ವಿಜಯ್ ಮಲ್ಯಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸಾವಿರಾರು ಕೋಟಿ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಮಲ್ಯರನ್ನು ಇದೀಗ ಆರ್ಥಿಕ ಅಪರಾಧಿ ಎಂದು ಘೋಷಿಸಿದೆ.
ಮುಂಬೈ : ಭಾರತದ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರು. ಪಂಗನಾಮ ಹಾಕಿ ವಿದೇಶಕ್ಕೆ ಪರಾರಿಯಾಗಿರುವ ಕರ್ನಾಟಕ ಮೂಲದ ಉದ್ಯಮಿ ವಿಜಯ್ ಮಲ್ಯ ಅವರನ್ನು ‘ದೇಶಭ್ರಷ್ಟಆರ್ಥಿಕ ಅಪರಾಧಿ’ ಎಂದು ಇಲ್ಲಿನ ‘ಅಕ್ರಮ ಹಣ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯ’ ಘೋಷಿಸಿದೆ. ಅಲ್ಲದೆ, ಅವರ ಆಸ್ತಿ ಮುಟ್ಟುಗೋಲು ಸಂಬಂಧ ಫೆಬ್ರವರಿ 5ರಿಂದ ವಿಚಾರಣೆ ಆರಂಭಿಸುವುದಾಗಿ ಹೇಳಿದೆ.
ದೇಶಭ್ರಷ್ಟಆರ್ಥಿಕ ಅಪರಾಧಿಗಳ ಕಾಯ್ದೆ ಎಂಬ ಹೊಸ ಶಾಸನವನ್ನು ಭಾರತ ಸರ್ಕಾರ ಕಳೆದ ಆಗಸ್ಟ್‌ನಲ್ಲಿ ಜಾರಿಗೊಳಿಸಿತ್ತು. ಈ ಕಾಯ್ದೆಯ ಜಾರಿಗೆ ಬಂದ ನಂತರ ‘ದೇಶಭ್ರಷ್ಟಆರ್ಥಿಕ ಅಪರಾಧಿ’ ಎಂದು ಘೋಷಣೆಯಾದ ಮೊದಲ ಉದ್ಯಮಿ ಎಂಬ ಕುಖ್ಯಾತಿಗೆ ಮಲ್ಯ ಪಾತ್ರರಾಗಿದ್ದಾರೆ.
ಒಬ್ಬ ವ್ಯಕ್ತಿ ‘ದೇಶಭ್ರಷ್ಟಆರ್ಥಿಕ ಅಪರಾಧಿ’ ಎಂದು ಘೋಷಣೆಯಾದರೆ ಸರ್ಕಾರಕ್ಕೆ, ದೇಶ-ವಿದೇಶಗಳಲ್ಲಿ ಅತ ಹೊಂದಿರುವ ಆಸ್ತಿಪಾಸ್ತಿಗಳನ್ನು ತನ್ನಿಂತಾನೇ ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರ ದೊರೆಯುತ್ತದೆ.
ಮಲ್ಯ ಅವರನ್ನು ದೇಶಭ್ರಷ್ಟಆರ್ಥಿಕ ಅಪರಾಧಿ ಎಂದು ಘೋಷಿಸಬೇಕು ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ವಿಶೇಷ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿತ್ತು. ಆದರೆ ಬ್ರಿಟನ್‌ನಲ್ಲಿ ನೆಲೆಸಿರುವ ಮಲ್ಯ ಅವರ ಪರ ವಾದಿಸಿದ್ದ ವಕೀಲರು ಇದನ್ನು ವಿರೋಧಿಸಿ, ‘ನಮ್ಮ ಕಕ್ಷಿದಾರರು ದೇಶ ಬಿಟ್ಟು ಓಡಿಹೋಗಿಲ್ಲ. ಎಫ್-1 ರೇಸ್ ನೋಡಲು ಹೋಗಿದ್ದರು’ ಎಂದಿದ್ದರು.
ಆದರೆ ಮಲ್ಯ ಪರ ವಕೀಲರ ವಾದ ತಳ್ಳಿಹಾಕಿ ಇ.ಡಿ. ವಕೀಲರ ವಾದ ಮನ್ನಿಸಿದ ವಿಶೇಷ ನ್ಯಾಯಾಧೀಶ ಎಂ.ಎಸ್. ಅಜ್ಮಿ, ದೇಶಭ್ರಷ್ಟಆರ್ಥಿಕ ಅಪರಾಧ ಕಾಯ್ದೆಯ ಸೆಕ್ಷನ್ 12ರ ಅನ್ವಯ ಮಲ್ಯ ಅವರನ್ನು ದೇಶಭ್ರಷ್ಟಆರ್ಥಿಕ ಅಪರಾಧಿ ಎಂದು ಘೋಷಿಸಿದರು. ಇದೇ ವೇಳೆ, ಆಸ್ತಿಗಳ ಮುಟ್ಟುಗೋಲು ಕೋರಿ ಇ.ಡಿ. ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಫೆಬ್ರವರಿ 5ರಿಂದ ಆರಂಭಿಸುವುದಾಗಿ ಪ್ರಕಟಿಸಿದರು.
ತಡೆ ಇಲ್ಲ: ಈ ನಡುವೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಉದ್ದೇಶದಿಂದ ಆದೇಶಕ್ಕೆ 4 ವಾರಗಳ ಕಾಲ ತಡೆ ನೀಡಬೇಕೆಂದು ಮಲ್ಯ ಪರ ವಕೀಲರು ಮಾಡಿದ್ದ ಮನವಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿತು. ದೇಶಭ್ರಷ್ಟಆರ್ಥಿಕ ಅಪರಾಧಿಗಳ ಕಾಯ್ದೆಯಲ್ಲಿ ಆದೇಶ ಹೊರಡಿಸಿದ ನ್ಯಾಯಾಲಯ, ತನ್ನ ಆದೇಶಕ್ಕೆ ತಾನೇ ತಡೆನೀಡಲಾಗದು ಎಂದು ಸ್ಪಷ್ಟಪಡಿಸಿತು.
ಮಲ್ಯ ಅವರು 2016ರಲ್ಲೇ ಭಾರತವನ್ನು ತೊರೆದಿದು ಬ್ರಿಟನ್ ಸೇರಿಕೊಂಡಿದ್ದರು. ಭಾರತದ ಸುಮಾರು 13 ಬ್ಯಾಂಕ್‌ಗಳಿಗೆ 6 ಸಾವಿರ ರು. ಅಸಲು ಹಾಗೂ 3 ಸಾವಿರ ರು. ಬಡ್ಡಿ ಸೇರಿ 9 ಸಾವಿರ ಕೋಟಿ ರು. ಕಟ್ಟದೇ ದೇಶದಿಂದ ಪಲಾಯನ ಮಾಡಿದ್ದರು.
ಬಿಜೆಪಿ ಸ್ವಾಗತ: ಮಲ್ಯ ಅವರನ್ನು ದೇಶಭ್ರಷ್ಟಎಂದು ಘೋಷಣೆ ಮಾಡಿರುವುದನ್ನು ಬಿಜೆಪಿ ಸ್ವಾಗತಿಸಿದೆ. ‘ಇದು ಪಕ್ಷವು ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಹೋರಾಟದ ಕಿರೀಟಕ್ಕೆ ಪುಕ್ಕ ಸಿಕ್ಕಿಸಿದಂತಾಗಿದೆ’ ಎಂದಿದೆ.
ಮಲ್ಯ ಮುಂದೇನು?
ಅಕ್ರಮ ಹಣ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯದ ತೀರ್ಪನ್ನು ಮಲ್ಯ, ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು. ಫೆ.5ಕ್ಕೆ ಮಲ್ಯ ಆಸ್ತಿ ಮುಟ್ಟುಗೋಲಿನ ಬಗ್ಗೆ ಮುಂಬೈ ಕೋರ್ಟ್ ವಿಚಾರಣೆ ಆರಂಭಿಸಲಿದೆ. ಒಂದು ವೇಳೆ ಅಷ್ಟರೊಳಗೆ ವಿಶೇಷ ಕೋರ್ಟ್‌ನ ತೀರ್ಪನ್ನು ಮಲ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ, ಹೈಕೋರ್ಟ್ ಆದೇಶ ಜಾರಿಗೆ ತಡೆ ನೀಡಿದರೆ ಮಲ್ಯ ಬಚಾವ್. ಇಲ್ಲದೇ ಹೋದಲ್ಲಿ ಮಲ್ಯ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ.
ಹೀಗೆ ಘೋಷಿಸಿದರೆ ಏನು ಉಪಯೋಗ?
ಒಬ್ಬ ವ್ಯಕ್ತಿ ‘ದೇಶಭ್ರಷ್ಟಆರ್ಥಿಕ ಅಪರಾಧಿ’ ಎಂದು ಘೋಷಣೆಯಾದರೆ, ದೇಶ-ವಿದೇಶಗಳಲ್ಲಿ ಅತ ಹೊಂದಿರುವ ಎಲ್ಲ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಅವುಗಳನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ದೊರೆಯುತ್ತದೆ.
