ಮಂಡ್ಯ :  ಚನ್ನಪಟ್ಟಣ ಜೆಡಿಎಸ್ ಮುಖಂಡರ ವೈಮನಸ್ಸು ಬಹಿರಂಗವಾಗುತ್ತಲೇ ಇತ್ತ ಮಂಡ್ಯ ಜೆಡಿಎಸ್ ಮುಖಂಡರ ನಡುವಿನ ಭಿನ್ನಮತದ ವಿಚಾರ ಹೊರಬಿದ್ದಿದೆ.  ಮೇಲಕೋಟೆ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ವಿರುದ್ಧ ಶ್ರೀರಂಗಪಟ್ಟಣ ಶಾಸಕ ರವೀಂದ್ರ  ಶ್ರೀಕಂಠಯ್ಯ ಅಸಮಾಧಾನಗೊಂಡಿದ್ದಾರೆ. 

ಶಾಸಕ ಪುಟ್ಟರಾಜು ಅವರ ಏಕಪಕ್ಷೀಯ ನಿರ್ಧಾರ ಹಾಗೂ ಕಡೆಗಣನೆ ಬಗ್ಗೆ ಅಸಮಾಧಾನ ಎದುರಾಗಿದ್ದು, ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪುಟ್ಟರಾಜು ಏಕ ಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುತ್ತಾರೆಂದು ಆರೋಪ ಮಾಡಲಾಗಿದೆ.  

ಡಿಸ್ನಿಲ್ಯಾಂಡ್ ಮಾದರಿ ಕೆಆರ್ ಎಸ್ ಅಭಿವೃದ್ಧಿ ವಿಚಾರದಲ್ಲಿ ಸ್ಥಳೀಯ ಶಾಸಕರನ್ನು ಪರಿಗಣಿಸುತ್ತಿಲ್ಲ.  ಕೆ ಆರ್ ಎಸ್ ಅಭಿವೃದ್ಧಿ ವಿಚಾರದಲ್ಲಿ ರವೀಂದ್ರ ಶ್ರೀಕಂಠಯ್ಯ ಅವರನ್ನು ಪುಟ್ಟರಾಜು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದಾರೆನ್ನಲಾಗಿದೆ. ಕೆ ಆರ್ ಎಸ್ ಅನ್ನು  ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿ ಪಡಿಸುವುದಕ್ಕೆ  ರವೀಂದ್ರ ಶ್ರೀಕಂಠಯ್ಯ ವಿರೋಧಿಸಿದ್ದು,  ಯೋಜನೆ ಕೈಬಿಡಲು  ಪುಟ್ಟರಾಜು ಒಪ್ಪುತ್ತಿಲ್ಲ ಎನ್ನಲಾಗಿದೆ. ಈ ನಿಟ್ಟಿನಲ್ಲಿ  ಡಿಕೆಶಿ ನೇತೃತ್ವದಲ್ಲಿ ನಡೆದ ಸಭೆಗೂ ರವೀಂದ್ರ ಶ್ರೀಕಂಠಯ್ಯ ಗೈರಾಗಿದ್ದರು. 

ಸೀತಾಪುರದ ಆಂಜನೇಯಸ್ವಾಮಿ ದೇವಸ್ಥಾನ ರಸ್ತೆ - ಶ್ರೀರಂಗಪಟ್ಟಣ ಕ್ಷೇತ್ರದ ಕಾರೆಕುರ  ಸಂಪರ್ಕ ಸೇತುವೆ ಶಂಕುಸ್ಥಾಪನೆಯಲ್ಲೂ  ರವೀಂದ್ರ ಅವರನ್ನು ಕಡೆಗಣನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.  ಸೇತುವೆಯ ಬಹುಪಾಲು ಭಾಗ ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಸೇರಿದರೂ ಶಿಲನ್ಯಾಸದ ಕಲ್ಲಲ್ಲಿ ರವೀಂದ್ರ ಶ್ರೀಕಂಠಯ್ಯ ಹೆಸರು ಕೊನೆಗೆ ಇದ್ದು, ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಲಾಗಿದೆ. 

ಈ ಹಿನ್ನೆಲೆಯಲ್ಲಿ ಸಿಎಂ ಕಾರ್ಯಕ್ರಮಕ್ಕೂ ಗೈರಾಗಿ ಅಸಮಾಧಾನ ಶಾಸಕ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಕ್ಷೇತ್ರದಲ್ಲಿದ್ದರೂ ಸಿಎಂ ಕಾರ್ಯಕ್ರಮಕ್ಕೆ ಬಾರದೇ ದೂರ ಉಳಿದಿದ್ದಾರೆ ಎನ್ನಲಾಗಿದೆ.