ನವದೆಹಲಿ [ಆ.10]: ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನತೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. 

ಉಂಟಾಗಿರುವ ಪ್ರವಾಹ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್‌ನ 83 ತಂಡಗಳು ಪಾಲ್ಗೊಂಡಿವೆ. ನಾಲ್ಕು ರಾಜ್ಯಗಳಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡಿರುವವರ ರಕ್ಷಣೆ ಕಾರ್ಯ ನಿರ್ವಹಿಸುತ್ತಿವೆ ಎಂದು ಶುಕ್ರವಾರ ಕೇಂದ್ರ ಸಚಿವಾಲಯ ತಿಳಿಸಿದೆ.

ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ನಿತ್ಯಾನಂದ ರೈ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ದೇಶದ ಬೇರೆ ಬೇರೆ ಭಾಗಗಳಲ್ಲಿ ಭಾರೀ ಮಳೆಯಿಂದ ನಿರ್ಮಾಣವಾದ ಪ್ರವಾಹ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲಾಗಿದೆ. ಮುಂದೆ ಬರಬಹುದಾದ ಸವಾಲುಗಳ ಬಗ್ಗೆ ಹಾಗೂ ಇದನ್ನು ನಿಭಾಯಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಈ ವೇಳೆ ಪ್ರವಾಹ ಪೀಡಿತ ರಾಜ್ಯಗಳಿಗೆ ಕೇಂದ್ರ ಸರ್ಕಾರ ಕಳುಹಿಸಿರುವ ರಕ್ಷಣಾ ಪಡೆಗಳ ಕಾರ್ಯ ನಿರ್ವಹಣೆಯ ಕುರಿತಾಗಿಯೂ ಮಾಹಿತಿ ಪಡೆದುಕೊಳ್ಳಲಾಗಿದೆ. ಅಲ್ಲದೆ, ಎನ್‌ಡಿಆರ್‌ಎಫ್‌ ಪ್ರಧಾನ ನಿರ್ದೇಶಕರು ಕಾರ್ಯಾಚರಿಸುತ್ತಿರುವ ತಂಡಗಳಿಗೆ ನೀಡಬೇಕಾದ ಎಲ್ಲಾ ರೀತಿಯ ಮಾಹಿತಿ ನೀಡಿ, ರಕ್ಷಣಾ ಕಾರ್ಯದ ಬಗ್ಗೆಯೂ ನಿರ್ದೇಶನ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ರಾಜ್ಯದ ಪ್ರವಾಹಕ್ಕೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದಲ್ಲದೇ ಆರ್ಮಿ, ನೇವಿ, ಏರ್‌ಫೋಸ್‌ ಮತ್ತು ಕೋಸ್ಟ್‌ ಗಾರ್ಡ್‌ಗೆ ಸೇರಿದ 173 ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಎನ್‌ಡಿಆರ್‌ಎಫ್‌ನ ಪ್ರತಿ ತಂಡ 45 ಸದಸ್ಯರನ್ನೊಳಗೊಂಡಿದೆ. ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದ 82,000 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಹೆಚ್ಚುಕಡಿಮೆ 2,325 ಮಂದಿಯನ್ನು ಪ್ರವಾಹದಿಂದ ರಕ್ಷಿಸಲಾಗಿದೆ. ಗೃಹ ಸಚಿವ ಅಮಿತ್‌ ಶಾ ಅವರು ಈ ಬಗ್ಗೆ ಕ್ಷಣಕ್ಷಣಕ್ಕೂ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.