ಬೆಂಗಳೂರು :  ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ಶಾಸಕ ಉಮೇಶ್ ಜಾಧವ್ ಸೇರಿದಂತೆ ನಾಲ್ಕು ಮಂದಿ ಬಂಡಾಯ ಕಾಂಗ್ರೆಸ್ ಶಾಸಕರಿಗೆ ಮಾ. 12ರ ಮಧ್ಯಾಹ್ನ 3 ಗಂಟೆಗೆ ಖುದ್ದು ಆಗಮಿಸಿ ತಮ್ಮ ವಿರುದ್ಧದ ಪಕ್ಷಾಂತರ ಕಾಯ್ದೆ ಉಲ್ಲಂಘನೆ ಕುರಿತ ದೂರಿನ ಕುರಿತು ವಿವರಣೆ ನೀಡುವಂತೆ ಸ್ಪೀಕರ್ ರಮೇಶ್ ಕುಮಾರ್ ನಿರ್ದೇಶಿಸಿದ್ದಾರೆ. 

ಹೀಗಾಗಿ ರಾಜೀನಾಮೆ ನೀಡಿ ಅನರ್ಹತೆಯಿಂದ ಪಾರಾಗುವ ಉಮೇಶ್ ಜಾಧವ್‌ಗೆ ಢವಢವ ಆರಂಭವಾಗಿದೆ.  ಸುದ್ದಿಗಾರರ ಜತೆ ಮಾತನಾಡಿದ ರಮೇಶ್ ಕುಮಾರ್ ಅವರು, ‘4 ಮಂದಿ ಶಾಸಕರಿಗೆ ಪತ್ರ ಬರೆದಿದ್ದು, ಶುಕ್ರವಾರ ಖುದ್ದಾಗಿ ಆಗಮಿಸಿ ವಿವರಣೆ ನೀಡುವಂತೆ ಸೂಚಿಸಿರುವೆ’ ಎಂದು  ಹೇಳಿದರು.

‘ಪಕ್ಷಾಂತರ ನಿಷೇಧ ಕಾಯಿದೆ ಅಡಿ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು, ನಾಲ್ಕು ಮಂದಿ ಶಾಸಕರ ವಿರುದ್ದ ದೂರು ನೀಡಿದ್ದರು. ದೂರಿನ ಸಂಬಂಧ ಶಾಸಕರು ಸ್ಪಷ್ಟೀಕರಣ ನೀಡಿದ್ದಾರೆ. ಈ ಬಗ್ಗೆ ಮತ್ತಷ್ಟು ಸ್ಪಷ್ಟನೆ ಬಯಸಿ ಮತ್ತೊಂದು ನೋಟಿಸ್ ನೀಡಿದ್ದೇನೆ. ಇದಕ್ಕೆ ವಿವರಣೆ ನೀಡಲು ಮಾ.12 ರಂದು ಖುದ್ದು ಹಾಜರಾಗುವಂತೆ ಸೂಚಿಸಿ ದ್ದೇನೆ’ ಎಂದರು.

‘ವಿಚಾರಣೆ ಬಳಿಕ ಕಾನೂನು ಹೇಗೆ ಹೇಳುತ್ತೋ ಹಾಗೆ ಮಾಡುತ್ತೇವೆ. ರೂಲ್ಸ್ ಬುಕ್ ಏನು ಹೇಳುತ್ತೋ ಹಾಗೆ ಮಾಡಬೇಕಾಗುತ್ತದೆ. ಶಾಸಕರು ತಮ್ಮ ಸ್ಪಷ್ಟನೆಗಳನ್ನು ನೀಡಿದ ಬಳಿಕವಷ್ಟೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.