ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ, ಸರಿಯಾದ ಸಮಯಕ್ಕೆ ಬಸ್ ಸೌಕರ್ಯವಿಲ್ಲದೆ ಶಾಲಾ ವಿದ್ಯಾರ್ಥಿಗಳು ರಾತ್ರಿಯಿಡೀ ಬಸ್ ನಿಲ್ದಾಣದಲ್ಲಿ ಪರದಾಡಿದರು. ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕಿ ಕರೆಮ್ಮ ನಾಯಕ್, ಸ್ಥಳಕ್ಕೆ ಭೇಟಿ ನೀಡಿ ಸಾರಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ರಾಯಚೂರು (ಡಿ.27): ಸಾರಿಗೆ ಸಂಸ್ಥೆಯ ಬೇಜವಾಬ್ದಾರಿಯಿಂದಾಗಿ ಶಾಲಾ ವಿದ್ಯಾರ್ಥಿಗಳು ರಾತ್ರಿಯಾದರೂ ಮನೆಗೆ ತಲುಪಲಾಗದೆ ಬಸ್ ನಿಲ್ದಾಣದಲ್ಲಿಯೇ ಕಾದು ಕುಳಿತು ಪರದಾಡಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗತಾಲೂಕಿನಲ್ಲಿ ನಡೆದಿದ್ದು, ವಿದ್ಯಾರ್ಥಿಗಳ ಈ ಅಳಲಿಗೆ ಸ್ಪಂದಿಸಿದ ಶಾಸಕಿ ಕರೆಮ್ಮ ನಾಯಕ್, ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾತ್ರಿಯಾದರೂ ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ

ದೇವದುರ್ಗ ತಾಲೂಕಿನ ವಿವಿಧ ಹಳ್ಳಿಗಳಿಂದ ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಕರ್ಯ ಇಲ್ಲದಂತಾಗಿದೆ. ಸಂಜೆಯಾದರೂ ಹಳ್ಳಿಗಳಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲದ ಕಾರಣ, ಹತ್ತಾರು ವಿದ್ಯಾರ್ಥಿಗಳು ರಾತ್ರಿಯವರೆಗೂ ಬಸ್ ನಿಲ್ದಾಣದಲ್ಲಿಯೇ ಹಸಿದು ಕುಳಿತುಕೊಳ್ಳುವಂತಾಯಿತು. ಇದರಿಂದ ಕಂಗೆಟ್ಟ ವಿದ್ಯಾರ್ಥಿಗಳು ನೇರವಾಗಿ ಶಾಸಕಿ ಕರೆಮ್ಮ ನಾಯಕ್ ಅವರಿಗೆ ಫೋನ್ ಮಾಡಿ ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದರು.

ಸ್ಥಳಕ್ಕೆ ಧಾವಿಸಿ ಡಿಪೋ ಮ್ಯಾನೇಜರ್‌ಗೆ ಕ್ಲಾಸ್ ತಗೊಂಡ ಶಾಸಕಿ!

ವಿದ್ಯಾರ್ಥಿಗಳ ಫೋನ್ ಕರೆಗೆ ತಕ್ಷಣ ಸ್ಪಂದಿಸಿದ ದೇವದುರ್ಗ ಜೆಡಿಎಸ್ ಶಾಸಕಿ ಜಿ. ಕರೆಮ್ಮ ನಾಯಕ್ ಅವರು ಬಸ್ ನಿಲ್ದಾಣಕ್ಕೆ ಭೇಟಿ ನೀಡಿದರು. ಕತ್ತಲಲ್ಲಿ ಮಕ್ಕಳು ಬಸ್‌ಗಾಗಿ ಕಾಯುತ್ತಿರುವುದನ್ನು ಕಂಡು ಆಕ್ರೋಶಗೊಂಡ ಶಾಸಕಿ, ದೇವದುರ್ಗ ಡಿಪೋ ಮ್ಯಾನೇಜರ್ ಮತ್ತು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡರು. ಸರಿಯಾದ ಸಮಯಕ್ಕೆ ಬಸ್ ಇಲ್ಲದಿದ್ದರೆ ಮಕ್ಕಳು ವಿದ್ಯಾಭ್ಯಾಸ ಮಾಡುವುದು ಹೇಗೆ? ಅವರ ಸುರಕ್ಷತೆಗೆ ಹೊಣೆ ಯಾರು? ಎಂದು ಅಧಿಕಾರಿಗಳಿಗೆ ಸ್ಥಳದಲ್ಲೇ ಕ್ಲಾಸ್ ತೆಗೆದುಕೊಂಡರು.

ಶಾಸಕಿಯ ಎಚ್ಚರಿಕೆ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ

ಶಾಸಕಿ ಕರೆಮ್ಮ ನಾಯಕ್ ಆಕ್ರೋಶಗೊಂಡು ಸಾರಿಗೆ ಸಿಬ್ಬಂದಗೆ ತರಾಟೆ ಬಳಿಕ ಎಚ್ಚೆತ್ತುಕೊಂಡ ಡಿಪೋ ವ್ಯವಸ್ಥಾಪಕರು, ಕೂಡಲೇ ವಿದ್ಯಾರ್ಥಿಗಳಿಗೆ ಅವರ ಗ್ರಾಮಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡಿದರು. ಇನ್ನು ಮುಂದೆ ಇಂತಹ ಸಮಸ್ಯೆ ಮರುಕಳಿಸಬಾರದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಸ್ ಕೊರತೆಯಿಂದ ತೊಂದರೆಯಾಗಬಾರದು ಎಂದು ಶಾಸಕಿಯವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.