ನವದೆಹಲಿ(ಜು.23): ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಕಾನೂನು ಬಾಹಿರ ಚಟುವಟಿಕೆಗಳ ತಿದ್ದುಪಡಿ ವಿಧೇಯಕವನ್ನು ಲೋಕಸಭೆಯಲ್ಲಿ ಅಂಗೀಕರಿಸಿದೆ.

ಈ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಯೋತ್ಪಾದನಾ ವಿರೋಧಿ ಕಾನೂನಿನ ತಿದ್ದುಪಡಿಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಯುಎಪಿಎ ತಿದ್ದುಪಡಿ ಮಸೂದೆ ಜಾರಿಯಿಂದ ಕಾನೂನು ಜಾರಿ ಸಂಸ್ಥೆಗಳನ್ನು ಭಯೋತ್ಪಾದಕರಿಗಿಂತ ಒಂದು ಹೆಜ್ಜೆ ಮುಂದಿಡಲು ಸಹಾಯಕವಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಇದೇ ವೇಳೆ ಭಯೋತ್ಪಾದನಾ ವಿರೋಧಿ ಕಾನೂನುಗಳ ದುರುಪಯೋಗ ಸಾಧ್ಯವಿಲ್ಲ ಎಂದಿರುವ ಅಮಿತ್ ಶಾ, ಯಾವುದೇ ಕಾರಣಕ್ಕೂ ಭಯೋತ್ಪಾದನೆ ಚಿಗುರೊಡೆಯಲು ನಾವು ಬಿಡುವುದಿಲ್ಲ ಎಂದು ಗೃಹಸ ಸಚಿವರು ಸ್ಪಷ್ಟಪಡಿಸಿದರು.

ಯುಎಪಿಎ ಕಾನೂನು ಜಾರಿಯಿಂದಾಗಿ ಭಯೋತ್ಪಾದಕರೊಡನೆ ಸಂಪರ್ಕ ಹೊಂದಿದೆವರೆಂದು  ಶಂಕಿಸಲಾಗಿರುವ ವ್ಯಕ್ತಿಯನ್ನು ಉಗ್ರವಾದಿ ಎಂದು ಘೋಷಿಸುವ ಅಧಿಕಾರ ಸರ್ಕಾರಕ್ಕೆ ಲಭಿಸಲಿದೆ.

ಯುಎಪಿಎ ತಿದ್ದುಪಡಿ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಇದೇ ವೇಳೆ ತಿದ್ದುಪಡಿಯನ್ನು ವಿರೋಧಿಸಿದ್ದ ಕಾಂಗ್ರೆಸ್’ನ್ನು ಅಮಿತ್ ಶಾ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.