ ಹಿರಿಯ ನಟ-ನಟಿಯರು, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಹಾಗೂ ಕಲಾವಿದರ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಶ್ರುತಿ ಹರಿಹರನ್‌ ಮತ್ತು ಅರ್ಜುನ್‌ ಸರ್ಜಾ ಇಬ್ಬರಿಗೂ ಕರೆ ಮಾಡಿ ತಿಳಿಸಿದ್ದೇವೆ. ಇಬ್ಬರೂ ಸಂಧಾನ ಸಮಿತಿ ಸಭೆಗೆ ಬರಲು ಒಪ್ಪಿದ್ದಾರೆ.

- ಚಿನ್ನೇಗೌಡ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ