ಬೆಂಗಳೂರಿನಲ್ಲಿ ದಾಖಲೆಗಳಿಲ್ಲದೆ ಆಟೋ ಚಲಾಯಿಸುತ್ತಿರುವ ಬಾಂಗ್ಲಾದೇಶಿಗರೆಂದು ಹೇಳಿಕೊಳ್ಳುವ ಮೂವರ ವಿಡಿಯೋ ವೈರಲ್ ಆಗಿದೆ. ಉತ್ತಮ ಆದಾಯಕ್ಕಾಗಿ ಬೆಂಗಳೂರಿಗೆ ಬರುವಂತೆ ತಮ್ಮ ಜನರನ್ನು ಆಹ್ವಾನಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮತ್ತು ಭದ್ರತೆಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲನೆ ಮಾಡುತ್ತಿರುವ ಕೆಲವರ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ತಮ್ಮನ್ನು ತಾವೇ ಬಾಂಗ್ಲಾದೇಶಿಗರು ಎಂದು ಹೇಳಿಕೊಳ್ಳುವ ಮೂವರು ಆಟೋ ಚಾಲಕರು ಮಾಡಿರುವ ಒಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಅನುಮಾನ ಮತ್ತು ಆತಂಕ ಮೂಡಿಸಿದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮೂವರು ವ್ಯಕ್ತಿಗಳು ಬೆಂಗಳೂರಿನಲ್ಲಿ ಯಾವುದೇ ದಾಖಲೆಗಳಿಲ್ಲದೆ ಆಟೋ ಚಾಲನೆ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿರುವುದು ಕಂಡುಬರುತ್ತದೆ. ಅಲ್ಲದೇ, ಸೆಕ್ಯೂರಿಟಿ ಕೆಲಸ ಮಾಡಿದರೆ ಕೇವಲ 8 ರಿಂದ 10 ಸಾವಿರ ರೂಪಾಯಿ ಮಾತ್ರ ಸಂಬಳ ಸಿಗುತ್ತದೆ, ಆದರೆ ಬೆಂಗಳೂರಿನಲ್ಲಿ ಆಟೋ ಓಡಿಸಿದರೆ ಉತ್ತಮ ಆದಾಯ ಸಾಧ್ಯವಾಗುತ್ತದೆ ಎಂದು ಹೇಳುತ್ತಾ, ತಮ್ಮ ಊರಿನವರಿಗೆ “ಬೆಂಗಳೂರು ಬನ್ನಿ” ಎಂದು ಆಹ್ವಾನಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ.
ಯಾವುದೇ ಕಾನೂನು ದಾಖಲೆಗಳಿಲ್ಲದೆ ಆಟೋ ಚಾಲನೆ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, “ಯಾವುದೇ ಕಾನೂನು ದಾಖಲೆಗಳಿಲ್ಲದೆ ಇವರು ಹೇಗೆ ಆಟೋ ಚಾಲನೆ ಮಾಡುತ್ತಿದ್ದಾರೆ?”, “ವಿದೇಶಿಗರು ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುವುದು ಕಾನೂನುಬದ್ಧವೇ?” ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಇದರಿಂದಾಗಿ ಈ ಮೂವರು ಆಟೋ ಚಾಲಕರ ಬಗ್ಗೆ ತೀವ್ರ ಅನುಮಾನ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣ ಬಳಕೆದಾರರು, ಈ ಮೂವರು ಚಾಲಕರು ಬಾಂಗ್ಲಾದೇಶ ಮೂಲದವರು ಎಂಬುದಾಗಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದು, ಇದರ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಆಗ್ರಹಿಸುತ್ತಿದ್ದಾರೆ. ಕೆಲವರು ಇದು ದೇಶದ ಭದ್ರತೆಗೂ ಸಂಬಂಧಿಸಿದ ಗಂಭೀರ ವಿಷಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಪ್ರಕರಣವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ವಲಸೆ, ಉದ್ಯೋಗ ಮತ್ತು ದಾಖಲೆಗಳ ಪರಿಶೀಲನೆ ಕುರಿತಂತೆ ಮತ್ತೆ ಪ್ರಶ್ನೆಗಳನ್ನು ಎತ್ತಿದೆ. ಸದ್ಯಕ್ಕೆ ವಿಡಿಯೋದಲ್ಲಿರುವ ಆರೋಪಗಳ ಸತ್ಯಾಸತ್ಯತೆ ಕುರಿತು ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಆದರೆ, ಈ ವಿಚಾರವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ, ಪೊಲೀಸ್ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಸ್ಪಷ್ಟನೆ ಹಾಗೂ ತನಿಖೆ ನಡೆಯಬೇಕೆಂಬ ಒತ್ತಾಯ ಹೆಚ್ಚಾಗಿದೆ.
ರೂಪೇಶ್ ರಾಜಣ್ಣ ಆಕ್ರೋಶ
ಇದಕ್ಕೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಿಗ ಆಟೋ ಡ್ರೈವರ್ ಗಳ ಕೆಲಸವನ್ನು ಕಬಳಿಸುತ್ತಿರುವ ವಲಸಿಗರು, ಇವರೆಲ್ಲ ಯಾರು? ಯಾವ ರಾಜ್ಯದವರು? ಇವರಿಗೆಲ್ಲ ಪರ್ಮಿಟ್ ಕೊಟ್ಟವರು ಯಾರು. ಇವರ ಅಡ್ರೆಸ್ ಆದ್ರೂ ಎಲ್ಲಿದೆ? ಆಟೋ ಓಡಿಸಲು ತಮ್ಮವರನ್ನು ವಿಡಿಯೋ ಮಾಡಿ ಆಹ್ವಾನ ಏನಾಗ್ತಿದೆ ಬೆಂಗಳೂರು. ಹೇಳೋರು ಕೇಳೋರು ಯಾರು ಇಲ್ಲವೇ? ಎಂದು ಪ್ರಶ್ನಿಸುತ್ತಿದ್ದಾರೆ.


