ನವದೆಹಲಿ(ಜು.25): ಭಯೋತ್ಪಾದನೆ ತಡೆಗಟ್ಟುವ ನಿಟ್ಟಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ವಿಧೇಯಕ (ಯುಎಪಿಎ)ಲೋಕಸಭೆಯಲ್ಲಿ ಪಾಸಾಗಿದೆ. ವಿಪಕ್ಷಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಮಸೂದೆ ಜಾರಿಗೊಳಿಸಿದೆ.

ಈ ಮಧ್ಯೆ ಯುಎಪಿಎ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಸಮಾಜವಾದಿ ಪಕ್ಷದ ಸಂಸದ ಮುಲಾಯಂ ಸಿಂಗ್ ಯಾದವ್, ಮಸೂದೆಯನ್ನು ಬಲವಾಗಿ ವಿರೋಧಿಸಿದ್ದರು. ಮಸೂದೆ ವಿರೋಧಿಸುತ್ತಿದ್ದ ಕಾಂಗ್ರೆಸ್ ಜೊತೆಗೂಡಿ ಮುಲಾಯಂ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಆದರೆ ಮಸೂದೆಯನ್ನು ಮತಕ್ಕೆ ಹಾಕಿದಾಗ ತುಂಬ ವಿಚಿತ್ರ ತಿರುವಿನಲ್ಲಿ ಮುಲಾಯಂ ಮಸೂದೆ ಪರ ಮತ ಚಲಾಯಿಸಿದ್ದಾರೆ. ಹೌದು, ಯುಎಪಿಎ ಮಸೂದೆ ಪರ ಮತ ಚಲಾಯಿಸಿ ಮುಲಾಯಂ ಲೋಕಸಭೆಯನ್ನು ಅಚ್ಚರಿಗೆ ದೂಡಿದ್ದಾರೆ.

ಲೋಕಸಭೆಯಲ್ಲಿ ಎಸ್’ಪಿ ಯುಎಪಿಎ ಮಸೂದೆಯನ್ನು ವಿರೋಧಿಸುತ್ತಿದೆ. ಚರ್ಚೆಯಲ್ಲಿ ಮಸೂದೆ ವಿರುದ್ಧ ಹರಿಹಾಯ್ದಿದ್ದ ಮುಲಾಯಂ, ಕೊನೆಗೆ ಮಸೂದೆಯನ್ನು ಮತಕ್ಕೆ ಹಾಕಿದಾಗ ಅದನ್ನು ಬೆಂಬಲಸುವ ಮೂಲಕ ಕೇಂದ್ರ ಸರ್ಕಾರದ ಪರ ನಿಂತರು.

ಬಳಿಕ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಸೂದೆಯನ್ನು ಬೆಂಬಲಸಿದ ಮುಲಾಯಂ ಸಿಂಗ್ ಅವರಿಗೆ ಧನ್ಯವಾದ ಅರ್ಪಿಸಿದ್ದರು. ಮೋದಿ 1.0 ಸರ್ಕಾರದ ಕೊನೆಯ ಅಧಿವೇಶನದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಮುಲಾಯಂ ಹಾರೈಸಿದ್ದನ್ನು ಇಲ್ಲಿ ಸ್ಮರಿಸಬಹುದು.