ನವದೆಹಲಿ[ಡಿ.23]: ಲೋಕಸಭೆ ಬಾವಿಗಿಳಿದು, ಘೋಷಣೆ ಕೂಗಿ ಪ್ರತಿಭಟನೆ ನಡೆಸುವ ಮೂಲಕ ಸುಗಮ ಕಲಾಪಕ್ಕೆ ಅಡ್ಡಿಪಡಿಸುವ ಸಂಸದರನ್ನು ಸದನದಿಂದಲೇ ಹೊರಹಾಕುವ ಪ್ರಯತ್ನವೊಂದು ಆರಂಭವಾಗಿದೆ. ಪದೇಪದೇ ಪ್ರತಿಭಟನೆ ನಡೆಸುವ ಸಂಸದರನ್ನು ತನ್ನಿಂತಾನೆ ಅಮಾನತುಗೊಳಿಸುವ ನಿಯಮವೊಂದನ್ನು ಜಾರಿಗೆ ತರಲು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಒಲವು ತೋರಿದ್ದು, ಶುಕ್ರವಾರದ ನಿಯಮಾವಳಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ.

‘ಯಾವುದೇ ಸದಸ್ಯ ಸದನದ ಬಾವಿಗೆ ಇಳಿದರೆ ಅಥವಾ ಘೋಷಣೆಗಳನ್ನು ಕೂಗುವ ಮೂಲಕ ಕಲಾಪಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದರೆ ಅಂತಹ ಸದಸ್ಯರ ಹೆಸರನ್ನು ಸ್ಪೀಕರ್‌ ಹೇಳಬೇಕು. ಆಗ ಸದಸ್ಯರು ಮುಂದಿನ ಐದು ದಿನದ ಕಲಾಪಗಳು ಅಥವಾ ಅಧಿವೇಶನದ ಉಳಿದ ಅವಧಿಗೆ ತನ್ನಿಂತಾನೆ ಅಮಾನತುಗೊಳ್ಳುತ್ತಾರೆ. ಅಂತಹ ಅಮಾನತನ್ನು ಸದನ ಯಾವಾಗ ಬೇಕಾದರೂ ರದ್ದುಗೊಳಿಸಬಹುದು’ ಎಂದು ನಿಯಮ 374ಎ (1) ಹೇಳುತ್ತದೆ. ‘ಸ್ಪೀಕರ್‌ ಹೇಳಿದರೆ’ ಎಂಬ ಅಂಶವನ್ನು ಆ ನಿಯಮದಿಂದ ತೆಗೆಯುವ ಮೂಲಕ ಸದಸ್ಯರು ಧರಣಿಗಿಳಿದರೆ ತನ್ನಿಂತಾನೇ ಅಮಾನತುಗೊಳ್ಳುವಂತೆ ಮಾಡಬೇಕು ಎಂಬುದು ಸ್ಪೀಕರ್‌ ಅವರ ಅಭಿಪ್ರಾಯವಾಗಿದೆ. ಛತ್ತೀಸ್‌ಗಢ ವಿಧಾನಸಭೆಯಲ್ಲಿ ಈಗಾಗಲೇ ಇಂತಹದ್ದೊಂದು ನಿಯಮವಿದೆ.