ನೆಲ್ಲೋರ್‌[ಮೇ.23]: ಇತ್ತೀಚೆಗೆ ಶ್ರೀಲಂಕಾದ ಹೋಟೆಲ್‌ ಮತ್ತು ಚಚ್‌ರ್‍ಗಳ ಮೇಲೆ ದಾಳಿ ನಡೆಸಿ 250ಕ್ಕೂ ಹೆಚ್ಚು ಅಮಾಯಕರನ್ನ ಬಲಿ ಪಡೆದ ಐಸಿಸ್‌ ಉಗ್ರರು, ಇದೀಗ ಭಾರತದೊಳಕ್ಕೂ ನುಸುಳಿರಬಹುದು ಎಂಬ ಆತಂಕ ವ್ಯಕ್ತವಾಗಿದೆ. 3 ದಿನಗಳ ಹಿಂದೆ ಆಂಧ್ರದ ಪೊನ್ನಪುಡಿ ಪಥುರು ಗ್ರಾಮಕ್ಕೆ ಹೊಂದಿಕೊಂಡ ಸಮುದ್ರ ತೀರದಲ್ಲಿ ಬೋಟ್‌ ಒಂದು ಪತ್ತೆಯಾಗಿತ್ತು. ತಪಾಸಣೆ ವೇಳೆ ಬೋಟ್‌ ಶ್ರೀಲಂಕಾಕ್ಕೆ ಸೇರಿದ್ದು ಎಂಬುದು ಖಚಿತಪಟ್ಟಿದೆ.

ಇತ್ತೀಚೆಗೆ ಲಂಕಾದಲ್ಲಿ ದಾಳಿ ನಡೆಸಿದ ಉಗ್ರರು, ಸಮುದ್ರ ಮಾರ್ಗವಾಗಿ ಭಾರತ ಪ್ರವೇಶಿಸಬಹುದು ಎಂದು ಲಂಕಾ ಗುಪ್ತಚರ ಇಲಾಖೆ ಇತ್ತೀಚೆಗೆ ಮುನ್ನೆಚ್ಚರಿಕೆ ನೀಡಿತ್ತು. ಹೀಗಾಗಿ ಶಂಕಾಸ್ಪದ ಬೋಟ್‌ ಪತ್ತೆಯಾಗಿರುವುದು ನಾನಾ ವದಂತಿ, ಆತಂಕಕ್ಕೆ ಕಾರಣವಾಗಿದೆ. ಪತ್ತೆಯಾದ ಬೊಟ್‌ನಲ್ಲಿ ಸಿಗರೆಟ್‌, ಬೀಡಿ, ಕುಡಿಯುವ ನೀರಿನ ಬಾಟಲ್‌ ಪತ್ತೆಯಾಗಿದೆ. ಕ್ಯಾನ್‌ ಮೇಲಿನ ಸ್ಟಿಕ್ಕರ್‌ನಿಂದ ಈ ಹಡಗಿನಲ್ಲಿ ಬಂದವರು ಲಂಕಾದವರೇ ಎಂದು ಖಚಿತಪಡಿಸಿದೆ.

ಈ ಹಿನ್ನೆಲೆಯಲ್ಲಿ ಭಾರತದ ಗುಪ್ತಚರ ತಂಡ, ಪೊಲೀಸರು ಹಾಗೂ ನೌಕಾಪಡೆಯ ಸಿಬ್ಬಂದಿ ಆಂಧ್ರಪ್ರದೇಶದ ಪೊನ್ನಪುಡಿ ಪಥುರು ಗ್ರಾಮಕ್ಕೆ ತೆರಳಿ ಉಗ್ರರು ಅಡಗಿದ್ದಾರೆಯೇ ಎಂಬ ಬಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ಉಗ್ರರ ಪ್ರವೇಶದ ಅನುಮಾನವು, ಬುಧವಾರ ಶ್ರೀಹರಿಕೋಟಾದಲ್ಲಿ ನಡೆದ ಇಸ್ರೋದ ಉಪಗ್ರಹ ಉಡ್ಡಯನಕ್ಕೂ ಆತಂಕ ಕವಿಯುವಂತೆ ಮಾಡಿತ್ತು.