Asianet Suvarna News Asianet Suvarna News

ರಾಜೀನಾಮೆ ಜೇಬಲ್ಲಿಟ್ಟುಕೊಂಡು ಬಂದಿದ್ದ ಸ್ಪೀಕರ್ ರಮೇಶ್ ಕುಮಾರ್!

ಸದನದಲ್ಲಿ ಸ್ಪೀಕರ್ ಹೇಳಿಕೆ | ವಚನಭ್ರಷ್ಟ ಆರೋಪಕ್ಕೆ ರಮೇಶ್‌ಕುಮಾರ್ ಬೇಸರ | ರಾಜೀನಾಮೆ ಪತ್ರ ಪ್ರದರ್ಶನ

Speaker Ramesh Kumar Came With His Resignation Letter To Assembly
Author
Bangalore, First Published Jul 24, 2019, 9:15 AM IST

ಬೆಂಗಳೂರು[ಜು.24]: ವಿಧಾನಸಭೆ ಯಾವ ಗಳಿಗೆಯಲ್ಲಿ ಏನಾಗುತ್ತದೆಯೋ ಗೊತ್ತಿಲ್ಲ. ಈ ದಿನವೂ ಪ್ರತಿಪಕ್ಷದ ನಾಯಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಆಗುತ್ತದೆಯೋ ಇಲ್ಲವೋ ಎಂಬ ಭಯಕ್ಕೆ ರಾಜೀನಾಮೆ ಪತ್ರ ಜೇಬಿನಲ್ಲಿಟ್ಟುಕೊಂಡು ಬಂದಿದ್ದೇನೆ ಎಂದು ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಹೇಳಿದರು.

ಬಿಜೆಪಿ ನಾಯಕರಿಂದ ವಚನ ಭ್ರಷ್ಟತೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತೀವ್ರ ಬೇಸರಗೊಂಡಿರುವುದಾಗಿ ಸದನಕ್ಕೆ ತಿಳಿಸಿದ ಅವರು, ಸತತ ನಾಲ್ಕು ದಿನಗಳಿಂದ ವಿಶ್ವಾಸಮತ ನಿರ್ಣಯ ಮತಕ್ಕೆ ಹಾಕುವುದಾಗಿ ಹೇಳಿ ಮುಂದೂಡುತ್ತಿದ್ದೆ. ಆದರೆ, ಇಂದು ಕೂಡ ನಾನು ಕೊಟ್ಟ ಮಾತು ಉಳಿಸಿಕೊಳ್ಳಲಾಗುತ್ತದೆಯೋ ಇಲ್ಲವೋ ಎಂದು ರಾಜೀನಾಮೆ ಪತ್ರ ಜೇಬಿನಲ್ಲಿಟ್ಟುಕೊಂಡು ಬಂದಿದ್ದೆ ಎಂದರು.

ಅತೃಪ್ತ ಶಾಸಕರ ಗುಂಪಿನಲ್ಲಿರುವ ಹುಣಸೂರು ಶಾಸಕ ವಿಶ್ವನಾಥ್ ತಮ್ಮ ಬಗ್ಗೆ ಹೇಳಿಕೆ ನೀಡಿರುವುದನ್ನು ಪ್ರಸ್ತಾಪಿಸಿದ ರಮೇಶ್ ಕುಮಾರ್ ಅವರು, ನಾನು ರಾಜೀನಾಮೆ ಸ್ವೀಕಾರ ವಿಳಂಬ ಮಾಡಿಲ್ಲ. ವಿಶ್ವನಾಥ್ ಅವರು ನನ್ನ ಭೇಟಿಗೆ ಬಂದಾಗ ವಿಧಾನಸಭೆ ನಿಯಮಾವಳಿ ಪುಸ್ತಕ ಹಾಗೂ ಅವರ ರಾಜೀನಾಮೆ ಪತ್ರ ಎರಡೂ ನೀಡಿ ಕ್ರಮಬದ್ಧವಾಗಿದೆಯೇ ಎಂದು ಪ್ರಶ್ನೆ ಮಾಡಿದ್ದೆ. ಇಷ್ಟು ವರ್ಷ ರಾಜಕಾರಣದಲ್ಲಿದ್ದು ಒಂದು ರಾಜೀನಾಮೆ ಪತ್ರ ಕ್ರಮಬದ್ಧವಾಗಿ ನೀಡಲು ಬರುವುದಿಲ್ಲ. ನನ್ನ ಬಗ್ಗೆ ಮಾತನಾಡುತ್ತಾರೆ. ನನ್ನ ರೀತಿ ಬದುಕಲು ಇಂತಹವರು ನೂರು ಜನ್ಮ ಎತ್ತಿ ಬರಬೇಕು ಎಂದು ಹೇಳಿದರು.

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?

ಹಿಂದುಳಿದ ವರ್ಗಗಳ ಹೆಸರಿನಲ್ಲಿ ಗಂಟು ಕಟ್ಟುಕೊಂಡು ಹೋಗಿರುವ ಇವರು ನನ್ನ ಬಗ್ಗೆ ವ್ಯಾಖ್ಯಾನ ಮಾಡುತ್ತಾರೆ. ಅವರು ಮಾಡಿರುವುದು ಸಭಾನಿಂದನೆ ಆಗುತ್ತದೆ. ಇಂತಹ ಆರೋಪಗಳನ್ನು ಎದುರಿಸಲು ನಾನು ಆ ರೀತಿ ಬದುಕುತ್ತಿಲ್ಲ.

ಸದನ ನಡೆಸುವ ವಿಚಾರದಲ್ಲೂ ಯಾವ ಘಳಿಗೆಯಲ್ಲಿ ಏನಾಗುತ್ತದೆಯೋ? ಇಂದು ಕೂಡ ನನಗೆ ಸಹಕಾರ ಸಿಗುತ್ತದೆಯೋ ಇಲ್ಲವೋ ಎಂಬ ಕಾರಣಕ್ಕೆ ಜೇಬಿನಲ್ಲಿ ರಾಜೀನಾಮೆ ಪತ್ರ ಇಟ್ಟುಕೊಂಡು ಬಂದಿದ್ದೇನೆ ಎಂದು ತಮ್ಮ ಜೇಬಿನಲ್ಲಿದ್ದ ಚೀಟಿಯನ್ನು ಬಿ.ಎಸ್. ಯಡಿಯೂರಪ್ಪ ಅವರಿಗೆ ಓದಲು ಕಳುಹಿಸಿದರು. ಮಾತು ಮುಂದುವರೆಸಿ, ನನ್ನಂತಹವರ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ, ಈಗಲೂ ಇದ್ದೇವೆ ಎಂದು ಹೇಳಿದರು

Follow Us:
Download App:
  • android
  • ios