ಅಕ್ರಮ ವ್ಯವಹಾರದ ಮೂಲಕ ಲಂಡನ್‌ನಲ್ಲಿ ಐಷಾರಾಮಿ ಫ್ಲಾಟ್ ಖರೀದಿಸಿದ್ದ ಪ್ರಕರಣದಲ್ಲಿ ಪಾಕಿಸ್ತಾನ ಮಾಜಿ ಪ್ರಧಾನಿ ಷರೀಫ್ ಕುಟುಂಬಕ್ಕೆ ವಿಧಿಸಿದ್ದ ಶಿಕ್ಷೆಯನ್ನು ಅಮಾನತ್ತಿನಲ್ಲಿ ಇರಿಸಲಾಗಿದೆ.
ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಕುಟುಂಬ ಸದಸ್ಯರ ಬಿಡುಗಡೆಗೆ ಇಲ್ಲಿನ ಹೈಕೋರ್ಟ್ ಆದೇಶಿಸಿದೆ. ಅಕ್ರಮ ವ್ಯವಹಾರದ ಮೂಲಕ ಲಂಡನ್‌ನಲ್ಲಿ ಐಷಾರಾಮಿ ಫ್ಲಾಟ್ ಖರೀದಿಸಿದ್ದ ಪ್ರಕರಣದಲ್ಲಿ ಷರೀಫ್ ಕುಟುಂಬಕ್ಕೆ ವಿಧಿಸಿದ್ದ ಶಿಕ್ಷೆಯನ್ನು ಅಮಾನತ್ತಿನಲ್ಲಿ ಇರಿಸಿ ಆದೇಶಿಸಿದೆ.
ತಮಗೆ ಶಿಕ್ಷೆ ವಿಧಿಸಿದ್ದ ಭ್ರಷ್ಟಾಚಾರ ನಿಗ್ರಹ ಕೋರ್ಟ್‌ನ ತೀರ್ಪು ಪ್ರಶ್ನಿಸಿ ಷರೀಫ್, ಅವರ ಮಗಳು ಮರ್ಯಾಂ, ಅಳಿಯ ಕ್ಯಾ.(ನಿವೃತ್ತ) ಮುಹಮ್ಮದ್ ಸಫ್ದರ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ. ರಿಟ್ ಅರ್ಜಿ ಸ್ವೀಕರಿಸಲಾಗಿದೆ, ಮೇಲ್ಮನವಿ ಅರ್ಜಿಯ ಅಂತಿಮ ವಿಚಾರಣೆ ಪೂರ್ಣಗೊಳ್ಳುವವರೆಗೆ ಎನ್‌ಎಬಿ ಘೋಷಿಸಿರುವ ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ರಾವಲ್ಪಿಂಡಿಯ ಅಡಿಯಾಲ ಜೈಲಿನಿಂದ ನವಾಜ್ ಕುಟುಂಬದ ಬಿಡುಗಡೆಗೂ ಆದೇಶಿಸಲಾಗಿದೆ. 5 ಲಕ್ಷ ರು. ಜಾಮೀನು ಬಾಂಡ್ ಸಲ್ಲಿಕೆಗೆ ಕೋರ್ಟ್ ನಿರ್ದೇಶಿಸಿದೆ.
ನವಾಜ್ ಷರೀಫ್‌ರ ಪತ್ನಿ ಕುಲ್ಸೂಂ ಲಂಡನ್‌ನಲ್ಲಿ ಕ್ಯಾನ್ಸರ್‌ನಿಂದಾಗಿ ಸಾವಿಗೀಡಾದ ವಾರದೊಳಗೆ ಹೈಕೋರ್ಟ್ ಆದೇಶ ಹೊರಬಿದ್ದಿದೆ. ಪರೋಲ್ ಮೇಲೆ ಬಿಡುಗಡೆಯಾಗಿದ್ದ ಬಂಧಿತರು ಸೋಮವಾರವಷ್ಟೇ ಜೈಲಿಗೆ ಮರಳಿದ್ದರು.
ಎನ್‌ಎಬಿ ಕೋರ್ಟ್ ಜು.6ರಂದು ನವಾಜ್, ಮರ್ಯಾಂ, ಸಫ್ದರ್‌ಗೆ ಕ್ರಮವಾಗಿ 11, 8 ಮತ್ತು 1 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ನವಾಜ್ ಕುಟುಂಬದ ವಿರುದ್ಧ 2016ರ ಪನಾಮ ಹಗರಣದ ಹಿನ್ನೆಲೆಯಲ್ಲಿ ದಾಖಲಾಗಿರುವ ಇನ್ನೂ ಎರಡು ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ಬಾಕಿಯಿದೆ. ಹಾಲಿ ಪ್ರಕರಣದ ಅಂತಿಮ ತೀರ್ಪು ಹೊರಬೀಳುವವರೆಗೆ ನವಾಜ್ ಕುಟುಂಬಕ್ಕೆ ಕೊಂಚ ರಿಲೀಫ್ ದೊರಕಿದಂತಾಗಿದೆ.
