ಪರಸ್ತ್ರೀ ಜೊತೆ ಪತಿ ಸಂಬಂಧದ ಬಗ್ಗೆ ಪತ್ನಿ ಆರೋಪ, ಪತ್ನಿ ಪರಪುರುಷರ ಜೊತೆ ನಂಟು ಹೊಂದಿರುವ ಬಗ್ಗೆ ಪತಿಯ ಆರೋಪ ಸಾಮಾನ್ಯ. ಆದರೆ ಪಶ್ಚಿಮ ಬಂಗಾಳದಲ್ಲಿ ಈ ಎರಡೂ ಆರೋಪಗಳು ಮಿಳಿತಗೊಂಡ ಘಟನೆಯೊಂದು ನಡೆದಿದೆ.
ಪರಸ್ತ್ರೀ ಜೊತೆ ಪತಿ ಸಂಬಂಧದ ಬಗ್ಗೆ ಪತ್ನಿ ಆರೋಪ, ಪತ್ನಿ ಪರಪುರುಷರ ಜೊತೆ ನಂಟು ಹೊಂದಿರುವ ಬಗ್ಗೆ ಪತಿಯ ಆರೋಪ ಸಾಮಾನ್ಯ. ಆದರೆ ಪಶ್ಚಿಮ ಬಂಗಾಳದಲ್ಲಿ ಈ ಎರಡೂ ಆರೋಪಗಳು ಮಿಳಿತಗೊಂಡ ಘಟನೆಯೊಂದು ನಡೆದಿದೆ. ಇದರ ಜೊತೆಗೆ ರಾಜಕೀಯ ಗದ್ದಲವೂ ಸೇರಿ ಬಂಗಾಳದ ಜನರಿಗೆ ಪುಕ್ಕಟೆ ಮನರಂಜನೆ ಸಿಕ್ಕಿದೆ. ಜೊತೆಗೆ ಈ ಪರಸಂಗ ಪುರಾಣದ ಬಗ್ಗೆ ಟೀವಿಯಲ್ಲಿ ನೇರಪ್ರಸಾರದಲ್ಲೇ ಆರೋಪ, ಪ್ರತ್ಯಾರೋಪ ಕೂಡಾ ವ್ಯಕ್ತವಾಗಿ ಜನ ಉಚಿತವಾಗಿ ಮನರಂಜನೆ ಪಡೆದಿದ್ದಾರೆ.
ಈ ಪ್ರಕರಣದ ಮುಖ್ಯ ಪಾತ್ರಧಾರಿ, ಪಶ್ಚಿಮ ಬಂಗಾಳದ ಮಾಜಿ ಸಚಿವ ಮತ್ತು ಕೋಲ್ಕತಾದ ಮಾಜಿ ಮೇಯರ್ ಸೋವನ್ ಚಟರ್ಜಿ. ಗುರುವಾರ ಟೀವಿ ವಾಹಿನಿಯೊಂದರ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೋವನ್ ಚಟರ್ಜಿ, ತಮ್ಮ ಪತ್ನಿಯ ವಿರುದ್ಧ ದಾಂಪತ್ಯ ದ್ರೋಹ, ಹಣಕಾಸು ದುರ್ಬಳಕೆ ಹಾಗೂ ತನ್ನ ಸ್ನೇಹಿತೆಯ ಹತ್ಯೆಗೆ ಸುಪಾರಿ ಕೊಟ್ಟಿದ್ದಾಗಿ ಆರೋಪಿಸಿದರು. ಆದರೆ, ಕೆಲ ಹೊತ್ತಿನಲ್ಲಿ ಅದೇ ಚಾನೆಲ್‌ನಲ್ಲಿ ಕಾಣಿಸಿಕೊಂಡ ಸೋವನ್ ಚಟರ್ಜಿ ಪತ್ನಿ ರತ್ನಾ, ಈ ಎಲ್ಲಾ ಆರೋಪವನ್ನು ನಿರಾಕರಿಸಿದರು. ಅಷ್ಟುಮಾತ್ರವಲ್ಲ, ತಮ್ಮ ಪತಿ, ಪರಸ್ತ್ರೀ ಜೊತೆಗೆ ಸಂಗ ಹೊಂದಿದ್ದಾರೆ ಎಂದು ಆರೋಪಿಸುವ ಮೂಲಕ ಪತಿಯ ಮಾನ ಹರಾಜು ಹಾಕಿದರು. ಇದರಿಂದಾಗಿ ಯಾವ ರಿಯಾಲಿಟಿ ಶೋ ಧಾರಾವಾಹಿಗೂ ಕಡಿಮೆ ಇಲ್ಲದಂತೆ ಗಂಡ ಹೆಂಡತಿಯ ಜಗಳಕ್ಕೆ ಟೀವಿ ಚರ್ಚೆ ಸಾಕ್ಷಿಯಾಯಿತು.
ಇದನ್ನೂ ಓದಿ: ಖಾಸಗಿ ಕಾರಣ : ಸಚಿವ ಸ್ಥಾನ ತೊರೆದ ಮುಖಂಡ
ಸೋವನ್‌ರ ಪರಸ್ತ್ರೀ ಪುರಾಣ ಅರಿವಾದ ಬಳಿಕ ಅವರನ್ನು ಸಿಎಂ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ಸಚಿವ ಹುದ್ದೆಯಿಂದ ತೆಗೆದು ಹಾಕಿದ್ದರು. ಜೊತೆಗೆ ಮೇಯರ್ ಹುದ್ದೆಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಗುರುವಾರದವರೆಗೂ ಮೇಯರ್ ಹುದ್ದೆಗೆ ರಾಜೀನಾಮೆ ನೀಡಲು ನಿರಾಕರಿಸಿದ್ದ ಸೋವನ್, ಗುರುವಾರ ಸಂಜೆ ವೇಳೆ ಮೇಯರ್ ಹುದ್ದೆಗೂ ರಾಜೀನಾಮೆ ಸಲ್ಲಿಸಿದ್ದಾರೆ.
