Asianet Suvarna News Asianet Suvarna News

ಬಹಿರಂಗವಾಯ್ತು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಮತ್ತು ಸ್ಪೆಷಲ್ ಡಿ.ಸಿ.ಪನಾಲಿ ನಡುವಿನ ಮುಸುಕಿನ ಗುದ್ದಾಟ

Special DC Panali Filed A Complaint Against Bangalore Urban DC V Shankar

ಬೆಂಗಳೂರು(ಅ.05): ಬೆಂಗಳೂರು​ನಗರ ಜಿಲ್ಲಾಧಿಕಾರಿ ವಿ.ಶಂಕರ್​ ಮತ್ತು ಸ್ಪೆಷಲ್ ಡಿ.ಸಿ.ಪನಾಲಿ ಮಧ್ಯೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗ ಬಹಿರಂಗವಾಗಿದೆ. ವಿಶೇಷ ಜಿಲ್ಲಾಧಿಕಾರಿಯಾಗಿ ನಿವೃತ್ತಿಗೂ ಒಂದು​ ತಿಂಗಳು​ ಮೊದಲು ಡಿ.ಸಿ.ಶಂಕರ್​ ವಿರುದ್ಧ ಪನಾಲಿ ಅವರು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿರುವುದು ಈಗ ಬೆಳಕಿಗೆ ಬಂದಿದೆ. ಈ ದೂರಿನ ಪ್ರತಿ ಸುವರ್ಣನ್ಯೂಸ್-ಕನ್ನಡಪ್ರಭಕ್ಕೆ ಲಭ್ಯವಾಗಿದೆ. ದೂರಿನಲ್ಲಿ ಏನಿದೆ? ಎನ್ನುವ ವಿವರ ಇಲ್ಲಿದೆ ನೋಡಿ.

ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್​ ವಿರುದ್ಧ ದೂರು: ವಿಶೇಷ ಜಿಲ್ಲಾಧಿಕಾರಿ ಪನಾಲಿ ಅವರಿಂದ ದೂರು ಸಲ್ಲಿಕೆ

ಬೆಂಗಳೂರು​ ನಗರ ಜಿಲ್ಲಾಧಿಕಾರಿ ವಿ.ಶಂಕರ್​ ಮತ್ತು ವಿಶೇಷ ಜಿಲ್ಲಾಧಿಕಾರಿ ಆಗಿ ನಿನ್ನೆಯಷ್ಟೇ ನಿವೃತ್ತಿ ಆಗಿರೋ ಪನಾಲಿ ಮಧ್ಯೆ ನಡೀತಾ ಇದ್ದ ಮುಸುಕಿನ ಗುದ್ದಾಟ ಈಗ ಬಯಲಾಗಿದೆ. ಭೂ ಹಗರಣವೊಂದರಲ್ಲಿ ಪನಾಲಿ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಶಂಕರ್​ ಅವರು ಶಿಫಾರಸ್ಸು ಮಾಡಿರೋ ಬೆನ್ನಲ್ಲೇ ಈಗ ಪನಾಲಿ ಅವರು ಶಂಕರ್​ ವಿರುದ್ಧ ಸಲ್ಲಿಸಿರುವ ದೂರು ಮಹತ್ವ ಪಡೆದುಕೊಂಡಿದೆ.

ಪನಾಲಿ ಸಲ್ಲಿಸಿರುವ ದೂರಿನಲ್ಲೇನಿದೆ?

ತಾವು ಸ್ವತಂತ್ರ ಅಧಿಕಾರ ಹೊಂದಿದ್ದರೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಂಕರ್ ಅವರು ತಮ್ಮ ಕಾರ್ಯದಲ್ಲಿ ಹಸ್ತಕ್ಷೇಪ ನಡೆಸಿ ಅನಗತ್ಯವಾಗಿ ಒತ್ತಡ ಹೇರುತ್ತಿದ್ದಾರೆ. ವೈಯಕ್ತಿಕವಾಗಿ ತಮ್ಮ ಮೇಲೆ ಮುಗಿಬೀಳುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ತಮ್ಮ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲು ಸಂಚು ನಡೆಸಿದ್ದರು. ಪ್ರಕರಣವೊಂದರಲ್ಲಿ ತಮ್ಮನ್ನು ಮಾನಸಿಕವಾಗಿ ಕಿರುಕುಳ ನೀಡಿರುವುದಲ್ಲದೆ ಬೆದರಿಕೆ ಹಾಕಿದ್ದಾರೆ. ಸರ್ಕಾರದ ಪರವಾಗಿ ಆದೇಶಗಳನ್ನು ಹೊರಡಿಸಲು ಶಂಕರ್ ಅವರು ಹೇಳುತ್ತಿದ್ದಾರಾದರೂ ಅದರಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳಿದ್ದವು. ಹಲವು ಪ್ರಕರಣಗಳ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ಸಮ್ಮುಖದಲ್ಲೇ ತಮ್ಮನ್ನು ವಿನಾ ಕಾರಣ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ತಾವು ಹೇಳಿದಂತೆ ಆದೇಶ ಮಾಡದಿದ್ದಲ್ಲಿ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ದೂರು ನೀಡಬೇಕಾಗುತ್ತೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು. ತಾವು ಮಾಡುವ ಅರೆನ್ಯಾಯಿಕ ಆದೇಶಗಳನ್ನು ಪಾಲನೆ ಮಾಡಬಾರದು ಎಂದು ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ಶಂಕರ್ ಅವರು ಸೂಚಿಸಿದ್ದರು. ತಾವು ಹೊರಡಿಸಿದ ಆದೇಶ, ನೀಡಿರುವ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಮೂಲಕ ಪ್ರಶ್ನಿಸಲು ಅವಕಾಶವಿದೆ. ಆದರೂ ತಾವು ಹೊರಡಿಸಿದ ಆದೇಶಗಳನ್ನು ಪಾಲನೆ ಮಾಡದಂತೆ ಕೆಳಗಿನ ಅಧಿಕಾರಿಗಳಿಗೆ ಸೂಚಿಸುತ್ತಿದ್ದರು. ಶಂಕರ್ ಅವರು ನಿರ್ದಿಷ್ಟ ಪ್ರಕರಣಗಳಲ್ಲಿ  ಹಲವು ಬಾರಿ ತಮಗೆ ನೋಟೀಸ್ ನೀಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಕಾನೂನು ಮತ್ತು ದಾಖಲೆ ಪ್ರಕಾರ ಕ್ರಮ ಕೈಗೊಳ್ಳುತ್ತೇನೆ ಎಂದಾಗಲೂ ನನ್ನನ್ನು ಅವಮಾನಿಸಿದ್ದಾರೆ. ಕೆಲ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತಿದ್ದುವುದು ಹಾಗೂ ಸ್ಥಳಾಂತರ ಮಾಡುವ ಸಾಧ್ಯತೆಗಳಿವೆ. ತಮ್ಮ ಕಚೇರಿಗೆ ಸಂಬಂಧಿಸಿರುವ ಕಡತಗಳನ್ನು ಹಿಂದಿರುಗಿಸಲು ಸೂಚನೆ ನೀಡಬೇಕು

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಕೃಷ್ಣರಾಜಪುರ ಗ್ರಾಮದ ಸರ್ವೆ ನಂಬರ 23ರಲ್ಲಿ 72 ಎಕರೆ ಅರಣ್ಯ ಭೂಮಿಯನ್ನು ಐವರು ವ್ಯಕ್ತಿಗಳಿಗೆ ಆರ್‌ಟಿಸಿ ಮಾಡಿಕೊಡಬೇಕು ಎಂದು ಪನಾಲಿ ಅವರು ಆದೇಶ ಹೊರಡಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಪನಾಲಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ವಿ.ಶಂಕರ್ ಅವರು ಪತ್ರ ಬರೆದು ಶಿಫಾರಸ್ಸು ಮಾಡಿದ್ದನ್ನು ಸ್ಮರಿಸಿಕೊಳ್ಳಬಹುದು.

 

 

Latest Videos
Follow Us:
Download App:
  • android
  • ios