ಶ್ರೀ ಮಾರಿಕಾಂಬಾ ದೇವಾಲಯದ ಮಾರೀಕೋಣ ಇನ್ನಿಲ್ಲ
ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯ
ಇತಿಹಾಸ ಪ್ರಸಿದ್ಧ ಮಾರೀಕೋಣ ಇನ್ನಿಲ್ಲ
ವಿಧಿವಿಧಾನಗಳೊಂದಿಗೆ ಕೋಣದ ಅಂತ್ಯಕ್ರಿಯೆ
ಶಿರಸಿ(ಜು.19): ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಮಾರಿಕಾಂಬಾ ದೇವಾಲಯದ ಪಟ್ಟದ ಕೋಣ ಇಂದು ಬೆಳಗ್ಗಿನ ಜಾವ ಅಸುನೀಗಿದೆ. ಕೋಣಕ್ಕೆ 25 ವರ್ಷ ವಯಸ್ಸಾಗಿತ್ತು. ಇದೇ ಕಾರಣದಿಂದಾಗಿ ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಸಂಪ್ರದಾಯದಂತೆ ವಿಧಿವಿಧಾನಗಳೊಂದಿಗೆ ಬೆಳಿಗ್ಗೆ ಕೋಣದ ಅಂತ್ಯಕ್ರಿಯೆ ನಡೆಸಲಾಯಿತು.
ಹಿಂದಿನ ಕಾಲದ ಇತಿಹಾಸವೇನು?
12ನೇ ಶತಮಾನದಲ್ಲಿ ಶಿರಿಯೂರು ಎಂದು ಕರೆಯಿಸಿಕೊಳ್ಳತ್ತಿದ್ದ ಶಿರಸಿಯಲ್ಲಿ ಬ್ರಾಹ್ಮಣ ಮಹಿಳೆಯೋರ್ವಳನ್ನು (ಮಾರಿಯಮ್ಮ) ಕೆಳವರ್ಗದ ಯುವಕನೋರ್ವ ಸುಳ್ಳುಹೇಳಿ ಮೋಸದಿಂದ ವಿವಾಹವಾಗುತ್ತಾನೆ.
ವಿವಾಹವಾಗಿ ಕೆಲವು ವರ್ಷಗಳ ಬಳಿಕ ಅವಳಿಗೆ ಈ ವಿಷಯ ತಿಳಿದು ಬರುತ್ತದೆ. ಇದರಿಂದ ಕೆಂಡಾಮಂಡಲವಾಗುವ ಆಕೆಯು ಅವನನ್ನು ವಧಿಸಲು ಬೆನ್ನಟ್ಟಿ ಬರುತ್ತಾಳೆ. ಹೀಗಾಗಿ ಕೆಳ ವರ್ಗದ ಪತಿಯು ಮೊದಲು ಕೋಳಿಯ ಶರೀರದಲ್ಲಿ, ನಂತರ ಕುರಿಯ ಶರೀರದಲ್ಲಿ, ಆಮೇಲೆ ಕೋಣನ ದೇಹದಲ್ಲಿ ಸೇರಿಕೊಂಡು ಅವಿತುಕೊಳ್ಳುತ್ತಾನೆ.
ಆತನು ಕೋಣನ ಶರೀರದಲ್ಲಿ ಅವಿತುಕೊಂಡಿರುವುದು ತಿಳಿದು ಆಕೆ ಕೋಣವನ್ನು ಸಂಹರಿಸುವ ಮೂಲಕ ಪತಿಯ ಬಲಿ ತೆಗೆದುಕೊಳ್ಳುತ್ತಾಳೆ. ಬಳಿಕ ಮಾರಿಕಾಂಬೆಯಾಗಿ ಇಲ್ಲಿ ನೆಲೆನಿಲ್ಲುತ್ತಾಳೆ.
ಕೋಪಗೊಂಡ ದೇವಿಯನ್ನು ಶಾಂತಗೊಳಿಸುವ ಕಾರಣಕ್ಕಾಗಿ ದೇವಸ್ಥಾನದಲ್ಲಿ ಕೋಣ ಬಲಿಯನ್ನು ನೀಡಲು ಕೋಣವನ್ನು ಸಾಕಲಾಗುತ್ತಿತ್ತು. ಆದರೆ 1930ರಿಂದ ಕೋಣ ಬಲಿ ಇಲ್ಲಿ ನಿಂತಿದೆ. ಈಗೆಲ್ಲ ಸಿರಿಂಜ್ ಮೂಲಕ ಅಲ್ಪ ರಕ್ತವನ್ನು ತೆಗೆದು ಅರ್ಪಿಸಲಾಗುತ್ತದೆ.