ನವದೆಹಲಿ: ಇನ್ನು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಸಾಲುಗಟ್ಟಿ ನಿಲ್ಲಬೇಕೆಂಬ ಅನಿವಾರ್ಯತೆ ವಾಹನ ಸವಾರರಿಂದ ದೂರವಾಗಲಿದೆ. ಹೌದು, ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರವು ಮೊಬೈಲ್ ವ್ಯಾಲೆಟ್‌ಗಳು, ಕ್ರೆಡಿಟ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಗಳಿಂದಲೇ ನೇರವಾಗಿ ಪಾವತಿಯಾಗಲಿದ್ದು, ವಾಹನಗಳಿಗೆ ರಿಚಾರ್ಜ್ ಆಧಾರಿತ ಫಾಸ್ಟ್ ಟ್ಯಾಗ್ ಸಹ ಅಗತ್ಯವಿರುವುದಿಲ್ಲ.

ಈ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ‘ಈ ಸಂಬಂಧದ ಮೊಬೈಲ್ ಆ್ಯಪ್ ಅನ್ನು ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿ ತಮ್ಮ ವಾಹನದ ಸಂಖ್ಯೆ ಸೇರಿದಂತೆ ಇತರ ಮಾಹಿತಿಗಳನ್ನು ದಾಖಲಿಸಬೇಕು.

ಬಳಿಕ ವಾಹನದ ಸಂಖ್ಯೆಯೊಂದಿಗೆ ಮೊಬೈಲ್ ನೋಂದಣಿಯಾಗಲಿದೆ. ಈ ನಂತರ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾ ಹಣವು ಮೊಬೈಲ್ ವ್ಯಾಲೆಟ್‌ನಿಂದ ಕಡಿತವಾಗಲಿದೆ. ವಾಹನವು ಟೋಲ್ ಪ್ಲಾಜಾ ತಲುಪುವಷ್ಟರಲ್ಲಿ, ಮೊಬೈಲ್’ನಲ್ಲಿ ಕ್ಯೂಆರ್ ಕೋಡ್ ಜನರೇಟ್ ಆಗಲಿದ್ದು, ಅದನ್ನು ಟೋಲ್ ಪ್ಲಾಜಾದಲ್ಲಿ ಸ್ಕ್ಯಾನ್ ಮಾಡಬೇಕು,’ ಎಂದು ತಿಳಿಸಿದ್ದಾರೆ.

ಮತ್ತೊಂದು ವ್ಯವಸ್ಥೆಯೆಂದರೆ, ಮೊಬೈಲ್ ಆ್ಯಪ್ ಅನ್ನು ಬ್ಯಾಂಕ್ ಖಾತೆಯಿಂದ ನೇರವಾಗಿ ಪಾವತಿಯಾಗುವ ವ್ಯವಸ್ಥೆಯಾಗಿರುವ ಯುಪಿಐ ಜತೆ ಲಿಂಕ್ ಮಾಡಬೇಕು. ಇದರಿಂದ ಈ ವಾಹನ ಟೋಲ್ ಪ್ಲಾಜಾ ತಲುಪುತ್ತಿದ್ದಂತೆ ವಾಹನದ ನಿರ್ದಿಷ್ಟ ಟೋಲ್ ದರವು ಯುಪಿಐ ವ್ಯವಸ್ಥೆಯಿಂದ ಕಡಿತಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ನೂತನ ಐದು ಮಾದರಿಯ ಟೋಲ್ ಪಾವತಿ ವ್ಯವಸ್ಥೆಗಳನ್ನು ಬೆಂಗಳೂರು-ಚೆನ್ನೈ, ದೆಹಲಿ-ಮುಂಬೈ, ದೆಹಲಿ-ಚಂಡೀಗಢ ಮತ್ತು ದೆಹಲಿ-ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಆದಾಗ್ಯೂ, ಹೆದ್ದಾರಿಗಳಲ್ಲಿನ ಟೋಲ್ ಕಲೆಕ್ಷನ್ ವ್ಯವಸ್ಥೆಯನ್ನು ಕೈಬಿಡುವ ಪ್ರಸ್ತಾಪವಿಲ್ಲ ಎಂದೂ ಎನ್‌ಎಚ್‌ಎಐ ತಿಳಿಸಿದೆ.